Advertisement

ದೇಶಪ್ರೇಮ ಮೂಡಿಸಲು ಅಮೃತೋತ್ಸವ

05:57 PM Aug 11, 2022 | Team Udayavani |

ನರಗುಂದ: ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸುವ ಜೊತೆಗೆ ನಾಡು, ನೆಲ, ಜಲದ ಬಗ್ಗೆ ಗೌರವ ಮೂಡಿಸುವುದು ಹಾಗೂ ಸಮೃದ್ಧ ಭಾರತ ನಿರ್ಮಾಣಕ್ಕಾಗಿ ಹೊಸ ಪೀಳಿಗೆಯಾದ ಇಂದಿನ ಯುವಕರಲ್ಲಿ ದೇಶಪ್ರೇಮ ಬಡಿದೆಬ್ಬಿಸುವುದೇ ಅಮೃತ ಮಹೋತ್ಸವದ ಮೂಲ ಉದ್ದೇಶ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

Advertisement

ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಆಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ನಡೆಯುತ್ತಿರುವ ಸ್ವಾತಂತ್ರ್ಯ ಅಮೃತ ಮಹೋತ್ಸವ ರಾಷ್ಟ್ರಪ್ರೇಮದ ಕಾರ್ಯಕ್ರಮ ಎಂದರು.

ಆ.13ರ ಬೆಳಿಗ್ಗೆಯಿಂದ ಆ.15ರ ಸಾಯಂಕಾಲದವರೆಗೆ ಪ್ರತಿಯೊಬ್ಬ ಭಾರತೀಯರು ಮನೆ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ನಾವು ದೇಶಪ್ರೇಮ ಮೆರೆಯಬೇಕಾಗಿದೆ. ಇದಕ್ಕಾಗಿ ಧ್ವಜ ಸಂಹಿತೆಯನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದೆ. ಗದಗ ಜಿಲ್ಲೆಯಲ್ಲಿ ಅಮೃತ ಮಹೋತ್ಸವ ಸಂಪೂರ್ಣ ಅರ್ಥಪೂರ್ಣವಾಗಿ ಆಚರಿಸಲು ಎಲ್ಲ ಸಿದ್ಧತೆ ನಡೆಸಲಾಗಿದೆ. ನರಗುಂದ ಮತಕ್ಷೇತ್ರದಲ್ಲಿ 34,500 ರಾಷ್ಟ್ರಧ್ವಜ ವಿತರಿಸಲಾಗುತ್ತಿದೆ ಎಂದು ಸಚಿವ ಸಿ.ಸಿ.ಪಾಟೀಲ ಹೇಳಿದರು.

ತಿರಂಗಾ ಯಾತ್ರೆ ಯಶಸ್ವಿಗೊಳಿಸಿ: ಆ.12ರಂದು ಮತಕ್ಷೇತ್ರದ ಹೊಂಬಳ ಗ್ರಾಮ ಹಾಗೂ ಆ.13ರಂದು ನರಗುಂದ ನಗರದಲ್ಲಿ 100 ಮೀಟರ್‌ ಉದ್ದದ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರಾರಂಭಿಸಿ ಉಡಚಾ ಪರಮೇಶ್ವರಿ ದೇವಸ್ಥಾನದ ಮಾರ್ಗವಾಗಿ ಬಾಬಾಸಾಹೇಬ ಪುತ್ಥಳಿ, ಬಸವೇಶ್ವರ ವೃತ್ತ, ಶಿವಾಜಿ ವೃತ್ತದ ಮೂಲಕ ಚೆನ್ನಮ್ಮ ವೃತ್ತಕ್ಕೆ ಸಮಾಪ್ತಿಗೊಳ್ಳಲಿದೆ ಎಂದರು.

ತಿರಂಗಾ ಯಾತ್ರೆಯಲ್ಲಿ ಶಾಲಾ ಮಕ್ಕಳು, ನಾಗರಿಕರು, ನಮ್ಮ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನಸಮೂಹ ಪಾಲ್ಗೊಂಡು ಯಶಸ್ವಿಗೊಳ್ಳಲು ಕೈಜೋಡಿಸಬೇಕು. ಹೊಂಬಳ ಗ್ರಾಮದಲ್ಲಿ ತಿರಂಗಾ ಯಾತ್ರೆ ಅಂಗವಾಗಿ 150 ಜನ ಮಾಜಿ ಯೋಧರನ್ನು ಗೌರವಿಸಲಾಗುವುದು ಎಂದು ಹೇಳಿದರು.

Advertisement

ಬಿಜೆಪಿ ಜಿಲ್ಲಾಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ, ನರಗುಂದ ಬಿಜೆಪಿ ಮಂಡಲ ಅಧ್ಯಕ್ಷ ಗುರಪ್ಪ ಆದೆಪ್ಪನವರ, ಪ್ರದೀಪ ಲಿಂಗದಾಳ, ಶಿವಕುಮಾರ ನೀಲಗುಂದ, ಪ್ರದೀಪ ನವಲಗುಂದ, ಸಂಭಾಜಿ ಕಾಶೀದ, ಹನುಮಂತ ಹವಾಲ್ದಾರ, ಮಹೇಶ ಹಟ್ಟಿ, ಬಿ.ಜಿ.ಸುಂಕದ, ಮಂಜುನಾಥ ಮೆಣಸಗಿ, ಸಿದ್ದೇಶ ಹೂಗಾರ, ಶರಣು ಪಿಡ್ಡನಾಯ್ಕರ, ಶಿವು ಅಂಗಡಿ, ರಮೇಶ ಪಲ್ಲೇದ, ವಿಠ್ಠಲ ಹವಾಲ್ದಾರ ಮುಂತಾದವರಿದ್ದರು.

ಆ.12ರಂದು ಮತಕ್ಷೇತ್ರದ ಹೊಂಬಳ ಗ್ರಾಮ ಹಾಗೂ ಆ.13ರಂದು ನರಗುಂದ ನಗರದಲ್ಲಿ 100 ಮೀಟರ್‌ ಉದ್ದದ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಹೊಂಬಳ ಗ್ರಾಮದಲ್ಲಿ ತಿರಂಗಾ ಯಾತ್ರೆ ಅಂಗವಾಗಿ 150 ಜನ ಮಾಜಿ ಯೋಧರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. -ಸಿ.ಸಿ.ಪಾಟೀಲ, ಲೋಕೋಪಯೋಗಿ ಸಚಿವರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next