Advertisement

ಅಮೃತ ಭಾರತ ಯೋಜನೆ :ಮಂಗಳೂರು ಜಂಕ್ಷನ್‌ ರೈಲ್ವೇ ನಿಲ್ದಾಣಕ್ಕೆ ಹೊಸ ರೂಪ

11:27 PM Mar 27, 2023 | Team Udayavani |

ಮಂಗಳೂರು: ಅಮೃತ ಭಾರತ ಯೋಜನೆಯಡಿ ಮೇಲ್ದರ್ಜೆಗೇರಲು ಆಯ್ಕೆ ಆಗಿರುವ ಕೇಂದ್ರ ರೈಲ್ವೇ ಸಚಿವಾಲಯದ ವ್ಯಾಪ್ತಿಯ ಮಂಗಳೂರು ಜಂಕ್ಷನ್‌ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರು ಎದುರಿಸುತ್ತಿರುವ ಹಲವು ಸಮಸ್ಯೆಗಳು ನಿವಾರಣೆಯಾಗುವ ಆಶಾಭಾವನೆ ಮೂಡಿದೆ.

Advertisement

ಪ್ರತಿನಿತ್ಯ ಸಾವಿರಾರು ಪ್ರಯಾಣಿಕರ ಸಂಚಾರದ ಪ್ರಮುಖ ತಂಗುದಾಣವಾಗಿದ್ದರೂ ಸಮರ್ಪಕ ಸಂಪರ್ಕ ವ್ಯವಸ್ಥೆ, ಬಸ್‌ ನಿಲ್ದಾಣ ಮೊದಲಾದ ಮೂಲ ಸೌಕರ್ಯಗಳು ಇಲ್ಲದೆ ಬಳಲುತ್ತಿರುವ ಮಂಗಳೂರು ಜಂಕ್ಷನ್‌ಗೆ ಈ ಯೋಜನೆಯಡಿ ಹೊಸ ರೂಪ ಸಿಗಲಿದೆ. ಇದಕ್ಕಾಗಿ ಈಗಾಗಲೇ ರೂಪುರೇಷೆ ಸಿದ್ಧಗೊಂಡಿದ್ದು ನೀಲ ನಕ್ಷೆಯು ತಯಾರಾಗುತ್ತಿದೆ. ಸದ್ಯ ಪ್ರಕ್ರಿಯೆ ಟೆಂಡರ್‌ ಹಂತದಲ್ಲಿದೆ ಎಂದು ರೈಲ್ವೇ ಪಾಲಕ್ಕಾಡ್‌ ವಿಭಾಗೀಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪಿ. ದೇವದಾನಮ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಅಮೃತ ಭಾರತ ನಿಲ್ದಾಣ ಯೋಜನೆಗೊಳಪಡುವ ಎಲ್ಲ ರೈಲ್ವೇ ನಿಲ್ದಾಣಗಳು ದೀರ್ಘಾವಧಿಯ ಕ್ರಮಗಳೊಂದಿಗೆ ನಿರಂತರ ಅಭಿವೃದ್ಧಿಗೆ ಒಳಪಡಲಿವೆ. ಪ್ರತೀ ನಿಲ್ದಾಣದ ಆವಶ್ಯಕತೆಗಳ ದೃಷ್ಟಿಯಿಂದ ನಿಲ್ದಾಣದ ಪ್ರವೇಶ, ಸಂಚಾರ ಪ್ರದೇಶಗಳು, ಕಾಯುವ ಪ್ರದೇಶ, ಶೌಚಾಲಯಗಳು, ಅಗತ್ಯ ಲಿಫ್ಟ್/ಎಸ್ಕಲೇಟರ್‌ಗಳು, ಸ್ವತ್ಛತೆ, ಉಚಿತ ವೈ-ಫೈ, ಸ್ಥಳೀಯ ಉತ್ಪನ್ನಗಳಿಗೆ “ಒಂದು ಸ್ಟೇಷನ್‌- ಒಂದು ಉತ್ನನ್ನ’ ಯೋಜನೆಯಂತಹ ಕಿಯೋಸ್ಕ್ಗಳು, ಉತ್ತಮ ಪ್ರಯಾಣಿಕ ಮಾಹಿತಿ ಸೌಕರ್ಯಗಳು, ಎಕ್ಸಿಕ್ಯುಟಿವ್‌ ಲಾಂಜ್‌ಗಳು, ವ್ಯಾವಹಾರಿಕ ಸಭೆಗಳಿಗಾಗಿ ನಿಗದಿತ ಸ್ಥಳಾವಕಾಶ, ಲ್ಯಾಂಡ್‌ ಸ್ಕೇಪಿಂಗ್‌ ಮೊದಲಾದ ವ್ಯವಸ್ಥೆಗಳನ್ನು ಸುಧಾರಿಸಲು ಯೋಜನ ವರದಿಗಳನ್ನು ಸಿದ್ಧಪಡಿಸುವುದು ಮತ್ತು ಹಂತಹಂತವಾಗಿ ಅವುಗಳ ಅನುಷ್ಠಾನ ಆಗಲಿದೆ.

ಇದಲ್ಲದೆ ಈಗಿರುವ ಕಟ್ಟಡಗಳ ಸುಧಾರಣೆ, ನಗರದ ಇಕ್ಕೆಲಗಳಿಗೂ ನಿಲ್ದಾಣವನ್ನು ಸಂಯೋಜಿಸುವುದು, ಮಲ್ಟಿಮಾಡಲ್‌ ಇಂಟಗ್ರೇಶನ್‌, ವಿಕಲಚೇತನರಿಗೆ ಸೌಕರ್ಯ, ಸುಸ್ಥಿರ ಮತ್ತು ಪರಿಸರ ಸ್ನೇಹಿ ಕ್ರಮಗಳು, ಅಗತ್ಯಕ್ಕೆ ಅನುಗಣವಾಗಿ ಮೇಲ್ಛಾವಣಿ ಪ್ಲಾಝಾಗಳು ಮೊದಲಾದ ದೀರ್ಘ‌ಕಾಲೀನ ಸೌಲಭ್ಯಗಳನ್ನು ನಿಲ್ದಾಣದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅಂತಿಮಗೊಳಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next