Advertisement

ಅಮೃತ ಗ್ರಾಮ ಪಂಚಾಯತ್‌ ಯೋಜನೆ; ಕರಾವಳಿ ಜಿಲ್ಲೆಯ ಪಂಚಾಯತ್‌ಗಳ ಸಾಧನೆ

10:57 AM Jan 05, 2023 | Team Udayavani |

ಉಡುಪಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಘೋಷಣೆ ಮಾಡಿದ್ದ ಅಮೃತ ಗ್ರಾಮ ಯೋಜನೆಯ ಮೊದಲ ಹಂತದಲ್ಲಿ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಆಯ್ಕೆಯಾಗಿರುವ ಗ್ರಾ.ಪಂ. ಗಳು ಶೇ. 100ರಷ್ಟು ಸಾಧನೆ ಮಾಡಿದ್ದು, ಸರಕಾರದಿಂದ ಪ್ರೋತ್ಸಾಹಧನ ಪಡೆದುಕೊಂಡಿವೆ.

Advertisement

ಉಡುಪಿ ಜಿಲ್ಲೆಯ 155 ಗ್ರಾ.ಪಂ. ಗಳಲ್ಲಿ 18ನ್ನು ಹಾಗೂ ದ.ಕ. ಜಿಲ್ಲೆಯ 27 ಗ್ರಾ.ಪಂ.ಗಳಲ್ಲಿ 27ನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿತ್ತು. ಆಯ್ಕೆಯಾದ ಗ್ರಾಮಗಳಲ್ಲಿ ನಿರ್ದಿಷ್ಟ ಮೂಲಸೌಕರ್ಯಗಳು ಕಡ್ಡಾಯವಾಗಿ ಒದಗಿಸಬೇಕು ಎಂಬ ನಿರ್ದೇಶನವನ್ನು ನೀಡಲಾಗಿತ್ತು. ಅದರಂತೆ ಉಭಯ ಜಿಲ್ಲೆಗಳ ಅಮೃತಗ್ರಾಮ ಯೋಜನೆಯ ಗ್ರಾ.ಪಂ.ಗಳಲ್ಲಿ ಅಳವಡಿಸಿರುವ ವ್ಯವಸ್ಥೆಯ ಪೂರ್ಣ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು.

ಗದಗದಲ್ಲಿರುವ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ವಿಶ್ವವಿದ್ಯಾನಿಲಯದ ಅಧಿಕಾರಿಗಳು ಆಯ್ಕೆಯಾಗಿರುವ ಗ್ರಾ.ಪಂ.ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ನೀಡಿದ್ದಾರೆ. ಸರಕಾರವು ಉಭಯ ಜಿಲ್ಲೆಯಲ್ಲಿ ಈ ಯೋಜನೆಯಡಿ ಉತ್ತಮ ಸಾಧನೆ ಮಾಡಿದ ಗ್ರಾ.ಪಂ.ಗಳಿಗೆ ತಲಾ 25 ಲ.ರೂ. ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಿದೆ. ಜಿ.ಪಂ. ಮೂಲಕ ಆ ಪ್ರೋತ್ಸಾಹಧನವನ್ನು ಗ್ರಾ.ಪಂ. ಗಳಿಗೂ ಹಂಚಿಕೆ ಮಾಡಿ, ಏನೇನು ಕಾಮಗಾರಿ ನಡೆಸಬೇಕು ಎಂಬುದರ ಪಟ್ಟಿಯನ್ನು ಪಡೆಯಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏನಿದು ಅಮೃತ ಗ್ರಾ.ಪಂ. ಯೋಜನೆ?

Advertisement

ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ರಾಜ್ಯದ ಆಯ್ದ 750 ಗ್ರಾ.ಪಂ. ಗಳನ್ನು ಅಮೃತ ಗ್ರಾಮ ಯೋಜನೆ ಅನುಷ್ಠಾನದ ಘೋಷಣೆಯನ್ನು ಮುಖ್ಯಮಂತ್ರಿಯವರು 2021ರ ಆಗಸ್ಟ್‌ 15ರಂದು ಮಾಡಿದ್ದರು. ಈ ಗ್ರಾ.ಪಂ.ಗಳಲ್ಲಿ ಬೀದಿ ದೀಪ, ಪ್ರತೀ ಮನೆಗೆ ಕುಡಿಯುವ ನೀರು, ಶೇ. 100ರಷ್ಟು ಘನತ್ಯಾಜ್ಯ ವಿಂಗಡನೆ ಮತ್ತು ವಿಲೇವಾರಿ, ತ್ಯಾಜ್ಯ ನೀರಿನ ವೈಜ್ಞಾನಿಕ ವಿಲೇವಾರಿ, ಸೌರವಿದ್ಯುತ್‌ ಅವಳವಡಿಕೆ. ಡಿಜಿಟಲ್‌ ಗ್ರಂಥಾಲಯದೊಂದಿಗೆ ಸುಸಜ್ಜಿತ ಶಾಲೆಗಳನ್ನು ಸ್ಥಾಪಿಸಿ, ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವುದಾಗಿದೆ. ಇದಕ್ಕಾಗಿ ರಾಜ್ಯ ಸರಕಾರ 185.62 ಕೋ.ರೂ.ಗಳನ್ನು 750 ಗ್ರಾ.ಪಂ.ಗಳಿಗೆ ಪ್ರೋತ್ಸಾಹಧನವಾಗಿ ಬಿಡುಗಡೆ ಮಾಡಿದೆ.

ಗ್ರಾ.ಪಂ. ಆಯ್ಕೆ ಹೇಗೆ?

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ಆಯ್ಕೆ ಸಮಿತಿಯಲ್ಲಿ ಗ್ರಾಮೀಣ ಪ್ರದೇಶವನ್ನು ಪ್ರತಿನಿಧಿಸುವ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಜಿಲ್ಲಾಧಿಕಾರಿ, ಜಿ.ಪಂ. ಸಿಇಒ, ಪಂಚಾಯತ್‌ ರಾಜ್‌ ಇಲಾಖೆ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಕಾರ್ಯಪಾಲ ಎಂಜಿನಿಯರ್‌ಗಳು ಸದಸ್ಯರಾಗಿದ್ದು, ಜಿ.ಪಂ. ಉಪಕಾರ್ಯದರ್ಶಿ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

ಗ್ರಾಮ ಪಂಚಾಯತ್‌ ವ್ಯಾಪ್ತಿಯ ಜನಸಂಖ್ಯೆ 2,500ಕ್ಕೂ ಅಧಿಕ ಇರಬೇಕು ಮತ್ತು ಪರಿಶಿಷ್ಟ ಜಾತಿ, ಪಂಗಡದವರು ಅಧಿಕವಿರುವ ಗ್ರಾ.ಪಂ.ಗಳಿಗೆ ಆಯ್ಕೆ ವೇಳೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಅಮೃತ ಗ್ರಾ.ಪಂ. ಯೋಜನೆಯಡಿ ಮೊದಲ ಹಂತದಲ್ಲಿ ಶೇ. 100ರಷ್ಟು ಸಾಧನೆ ಮಾಡಲಾಗಿದೆ. ಈಗಾಗಲೇ ಸರಕಾರಕ್ಕೆ ವರದಿಯನ್ನು ಸಲ್ಲಿಸಿದ್ದೇವೆ. ಅದರ ಪರಿಶೀಲನೆಯೂ ನಡೆದು, ಆಯ್ದ ಗ್ರಾ.ಪಂ.ಗಳಿಗೆ ಪ್ರೋತ್ಸಾಹಧನವೂ ಬಿಡುಗಡೆಯಾಗಿದೆ. – ಪ್ರಸನ್ನ ಎಚ್‌., ಜಿ.ಪಂ. ಸಿಇಒ, ಉಡುಪಿ

 

Advertisement

Udayavani is now on Telegram. Click here to join our channel and stay updated with the latest news.

Next