Advertisement
ಹರಿಯಾಣದ ಗುರಗಾಂವ್‌ನ ಎನ್‌ರಿಚ್ ಸಾಯಿಲ್ ಆ್ಯಂಡ್ ಸೋಲ್ ಕಂಪನಿ ಸಂಸ್ಥಾಪಕ ನಿರ್ದೇಶಕಿ ಪೂರ್ಣಿಮಾ ಸಾವರ್‌ಗಾಂವ್ಕರ್, ಅಡುಗೆ ಮನೆ ಹಾಗೂ ಇನ್ನಿತರ ಒಣ ತ್ಯಾಜ್ಯ ಬಳಕೆಯೊಂದಿಗೆ ತಯಾರಿಸಿದ ಮಣ್ಣು ಮಾರಾಟದ ನವೋದ್ಯಮ ಆರಂಭಿಸಿದ್ದಾರೆ. ಇವರ ಈ ಕಾರ್ಯಕ್ಕೆ ಪ್ರೇರಣೆ, ಮಾರ್ಗದರ್ಶನ ಸಿಕ್ಕಿದ್ದು ಬೆಂಗಳೂರಿನಲ್ಲಿ ಎಂಬುದು ಹೆಮ್ಮೆಯ ಸಂಗತಿ.
Related Articles
Advertisement
ಮಾಡಿದ ಪ್ರಯೋಗ ವಿಸ್ತರಿಸಿದೆ: 2012ರಲ್ಲಿ ಗುರಗಾಂವ್‌ನಲ್ಲಿ ನನ್ನ ಅಡುಗೆ ಮನೆ ಹಸಿ ಹಾಗೂ ಒಣತ್ಯಾಜ್ಯ ಜತೆಗೆ ಒಂದಿಷ್ಟು ತೋಟಗಾರಿಕಾ ತ್ಯಾಜ್ಯವನ್ನು ಬಳಸಿಕೊಂಡು, ಮಣ್ಣು ತರಿಸಿ ಪ್ರಯೋಗಕ್ಕೆ ಮುಂದಾದೆ. ಈ ಪ್ರಯೋಗಕ್ಕೆ ಮುಂದಾದಾಗ ನಾನಿರುವ ಅಪಾರ್ಟ್‌ಮೆಂಟ್ ಗಳ ಸಮುತ್ಛಯದ ನೆರೆ ಹೊರೆಯವರು ತಗಾದೆ ತೆಗೆದರು. ದುರ್ವಾಸನೆ ಬರುತ್ತದೆ, ಇದನ್ನು ಮಾಡಲು ನಿಮಗೆ ಯಾರು ಅಧಿಕಾರ ನೀಡಿದ್ದಾರೆ ಎಂದು ಜಗಳವಾಡಿದರು. ಅದೆಲ್ಲವನ್ನು ಸಹಿಸಿಕೊಂಡು ನನ್ನ ಕಾರ್ಯದಲ್ಲಿ ತೊಡಗಿದೆ. ಸುಮಾರು 1,600 ರೂ. ನಷ್ಟು ವೆಚ್ಚ ಮಾಡಿ ಒಟ್ಟು 350 ಕೆಜಿ ಯಷ್ಟು ಅಮೃತ ಮಿಟ್ಟಿ ತಯಾರಿಸಿದೆ. ಅದನ್ನು ನನ್ನದೇ ತಾರಸಿ ತೋಟಕ್ಕೆ ಬಳಸಿದೆ ಜತೆಗೆ ತೋಟಗಾರಿಕಾ ಇಲಾಖೆಗೂ ನೀಡಿದೆ. ನಂತರದಲ್ಲಿ ಈ ಮಣ್ಣಿನ ಮಹತ್ವದ ಕುರಿತಾಗಿ ಹಲವರಿಗೆ ಮನವರಿಕೆ ಮಾಡಿದೆ. ನಮ್ಮ ಸುತ್ತಮುತ್ತಲ ಸುಮಾರು 1,200 ಮನೆಗಳಿಂದ ಅವರ ಅಡುಗೆ ಮನೆ ಹಸಿ ಹಾಗೂ ಒಣ ತ್ಯಾಜ್ಯ ನೀಡುವಂತೆ ಕೇಳಿ ನಾನೇ ಸಂಗ್ರಹಿಸಿ ತರುತ್ತಿದ್ದೆ. ಒಣ ತ್ಯಾಜ್ಯಕ್ಕೆ ಯಾವುದೇ ಕಾರಣಕ್ಕೆ ಬೆಂಕಿ ಹಚ್ಚದಂತೆ ಮನವಿ ಮಾಡಿದೆ. ಆರಂಭದಲ್ಲಿ ಹೆಚ್ಚಿನ ಸ್ಪಂದನೆ ದೊರೆಯಲಿಲ್ಲ. ನಿಧಾನಕ್ಕೆ ಒಂದೊಂದೇ ಮನೆಯವರು ನೀಡತೊಡಗಿದರು. ನೆರೆ ಹೊರೆಯವರ ಮನೋಭಾವದಲ್ಲೂ ಬದಲಾವಣೆ ಬಂದಿದೆ.
ಪ್ರಯತ್ನ ನಿಂತಿಲ್ಲ: 2012ರಿಂದ 2019ರ ಕೊನೆವರೆಗೆ 1,200 ಮನೆಗಳಲ್ಲಿ ನಿತ್ಯ ಸುಮಾರು 400-480 ಕೆಜಿಯಷ್ಟು ಉತ್ಪಾದನೆಯಾಗುವ ಅಡುಗೆ ಮನೆ ಹಸಿ-ಒಣ ತ್ಯಾಜ್ಯದಲ್ಲಿ ಶೇ.60ರಷ್ಟು ತ್ಯಾಜ್ಯ ಅಮೃತ ಮಿಟ್ಟಿ, ಕಾಂಪೊಸ್ಟ್ ರೂಪ ಪಡೆಯುತ್ತಿದೆ. ಇನ್ನುಶೇ.40ರಷ್ಟು ತ್ಯಾಜ್ಯ ಉತ್ಪಾದಕರು ಮಾತ್ರ ಮನ ಬದಲಾವಣೆಗೆ ಮುಂದಾಗಿಲ್ಲ. ಆದರೂ ನನ್ನ ಪ್ರಯತ್ನ ಮಾತ್ರ ನಿಂತಿಲ್ಲ. 10 ಟನ್‌ನಷ್ಟು ಅಮೃತ ಮಿಟ್ಟಿ ಮಾರಾಟ ಮಾಡಿದ್ದೇನೆ. ಗುರಗಾಂವ್, ದೆಹಲಿ ಅಲ್ಲದೇ ವಿವಿಧ ಕಡೆಯಿಂದಲೂ ಇದಕ್ಕೆ ಬೇಡಿಕೆ ಬರುತ್ತಿದೆ. ಅಮೇಜಾನ್‌ನಲ್ಲೂ ಇದು ಮಾರಾಟಕ್ಕಿದ್ದು, ಒಂದು ಕೆಜಿಗೆ 30 ರೂ. ನಂತೆ ಒಂದು ಹಾಗೂ ಐದು ಕೆಜಿ ಪ್ಯಾಕ್‌ನಲ್ಲಿ ಮಾರಾಟ ಆಗುತ್ತಿದೆ.
ಅಮೃತ ಮಿಟ್ಟಿ ಮಾರಾಟಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದ್ದಂತೆಯೇ ಇದಕ್ಕಾಗಿ ನವೋದ್ಯಮ ಆರಂಭಿಸಿದ್ದು, ಒಟ್ಟು ಆರು ಪ್ರಕಾರದ ಅಮೃತ ಮಿಟ್ಟಿ ತಯಾರಿಸಲಾಗುತ್ತಿದೆ. ಕಳೆದ 6 ತಿಂಗಳ ಹಿಂದೆಯಷ್ಟೇ ಸಂಶೋಧನಾ ಮತ್ತು ಅಭಿವೃದ್ಧಿ (ಆರ್‌ಆ್ಯಂಡ್‌ಡಿ) ಆರಂಭಿಸಿದ್ದು, ಕೃಷಿ ಮತ್ತು ತೋಟಗಾರಿಕಾ ತಾಜ್ಯವನ್ನು ಸುಡುವ ಬದಲು ಅದನ್ನು ಉತ್ಪನ್ನ ರೂಪವಾಗಿ ಮಾಡುವುದು ಹೇಗೆ ಎಂಬುದರ ಸಂಶೋಧನೆ ನಡೆದಿದೆ. ಸುಮಾರು 1,575 ಎಕರೆ ಪ್ರದೇಶದಲ್ಲಿನ ಗೋಧಿ, ಸಜ್ಜೆ, ಭತ್ತದ ತ್ಯಾಜ್ಯದ ಮೇಲೆ ಕೆಲಸ ಮಾಡಲಾಗುತ್ತಿದೆ. ಮಣ್ಣು ಪರೀಕ್ಷೆ ಕೈಗೊಳ್ಳುತ್ತಿದ್ದೇವೆ.
ಮನೆಯೊಳಗಿನ ತ್ಯಾಜ್ಯ ಹೊರ ಹೋಗದಂತೆ, ಬೆಂಕಿ ಹಚ್ಚಿ ವಾತಾವರಣ ಹಾಳು ಮಾಡದಂತೆ ಅದನ್ನೇ ಅಮೃತ ಮಿಟ್ಟಿಯಾಗಿ ಪರಿವರ್ತಿಸುವ ಮಾದರಿಯನ್ನು ಪ್ರಧಾನಿ ಮೋದಿ ಎದುರು ಪ್ರದರ್ಶಿಸಿದ್ದೇನೆ. ದೇಶದ ಯಾವುದೇ ರಾಜ್ಯದಲ್ಲಿ ಯಾರಾದರೂ, ಅಮೃತ ಮಿಟ್ಟಿ ತಯಾರಿಕೆಗೆ ಮುಂದಾದರೆ ಫ್ರಾಂಚೈಸಿ ನೀಡಿ, ತಂತ್ರಜ್ಞಾನ ಸಲಹೆ-ಮಾರ್ಗದರ್ಶನ ನೀಡಲಾಗುವುದು. ತಾಜ್ಯ ಉತ್ಪಾದನೆ ನನ್ನ ಹಕ್ಕು ಎಂದು ಭಾವಿಸುವವರು, ಅದರ ವಿಲೇವಾರಿ ಸಹ ನನ್ನ ಕರ್ತವ್ಯ ಎಂದು ಭಾವಿಸಬೇಕೆಂಬುದೇ ನನ್ನ ಉದ್ದೇಶ. –ಪೂರ್ಣಿಮಾ ಸಾವರ್‌ಗಾಂವ್ಕರ್
ತಯಾರಿ ಹೇಗೆ?: ಅಡುಗೆಗೆ ಬಳಸುವ ತರಕಾರಿ, ಪಲ್ಯ, ಉಳಿದ ಅಡುಗೆ, ಇನ್ನಿತರ ಒಣ ತ್ಯಾಜ್ಯವನ್ನು ಹೆಚ್ಚಿನ ವಾಸನೆ ಬಾರದ ರೀತಿಯಲ್ಲಿ ಮನೆಯ ಮೇಲೆ ಇಲ್ಲವೇ ಕಾಂಪೌಂಡ್‌ನಲ್ಲಿಯೇ ಇರಿಸಬಹುದಾಗಿದೆ. ಅದರೊಳಗಿನ ತೇವಾಂಶ ಹೋಗುವವರೆಗೂ ಅಲ್ಪಸ್ವಲ್ಪ ವಾಸನೆ ಬರಬಹುದು. ಅದು ದೊಡ್ಡ ಸಮಸ್ಯೆಯೂ ಆಗಲಾರದು. ಸುಮಾರು 120-140 ದಿನಗಳಲ್ಲಿ ಇದು ಕಾಂಪೊಸ್ಟ್ ರೂಪ ತಾಳುತ್ತದೆ. 1:3 ಆಧಾರದಲ್ಲಿ ಮಣ್ಣು ಸೇರಿಸುವ ಮೂಲಕ ಅಮೃತ ಮಿಟ್ಟಿ ತಯಾರಿಸಲಾಗುತ್ತಿದೆ.