Advertisement

ಅಹಿಂಸೆಯಿಂದಲೇ ಸ್ವಾತಂತ್ರ್ಯ ಸಿಕ್ಕಿದೆ ಎಂಬುದು ಮೂರ್ಖತನ: ದಿಲೀಪ ವೆರ್ಣೇಕರ

12:25 PM Jun 26, 2022 | Team Udayavani |

ಹುಬ್ಬಳ್ಳಿ: ಗಾಂಧೀಜಿಯವರ ಅಹಿಂಸೆ ಯಿಂದಲೇ ಸ್ವಾತಂತ್ರ್ಯ ಸಿಕ್ಕಿಲ್ಲ. ಅಹಿಂಸೆಯಿಂದ ಸ್ವಾತಂತ್ರ್ಯ ಸಿಕ್ಕಿದೆ ಎಂಬುದು ಮೂರ್ಖತನದ್ದು ಎಂದು ಕರ್ನಾಟಕ ವಿಕಾಸ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ದಿಲೀಪ ವೆರ್ಣೇಕರ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ತಾಲೂಕಾಡಳಿತ ಸಂಯುಕ್ತಾಶ್ರಯದಲ್ಲಿ ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಬ್ರಿಟಿಷರ ವಿರುದ್ಧ ಅನೇಕರು ಶಸ್ತ್ರಸಹಿತವಾಗಿ ಹೋರಾಟ ಮಾಡಿದ್ದರು. ಸ್ವಾತಂತ್ರ್ಯ ದೊರೆಯಲು ಅದು ದೊಡ್ಡ ಪಾತ್ರ ವಹಿಸಿತು ಎಂಬುದನ್ನು ಬ್ರಿಟಿಷ್‌ ಅಧಿಕಾರಿಗಳೇ ಒಪ್ಪಿಕೊಂಡಿದ್ದರೆ ಬಗ್ಗೆ ದಾಖಲೆಗಳಿವೆ. ಆದರೆ ಇತಿಹಾಸದಲ್ಲಿ ಸರಿಯಾದ ಮಾಹಿತಿ ನೀಡಿಕೆ ಆಗಿಲ್ಲ ಎಂದರು.

ಸುಮಾರು 2,500 ವರ್ಷಗಳಿಂದಲೂ ಸ್ವಾತಂತ್ರ್ಯ ಹೋರಾಟ ನಡೆಯುತ್ತ ಬಂದಿದೆ. ಅಲೆಕ್ಸಾಂಡರ್‌ ವಿರುದ್ಧ, ಮುಸ್ಲಿಂ ಆಕ್ರಮಕಾರರ ವಿರುದ್ಧ, ಬ್ರಿಟಿಷರ ವಿರುದ್ಧ ನಡೆದ ಹೋರಾಟವೆಲ್ಲವೂ ಸ್ವಾತಂತ್ರ್ಯ ಹೋರಾಟವೇ ಆಗಿದೆ. ಇದು ಶಿಕ್ಷಣದಲ್ಲಿ ಸ್ಪಷ್ಟ ರೂಪದಲ್ಲಿ ಮೂಡಿಸಬೇಕಾಗಿದೆ. ಸುಮಾರು 800 ವರ್ಷಗಳ ಕಾಲ ಮುಸ್ಲಿಂ ಆಕ್ರಮಣಕಾರರು, ಸುಮಾರು 200ಕ್ಕೂ ಹೆಚ್ಚು ವರ್ಷ ಬ್ರಿಟಿಷರು ಭಾರತವನ್ನು ಕೇವಲ ಕುತಂತ್ರದಿಂದ ಆಳಿದ್ದಾರೆ ವಿನಃ ಧರ್ಮ ಮಾರ್ಗದಿಂದ ಅಲ್ಲ ಎಂದು ಹೇಳಿದರು.

ಬ್ರಿಟಿಷರು ಭಾರತಕ್ಕೆ ಬರುವ ಮೊದಲು ವಿಶ್ವದ ಒಟ್ಟು ವ್ಯಾಪಾರದಲ್ಲಿ ಭಾರತದ ಪಾಲು ಶೇ.34 ಇತ್ತು. ಮೈಸೂರಿನಲ್ಲಿರುವಂತಹ ಅರಮನೆ ಪಾಟಲಿಪುತ್ರವೊಂದರಲ್ಲೇ ಸುಮಾರು 400ರಷ್ಟಿತ್ತು. ಬ್ರಿಟಿಷರು ಕೇವಲ ದೇಶದ ಸಂಪತ್ತು ಅಷ್ಟೇ ಲೂಟಿ ಮಾಡದೆ ನಮ್ಮ ಜ್ಞಾನ ಸಂಪತ್ತು ಇಲ್ಲವಾಗಿಸಿ ಗುಲಾಮಿ ಸಂಸ್ಕೃತಿಯ ಶಿಕ್ಷಣ ಬಿತ್ತಿದರು. ಇಂದಿಗೂ ನಾವು ಅದೇ ಶಿಕ್ಷಣ ಕಲಿಯುತ್ತಿದ್ದೇವೆ. ಒಂದೇ ದಿನ 50 ಸಾವಿರ ಜನರನ್ನು ಮತಾಂತರ ಮಾಡಿದ ಟಿಪ್ಪುವನ್ನು ವಿಜೃಂಭಿಸಲಾಗಿದೆ. ಶತ್ರುಗಳನ್ನು ಕೇವಲ ಒನಕೆಯಿಂದ ಕೊಂದ ಒನಕೆ ಓಬವ್ವ ಬಗ್ಗೆ ಸ್ಪಷ್ಟ ಉಲ್ಲೇಖ ಇಲ್ಲವಾಗಿದೆ ಎಂದರು.

ದೇಶದ ಜನತೆ ಖಾದಿ ಬಟ್ಟೆ ಧರಿಸಲು ಮುಂದಾದರೆ ಸಾಕು ಸುಮಾರು 10 ಕೋಟಿ ಜನರಿಗೆ ಉದ್ಯೋಗ ನೀಡಬಹುದು. ವರ್ಷದಲ್ಲಿ ಒಂದು ಜತೆ ಖಾದಿ ಬಟ್ಟೆ ಖರೀದಿಸಿದರೂ ಸುಮಾರು 1 ಕೋಟಿ ಜನರಿಗೆ ಉದ್ಯೋಗ ನೀಡಬಹುದಾಗಿದೆ. ಆದರೆ, ನಾವುಗಳು ಪಾಶ್ಚಿಮಾತ್ಯ ಉತ್ಪನ್ನಗಳಿಗೆ ಮಾರು ಹೋಗಿ ನಮ್ಮತನ ಬಿಟ್ಟಿದ್ದೇವೆ. ನಮ್ಮತನ ಮೈಗೂಡಿಸಿಗೊಂಡು, ಸ್ವದೇಸಿ ವಸ್ತುಗಳನ್ನು ಬಳಸಲು ಮುಂದಾದರೆ ಭಾರತ ಮತ್ತೆ ವಿಶ್ವಗುರು ಆಗುವುದರಲ್ಲಿ ಅನುಮಾನವೇ ಇಲ್ಲ ಎಂದರು.

Advertisement

ಆಕ್ರಮಣಗಳಿಂದ ದೇಶದ ಸಂಸ್ಕೃತಿ-ಪರಂಪರೆ ಜಗಿಲ್ಗ : ಶೆಟ್ಟರ

ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಾಜ್ಯದ ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯರ ಹೋರಾಟ, ತ್ಯಾಗ-ಬಲಿದಾನವಿದೆ. ಕರ್ನಾಟಕದಲ್ಲಿ ಕಿತ್ತೂರು ರಾಣಿ ಚನ್ಮಮ್ಮ, ಸಂಗೊಳ್ಳಿ ರಾಯಣ್ಣರಂತಹ ವೀರರ ಹೋರಾಟ ಸ್ಮರಣೀಯ. ದೇಶದ ಮೇಲೆ ಅನೇಕ ಆಕ್ರಮಣಗಳು ನಡೆದಿವೆ. ನೂರಾರು ವರ್ಷಗಳ ಆಳ್ವಿಕೆ ಮಾಡಿದರೂ ದೇಶದ ಸಂಸ್ಕೃತಿ, ಪರಂಪರೆ ಕಿಂಚಿತ್ತು ಕುಂದಿಲ್ಲ. ದೇಶದ ಇತಿಹಾಸ, ಸಂಸ್ಕೃತಿ, ಪರಂಪರೆ ಬಗ್ಗೆ ಯುವಕರು ಹೆಮ್ಮೆಯೊಂದಿಗೆ ಅಧ್ಯಯನ ಮಾಡಬೇಕು. ಬೆಂಗೇರಿಯ ರಾಷ್ಟ್ರಧ್ವಜ ನಿರ್ಮಾಣ ಕೇಂದ್ರ ಸ್ವಾತಂತ್ರ್ಯ ಹೋರಾಟಕ್ಕೆ ತನ್ನದೇ ಕೊಡುಗೆ ಹಾಗೂ ಸ್ಫೂರ್ತಿ ನೀಡಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಪ್ರಾಸ್ತಾವಿಕ ಮಾತನಾಡಿದರು.

ಉಪ ಮಹಾಪೌರ ಉಮಾ ಮುಕುಂದ, ವಿವಿಧ ನಿಗಮ-ಮಂಡಳಿ ಅಧ್ಯಕ್ಷರಾದ ಈರಣ್ಣ ಜಡಿ, ಸವಿತಾ ಅಮರಶೆಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಎಸ್‌. ಕೆಳದಿಮಠ, ಕಸಾಪ ಜಿಲ್ಲಾಧ್ಯಕ್ಷ ಡಾ| ಲಿಂಗರಾಜ ಅಂಗಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಹುಬ್ಬಳ್ಳಿ ಶಹರ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಇನ್ನಿತರರು ಇದ್ದರು.

ರವಿ ಕುಲಕರ್ಣಿ ನಿರೂಪಿಸಿದರು. ವಿವಿಧ ಶಾಲಾ ಮಕ್ಕಳು ಹಾಗೂ ಕಲಾ ತಂಡಗಳಿಂದ ಆಕರ್ಷಕ ಮೆರವಣಿಗೆ ನಡೆಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಗಾಂಧಿ ವೇಷಧಾರಿ ಮಂಜಪ್ಪ ತಿರ್ಲಾಪುರ ಗಮನ ಸೆಳೆದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next