Advertisement

MGM ಕಾಲೇಜಿನಲ್ಲಿ ಅಮೃತ ಸಂಗಮ: ಹಳೆ ವಿದ್ಯಾರ್ಥಿಗಳ ನೆನಪು, ಭಾವನೆಗಳ ಸಮಾಗಮ

02:50 PM Dec 23, 2023 | Team Udayavani |

ಉಡುಪಿ: ಮಹಾತ್ಮ ಗಾಂಧಿ ಮೆಮೋರಿಯಲ್‌(ಎಂಜಿಎಂ) ಕಾಲೇಜು 1949ರಲ್ಲಿ ಆರಂಭವಾಗಿ ಪ್ರಸ್ತುತ ವರ್ಷದಲ್ಲಿ ಅಮೃತ ಮಹೋತ್ಸವ ಆಚರಿಸುತ್ತಿದ್ದು, ಶನಿವಾರ ಕಾಲೇಜಿನ ಕ್ಯಾಂಪಸ್‌ ಅಕ್ಷರಶಃ ಹಳೆ ವಿದ್ಯಾರ್ಥಿಗಳ ನೆನಪು, ಭಾವನೆಗಳ ಸಮಾಗಮಕ್ಕೆ ವೇದಿಕೆಯಾಗಿತ್ತು. ಬೆಳಗ್ಗೆಯಿಂದ ಸಂಜೆಯವರೆಗೂ ಕ್ಯಾಂಪಸ್‌ನಲ್ಲಿ, ಕಾಲೇಜಿನ ಸಭಾಂಗಣಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.

Advertisement

ಬೆಳಗ್ಗೆ ಮಾಧವ ರಕ್ಷಾ ಆಡಳಿತ ಸೌಧ ಆವರಣದಲ್ಲಿರುವ ಡಾ| ಟಿಎಂಎ ಪೈ ಅವರ ಪುತ್ಥಳಿಗೆ ಗೌರವಾರ್ಪಣೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಗೀತಾಂಜಲಿ ಸಭಾಂಗಣದಲ್ಲಿ ಹಳೆ ವಿದ್ಯಾರ್ಥಿಗಳ ಕಾಲೇಜಿನ ಬದುಕನ್ನು ನೆನಪಿಸುವ ಫೋಟೋ ಗ್ಯಾಲರಿ ಪ್ರದರ್ಶನ ಉದ್ಘಾಟನೆ ನಡೆಯಿತು.

ನೂತನ ರವೀಂದ್ರ ಮಂಟಪದಲ್ಲಿ ಹಳೇ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟಗಳು, ಪ್ರತಿಭಾ ವೈಭವ ಅತ್ಯಾಕರ್ಷಕವಾಗಿತ್ತು. ಅಮೃತ ಸಂಗದ ಸಭಾ ಕಾರ್ಯಕ್ರಮ ಎಂಜಿಎಂ ಕಾಲೇಜು ವಿಶ್ವಸ್ತ ಮಂಡಳಿಯ ಅಧ್ಯಕ್ಷರಾದ ಟಿ. ಸತೀಶ್‌ ಪೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು. ಪ್ರಸ್ತುತ ಕಾಲೇಜಿನ ಉಪನ್ಯಾಸಕರು, ಸಿಬಂದಿ, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ನೋಂದಣಿ ಪ್ರಕ್ರಿಯೆ, ಕಾರ್ಯಕ್ರಮ ತಯಾರಿಯಲ್ಲಿ ತೊಡಗಿಸಿಕೊಂಡಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾಕಷ್ಟು ಹಳೆ ವಿದ್ಯಾರ್ಥಿಗಳು ಕಾಲೇಜಿನ ಶೈಕ್ಷಣಿಕ ಅಭಿವೃದ್ಧಿಗೆ ದೇಣಿಗೆಯನ್ನು ನೀಡಿದರು.

ಸೆಲ್ಫಿ, ಹರಟೆ, ಕುಣಿತ, ಆಟ: ಕಾಲೇಜಿನಲ್ಲಿ ವಿವಿಧ ಇಸವಿಗಳಲ್ಲಿ ಕಲಿತ ವಿದ್ಯಾರ್ಥಿಗಳು, ಪ್ರಸ್ತುತ ಹೊರ ಜಿಲ್ಲೆ, ರಾಜ್ಯ, ದೇಶ, ವಿದೇಶಗಳಲ್ಲಿ ನೆಲಿಸಿದವರು ಒತ್ತಡದ ಕಾರ್ಯಜೀವನದ ನಡುವೆಯೂ ಪುರುಸೊತ್ತು ಮಾಡಿಕೊಂಡು ಕಾಲೇಜಿನಲ್ಲಿ ವಿದ್ಯಾರ್ಥಿ ಜೀವನದ ನೆನಪು ಮೆಲುಕು ಹಾಕಿ ಸಂಭ್ರಮಿಸಿದರು. ವಿದ್ಯಾರ್ಥಿಗಳಂತೆ ಭಾಗವಹಿಸಿ ಹರಟೆ ಹೊಡೆದು, ಸೆಲ್ಫಿ ತೆಗೆದು ಸಂಭ್ರಮಿಸಿದರು. ಕೆಲವರು ಪದ್ಯ ಹಾಡಿ ರಂಜಿಸಿದರು, ಒಟ್ಟಿಗೆ ಕುಣಿದು, ವಿವಿಧ ಆಟಗಳನ್ನು ಆಡಿದರು.

Advertisement

ಅಮೃತ ಸಂಗಮ ಉದ್ಘಾಟನೆ
ಮುದ್ದಣ ಮಂಟಪ ಸಭಾಂಗಣದಲ್ಲಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಿಂದ ಹಾಗೂ ಕಾಲೇಜಿನ ಪ್ರಥಮ ಬ್ಯಾಚ್‌ನ ವಿದ್ಯಾರ್ಥಿಗಳು ಸೇರಿಕೊಂಡು ಅಮೃತ ಸಂಗಮ ಉದ್ಘಾಟಿಸಿದರು. ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ಕಾರ್ಯದರ್ಶಿ ಬಿ.ಪಿ. ವರದರಾಯ ಪೈ, ಪ್ರಧಾನ ಸಂಘಟಕ ಪ್ರೊ| ಎಂ.ಎಲ್‌. ಸಾಮಗ, ಕಾರ್ಯದರ್ಶಿ ಡಾ| ಎಂ. ವಿಶ್ವನಾಥ ಪೈ, ಖಜಾಂಚಿ ದೀಪಾಲಿ ಕಾಮತ್‌, ಎಂಜಿಎಂ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ, ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ| ದೇವಿದಾಸ್‌ ನಾಯ್ಕ, ಪಿಯು ಕಾಲೇಜು ಪ್ರಾಂಶುಪಾಲೆ ಮಾಲತಿ ದೇವಿ, ನಿವೃತ್ತ ಪ್ರಾಂಶುಪಾಲರಾದ ಶ್ರೀಶಾ ಆಚಾರ್ಯ, ಡಾ| ವಿಶ್ವನಾಥ್‌ ಪೈ, ಕುಸುಮಾ ಕಾಮತ್‌, ಡಾ| ಎಂ. ಜಿ. ವಿಜಯ್‌, ಡಾ| ಎಸ್‌. ಆರ್‌. ಜಯಪ್ರಕಾಶ್‌ ಮಾವಿನಕುಳಿ, ಡಾ| ಸಂಧ್ಯಾ ನಂಬಿಯಾರ್‌ ಉಪಸ್ಥಿತರಿದ್ದರು. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಪೂರ್ಣಾ ಕಾಮತ್‌, ವಿಶ್ವನಾಥ್‌ ಶ್ಯಾನುಭಾಗ್‌ ನಿರೂಪಿಸಿದರು.

ಫೋಟೋ ಗ್ಯಾಲರಿ ಆಕರ್ಷಣೆ
ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಡಿಜಿಟಲ್‌ ಫೋಟೊ ಗ್ಯಾಲರಿ ಗಮನ ಸೆಳೆಯಿತು. ಐದು ಪ್ರಾಜೆಕ್ಟರ್‌ ಸ್ಕ್ರೀನ್‌ಗಳಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕಾಲೇಜು ಆರಂಭಗೊಂಡ ಅನಂತರದ ಶೈಕ್ಷಣಿಕ ಚಟುವಟಿಕೆ, ಗುಂಪುಚಿತ್ರ, ಕ್ರೀಡೆ ದಾಖಲೆ, ವಿವಿಧ ಸಾಧನೆಗಳನ್ನು ಬಿಂಬಿಸುವ ಭಾವಚಿತ್ರಗಳ ಪ್ರದರ್ಶನ ವಿಶೇಷವಾಗಿತ್ತು.

ಅಮೃತ ಮಹೋತ್ಸವ ಸಂದರ್ಭ ಹಳೆ ವಿದ್ಯಾರ್ಥಿಗಳಿಂದ ಆಯೋಜಿಸಿದ ಈ ಅಮೃತ ಸಂಗಮ ಕಾರ್ಯಕ್ರಮಕ್ಕೆ ಪ್ರಥಮ ವರ್ಷದಿಂದ 2022ರ ಬ್ಯಾಚ್‌ನ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಹಳೆ ವಿದ್ಯಾರ್ಥಿಗಳು, ನಿವೃತ್ತ ಪ್ರಾಂಶುಪಾಲರು, ಉಪನ್ಯಾಸಕರು, ಸಿಬಂದಿ ಭಾಗವಹಿಸಿ ಸಂಭ್ರಮಿಸಿದ್ದಾರೆ.
-ಪ್ರೊ| ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಅಧ್ಯಕ್ಷರು, ಹಳೇ ವಿದ್ಯಾರ್ಥಿ ಸಂಘ.

ಇದನ್ನೂ ಓದಿ: Politics; ಪ್ರಾಮಾಣಿಕ ರಾಜಕಾರಣ ಅಸಾಧ್ಯ; ಮುಂದಿನ ಚುನಾವಣೆಯೇ ಕೊನೆ ಸ್ಪರ್ಧೆ: ಯತ್ನಾಳ್

Advertisement

Udayavani is now on Telegram. Click here to join our channel and stay updated with the latest news.

Next