ಮಣಿಪಾಲ: ಕೇಂದ್ರ ಸಂಗೀತ ನಾಟಕ ಅಕಾಡೆಮಿ ವತಿಯಿಂದ ಮಾಹೆ, ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ಸಹಯೋಗದೊಂದಿಗೆ ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ಮಾಹೆ ಕ್ಯಾಂಪಸ್‌ನಲ್ಲಿ ಡಾ| ಟಿಎಂಎ ಪೈ ಸಭಾಂಗಣದಲ್ಲಿ ಆಯೋಜಿಸಿದ “ಅಮೃತ್ ಯುವ ಕಲೋತ್ಸವ 2022-23′ ಸಮಾರೋಪ ಬುಧವಾರ ಜರಗಿತು.
ಮಾಹೆ ರಿಜಿಸ್ಟ್ರಾರ್ ಡಾ| ಗಿರಿಧರ್ ಕಿಣಿ ಮಾತನಾಡಿ, ಭಾರತೀಯ ಸಂಗೀತ, ಎಲ್ಲ ಕಲಾ ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ಪ್ರಸ್ತುತಪಡಿಸಿದ ರೀತಿ ಸೊಗಸಾಗಿತ್ತು. ನೆಲದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಈ ಕಾರ್ಯಕ್ರಮ ಬಿಂಬಿಸಿದೆ ಎಂದರು.
ಭಾರತೀಯ ಸಂಗೀತ ಕಲಾ ಪ್ರಕಾರಗಳು ಭಾವನೆಗಳ ವೇದಿಕೆಯಾಗಿದೆ. ನಾಟ್ಯ ಮತ್ತು ಸಂಗೀತ ನಾಗರಿಕತೆಯನ್ನು ರಂಜಿಸಿಕೊಂಡು ಬರುತ್ತಿರುವ ಅತ್ಯಮೂಲ್ಯ ಕಲೆಗಳಾಗಿವೆ. ಪಾರಂಪರಿಕಾ ಸಂಗೀತ, ನಾಟ್ಯಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಅಮೃತ್ ಯುವ ಕಲೋತ್ಸವ ಅರ್ಥಪೂರ್ಣ ಎಂದು ಮಗಧ ವಿ.ವಿ. ನಿವೃತ್ತ ಪ್ರಾಧ್ಯಾಪಕ ಡಾ| ಅಶೋಕ್ ಕುಮಾರ್ ಸಿನ್ಹಾ ಬಣ್ಣಿಸಿದರು.
ಮಾಹೆ ಸಾಂಸ್ಕೃತಿಕ ಸಂಯೋಜನಾ ಸಮಿತಿ ಅಧ್ಯಕ್ಷೆ ಡಾ| ಶೋಭಾ ಯು. ಕಾಮತ್ ಮಾತನಾಡಿದರು. ಜಿಸಿಪಿಎಎಸ್ ಮುಖ್ಯಸ್ಥ ಪ್ರೊ| ವರದೇಶ್ ಹಿರೇಗಂಗೆ ಸ್ವಾಗತಿಸಿ, ಭ್ರಮರಿ ಶಿವಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.