ಚಂಡೀಗಡ/ನವದೆಹಲಿ:ಪ್ರತ್ಯೇಕತಾವಾದಿ ಅಮೃತ್ ಪಾಲ್ ಸಿಂಗ್‌ಗೆ ಪಾಕ್ ಐಎಸ್‌ಐ ಜತೆ ಲಿಂಕ್ ಇದೆ ಎಂಬ ಸುದ್ದಿಗಳಿಗೆ ಪುಷ್ಟಿ ನೀಡುವಂತೆ, ಆತನ ಆಪ್ತ ಸಹಚರ ದಲ್ಜಿಜ್ ಕಾಲ್ಸಿ ಹಾಗೂ ಪಾಕ್ ಭೂಸೇನೆಯ ನಿವೃತ್ತ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಅವರ ಪುತ್ರನಿಗೆ ನಂಟಿರುವ ಕುರಿತು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿವೆ.
ಖಮರ್ ಜಾವೇದ್ ಪುತ್ರ ಸಾದ್ ಬಾಜ್ವಾ ದುಬೈನಲ್ಲಿ ಕಂಪನಿ ಹೊಂದಿದ್ದು, ಆ ಕಂಪನಿ ಜತೆ ಕಾಲ್ಸಿ ಕೂಡ ವಹಿವಾಟು ನಡೆಸುತ್ತಿದ್ದಾನೆ. ಅಲ್ಲದೇ 2 ತಿಂಗಳ ಕಾಲ ದುಬೈಗೂ ಹೋಗಿದ್ದ. ಜತೆಗೆ, ಪಾಕ್ ಐಎಸ್‌ಐ ಜತೆಗೂ ಆತ ಸಂಪರ್ಕ ಹೊಂದಿದ್ದ ಎಂದು ಮೂಲಗಳು ತಿಳಿಸಿವೆ.
ದೆಹಲಿಯಲ್ಲಿ ಪ್ರತ್ಯಕ್ಷ:
ಇದೇ ವೇಳೆ, ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿರುವ ಅಮೃತ್‌ಪಾಲ್ ದಿನಕ್ಕೊಂದು ಊರಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಮಂಗಳವಾರ ದೆಹಲಿಯಲ್ಲಿ ತನ್ನ ಸಹಚರ ಪಾಪಲ್‌ಪ್ರೀತ್ ಸಿಂಗ್ ಜೊತೆ ಟರ್ಬನ್ ಇಲ್ಲದೇ, ಮಾಸ್ಕ್ ಧರಿಸಿಕೊಂಡು ಅಮೃತ್‌ಪಾಲ್ ಪ್ರತ್ಯಕ್ಷನಾಗಿದ್ದಾನೆ.
ಮತ್ತೊಂದು ಗಾಂಧಿ ಪ್ರತಿಮೆ ವಿರೂಪ
ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ವಿವಿ ಕ್ಯಾಂಪಸ್ ಮುಂದಿನ ಮಹಾತ್ಮ ಗಾಂಧಿ ಪ್ರತಿಮೆಯನ್ನು ಮಂಗಳವಾರ ವಿರೂಪಗೊಳಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ಹ್ಯಾಮಿಲ್ಟನ್‌ನಲ್ಲೂ ಗಾಂಧಿ ಪುತ್ಥಳಿಯನ್ನು ಖಲಿಸ್ತಾನಿ ಬೆಂಬಲಿಗರು ಧ್ವಂಸಗೊಳಿಸಿದ್ದರು.
24 ಗಂಟೆಗಳ ಗಡುವು
ಇತ್ತೀಚೆಗಷ್ಟೇ ಅಮೃತ್‌ಪಾಲ್‌ಗೆ ಶರಣಾಗುವಂತೆ ಸೂಚಿಸಿದ್ದ ಸಿಖ್ಖರ ಪರಮೋಚ್ಚ ಸಂಸ್ಥೆ ಅಕಾಲ್ ತಖ್ತ್ ಮಂಗಳವಾರ ಪಂಜಾಬ್ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದೆ. ಅಮೃತ್‌ಪಾಲ್ ಗಲಾಟೆ ವೇಳೆ ನೂರಾರು ಸಿಖ್ ಯುವಕರನ್ನು ಪೊಲೀಸರು ಬಂಧಿಸಿ, ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕೇಸು ದಾಖಲಿಸಿದ್ದಾರೆ. ಇದರಿಂದ ಕೆಂಡಾಮಂಡಲವಾಗಿರುವ ಅಕಾಲ್ ತಖ್¤, “ಹಿಂದೂ ರಾಷ್ಟ್ರದ ಬೇಡಿಕೆ ಇಡುತ್ತಿರುವವರ ವಿರುದ್ಧವೂ ನೀವು ಇಂಥದ್ದೇ ಕ್ರಮ ಕೈಗೊಂಡಿಲ್ಲ ಏಕೆ? ಅವರ ವಿರುದ್ಧವೂ ಎನ್‌ಎಸ್‌ಎ ಅಡಿ ಕೇಸು ಹಾಕುತ್ತೀರಾ ಎಂದು ಪ್ರಶ್ನಿಸಿದೆ. ಜತೆಗೆ, 24 ಗಂಟೆಗಳ ಒಳಗಾಗಿ ಬಂಧಿತ ಯುವಕರನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಗಡುವು ನೀಡಿದೆ.