Advertisement

ಅಮೃತ ಸಂಜೀವಿನಿ; ಅಡ್ಯಾರ್‌ನಲ್ಲಿ ಎರಡು ಕುಟುಂಬಗಳಿಗೆ ನೆರವು

04:10 AM Jun 05, 2018 | Karthik A |

ಮಹಾನಗರ: ಶ್ರೀ ರಾಜಶೇಖರಾನಂದ ಸ್ವಾಮೀಜಿಯ ಮಾರ್ಗದರ್ಶನದಿಂದ ಮುಂದುವರಿಯುತ್ತಿರುವ ‘ಅಮೃತ ಸಂಜೀವಿನಿ ಮಂಗಳೂರು’ ಸಂಘಟನೆಯೂ ಎರಡು ಕುಟುಂಬಗಳಿಗೆ ಮಾಸಿಕ ಯೋಜನೆಯನ್ನು ಇತ್ತೀಚೆಗೆ ಅಡ್ಯಾರ್‌ ಗ್ರಾಮದ ಅಡ್ಯಾರ್‌ ಪದವಿನಲ್ಲಿ ಪ್ರದಾನಿಸಲಾಯಿತು. ಸಂಘಟನೆಯು ಸೇವಾಪಯಣದಲ್ಲಿ 33 ಮಾಸಿಕ ಯೋಜನೆ ಹಾಗೂ 68 ತುರ್ತು ಯೋಜನೆಯ ಮೂಲಕ 101 ಅಶಕ್ತ ಕುಟುಂಬಗಳಿಗೆ 24 ಲಕ್ಷ ರೂ.ಗಳಿಗೂ ಮಿಕ್ಕೂ ಸಹಾಯಧನವನ್ನು ವಿತರಿಸಿದೆ.

Advertisement

ಯೋಜನೆ 1: ಬಡತನದಲ್ಲೇ ಹುಟ್ಟಿದ ಮಾಧವ ಅವರು ದಿನ ಕೂಲಿ ಮಾಡುತ್ತಾ ತನ್ನ ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಒಂದು ಹಳೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರು. ಪುತ್ರ ಡ್ರೈವರ್‌ ಕೆಲಸ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಮನೆಯ ಯಜಮಾನ ಮಾಧವ ಕಿಡ್ನಿ ವೈಫಲ್ಯಕ್ಕೆ ತುತ್ತಾದರು. ಎದೆಗುಂದದೆ ಸಾಲ ಮಾಡಿ ಒಂದು ಮನೆ ನಿರ್ಮಿಸಿದ ಆ ಕುಟುಂಬಕ್ಕೆ ಮನೆ ಯ ಯಜಮಾನಿಯ ಸಾವು ಇನ್ನಷ್ಟು ಅಧೀರರನ್ನಾಗಿಸಿತು. ಮನೆಯೊಡತಿಯ ಕಾರ್ಯಗಳೆಲ್ಲ ಮುಗಿಯುವ ಹೊತ್ತಿಗೆ ಮನೆಯ ಯಜಮಾನ ಮಾಧವ ಅವರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರುವಂತಾಯಿತು. ವಾರಕ್ಕೆ ಡಯಾಲಿಸಿಸ್‌ ಹಾಗೂ ವೈದ್ಯಕೀಯ ಖರ್ಚು ಎಲ್ಲ ಸೇರಿ 5,000 ಮಿಕ್ಕೂ ಖರ್ಚು ಬರುತ್ತಿದ್ದು ಮನೆಯ ಆಧಾರವಾದ ವಸಂತ್‌ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇವರ ಈ ನೋವಿಗೆ ಸ್ಪಂದಿಸುವ ಸಲುವಾಗಿ ಅಮೃತಸಂಜೀವಿನಿ ತನ್ನ ಮಾಸಿಕ ಯೋಜನೆಗೆ ಈ ಕುಟುಂಬವನ್ನು ಆರಿಸಿಕೊಂಡಿದೆ.

ಯೋಜನೆ-2: ಮಂಗಳೂರು ತಾಲೂಕಿನ ಅಡ್ಯಾರು ಗ್ರಾಮದ ಅಡ್ಯಾರ್‌ ಪದವು ನಿವಾಸಿಗಳಾದ ಸತೀಶ್‌ ಹಾಗೂ ಕುಟುಂಬ ತೀರಾ ಬಡತನದಲ್ಲೇ ಕಾಲ ಕಳೆಯುತ್ತಿದೆ. ಹೊಟ್ಟೆ ಪಾಡಿಗಾಗಿ ಮನೆಯ ಯಜಮಾನ ಕೂಲಿ ಕೆಲಸ ಮಾಡುತ್ತಿದ್ದರು. ಕೈ ತುಂಬಾ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಮನೆಯೊಡತಿ ಬೀಡಿ ಕಟ್ಟಿ ಗಂಡನ ಕಷ್ಟಕ್ಕೆ ಅಲ್ಪ ಮಟ್ಟಿಗೆ ಹೆಗಲಾಗುತ್ತಾರೆ. 2 ಹೆಣ್ಣು ಮಕ್ಕಳಿರುವ ಇವರು ಅನೇಕ ವರ್ಷಗಳಿಂದ ಒಂದು ಜೋಪಡಿಯಲ್ಲಿ ಜೀವನ ಸಾಗಿಸುತ್ತಿದ್ದು ಕಷ್ಟ ಅನುಭವಿಸುತ್ತಿದ್ದಾರೆ. ಸದ್ಯ ಸಣ್ಣ ಮನೆ ಕಟ್ಟಲು ಹೊರಟಿರುವ ಈ ಹಿಂದೂ ಕುಟುಂಬದ ಆರ್ಥಿಕ ಪರಿಸ್ಥಿತಿಗೆ ಅಮೃತ ಸಂಜೀವಿನಿ ಸ್ವಲ್ಪ ಮಟ್ಟಿಗೆ ಹೆಗಲಾಗುವ ಉದ್ದೇಶದಿಂದ 33ನೇ ಯೋಜನೆಯನ್ನಾಗಿಸಿ ಸಮಾಜದ ಮುಂದಿಟ್ಟು ಸಶಕ್ತ ಸಮಾಜದಿಂದ ಕೂಡಿಸಿ ಸಂಗ್ರಹವಾದ ಒಟ್ಟು 60,000ರೂ. ಹಣವನ್ನು ಎರಡು ಕುಟುಂಬಗಳಿಗೆ ಎಲ್ಲಾ ಸಂಜೀವಿನಿಗಳ ಉಪಸ್ಥಿತಿಯಲ್ಲಿ ಹಸ್ತಾಂತರ ಮಾಡಲಾಯಿತು.

ಜತೆಗೆ ಅಮೃತಸಂಜೀವಿನಿ ತನ್ನ 66, 67, 68ನೇ ತುರ್ತು ಸೇವ ಯೋಜನೆಗಳನ್ನು ಪೂರೈಸಿದೆ. 66ನೇ ತುರ್ತು ಸೇವಾ ಯೋಜನೆಯಡಿ ಮಗುವಿನ ಅನಾರೋಗ್ಯದ ನಿಮಿತ್ತ ಅಶೋಕ್‌ ಕುತ್ತಾರ್‌ ಅವರಿಗೆ ಸಾಂತ್ವನ ಧನ 5,000ರೂ., 67ನೇ ತುರ್ತು ಸೇವ ಯೋಜನೆಯಡಿ ಅನಾರೋಗ್ಯದ ನಿಮಿತ್ತ ಸಿದ್ದಕಟ್ಟೆ ನಿವಾಸಿ ಜಾನಕಿ ಪೂಜಾರಿ ಅವರಿಗೆ ಚಿಕಿತ್ಸೆ ಖರ್ಚಿಗಾಗಿ ನೀಡಿದ ಧನ ಸಹಾಯ 5,000ರೂ., 68ನೇ ತುರ್ತು ಸೇವ ಯೋಜನೆಯಡಿ ವಿದ್ಯಾಭ್ಯಾಸದ ನಿಮಿತ್ತ ಬಡತನದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿನಿ ಫರಂಗಿಪೇಟೆಯ ಪೂರ್ಣಿಮಾ ಅವರಿಗೆ ಮಾಡಿದ ಸಹಾಯ 5,000 ರೂ.ಧನ ಸಹಾಯ ನೀಡುವುದರೊಂದಿಗೆ ಅಮೃತಸಂಜೀವಿನಿ 33ನೇ ತಿಂಗಳಲ್ಲಿ ಸಹೃದಯಿ ಸಂಜೀವಿನಿಗಳಿಂದ ಸಂಗ್ರಹಿಸಿದ ಒಟ್ಟು 75,000 ರೂ.ಗಳನ್ನು ಅಶಕ್ತರಿಗೆ ನೀಡಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next