ವಾಷಿಂಗ್ಟನ್: ಜಾಗತಿಕ ತಾಪಮಾನ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ವೇಗದಲ್ಲಿ ಏರಿಕೆಯಾಗುತ್ತಿದ್ದು, ಇದನ್ನು ನಿಯಂತ್ರಿಸಲು ವಿಶ್ವ 18 ತಿಂಗಳಲ್ಲಿ ಕೈಗೊಳ್ಳುವ ನಿರ್ಧಾರ ಅತ್ಯಂತ ಮಹತ್ವದ್ದಾಗಿರಲಿದೆ. 2030ರ ವೇಳೆಗೆ ಜಾಗತಿಕ ತಾಪಮಾನ ಏರಿಕೆಯನ್ನು ಶೇ. 50ರಷ್ಟು ಕಡಿತಗೊಳಿಸಬೇಕಿದೆ ಎಂದು ಪರಿಸರ ವಿಜ್ಞಾನಿಗಳು ಸೂಚಿಸಿದ್ದಾರೆ. ಸದ್ಯದ ಯೋಜನೆಯಲ್ಲೇ ಮುಂದುವರಿ ದರೆ 2100ರ ವೇಳೆಗೆ
3 ಸೆಂಟಿಗ್ರೇಡ್ ಉಷ್ಣಾಂಶ ಏರಿಕೆ ಆಗುತ್ತದೆ. ಇದನ್ನು 1.5 ಸೆಂಟಿಗ್ರೇಡ್ ಏರಿಕೆಗೆ ನಿಯಂತ್ರಿಸಬೇಕಿದ್ದು, ಇದಕ್ಕೆ ಕಠಿನ ನೀತಿ ರೂಪಿಸಬೇಕಿದೆ ಎಂದಿದ್ದಾರೆ ವಿಜ್ಞಾನಿಗಳು. ಈ ಹಿಂದೆ 1 ಸೆಂ. ಕಡಿತಗೊಳಿಸುವ ಬಗ್ಗೆ ನಿರ್ಧಾರ ಮಾಡಲಾಗಿತ್ತು.
ಸಾಮಾನ್ಯವಾಗಿ ದೇಶಗಳು 5 ಅಥವಾ 10 ವರ್ಷಗಳ ರೂಪುರೇಷೆ ತಯಾರಿಸುತ್ತವೆ. ಇದನ್ನು ವಿಶ್ವಸಂಸ್ಥೆಯ ಹವಾಮಾನ ವೈಪರೀತ್ಯ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಈ ಬಾರಿ 2020ರ ಅಂತ್ಯದಲ್ಲಿ ಸಭೆ ನಡೆಯಲಿದ್ದು, ಎಲ್ಲ ದೇಶಗಳು ತಮ್ಮ ಯೋಜನೆಗಳನ್ನು ಸಭೆಯಲ್ಲಿ ಮಂಡಿಸಬೇಕಿದೆ. 2020ರ ಸಭೆಗೆ ಪೂರ್ವಭಾವಿಯಾಗಿ ಸೆಪ್ಟಂಬರ್‌ನಲ್ಲಿ ವಿಶ್ವಸಂಸ್ಥೆ ಸಭೆ ನಡೆಸಲಿದೆ. ಅಂದಿನಿಂದ 2020ರ ಕೊನೆಯವರೆಗೂ ಈ ಕುರಿತ ಸಭೆಗಳು ವಿವಿಧ ದೇಶಗಳ ಮುಖ್ಯಸ್ಥರೊಂದಿಗೆ ನಡೆಯಲಿವೆ. ಈ ವೇಳೆ ಸ್ಪಷ್ಟ ರೂಪುರೇಷೆ ಸಿದ್ಧಪಡಿಸುವ ದೇಶಗಳು ಮಾತ್ರ ಭಾಗವಹಿಸಬೇಕು ಎಂದು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಹೇಳಿದ್ದಾರೆ. 2015ರಲ್ಲಿ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದ ನಂತರದಿಂದಲೂ ಹಲವು ದೇಶಗಳು ಈ ನೀತಿ ಸಡಿಲಗೊಳಿಸುವ ಮಾತುಕತೆ ನಡೆಸುತ್ತಿವೆ. ಅಮೆರಿಕ ಇದರಿಂದ ಹೊರಬಂದಿದೆ.