Advertisement

ಅಮೃತ ಮಹೋತ್ಸವ ವ್ಯಕ್ತಿ ಪೂಜೆಯಲ್ಲ, ಪಕ್ಷ ಪೂಜೆ

02:40 PM Jul 19, 2022 | Team Udayavani |

ದಾವಣಗೆರೆ: ಸಿದ್ದರಾಮಯ್ಯ ಅಮೃತ ಮಹೋತ್ಸವ ವ್ಯಕ್ತಿ ಪೂಜೆಯಲ್ಲ, ಪಕ್ಷ ಪೂಜೆ. ಸಿದ್ದರಾಮಯ್ಯ ಹೆಸರಲ್ಲಿ ಪಕ್ಷದಲ್ಲಿರುವ ಅಭಿಮಾನಿಗಳೆಲ್ಲರೂ ಒಗ್ಗೂಡಿ ಪಕ್ಷ ಸಂಘಟಿಸುತ್ತಿದ್ದಾರೆ. ಮುಖಂಡರ ಸಂಘಟನೆ ಕಂಡು ಬಿಜೆಪಿಯವರಿಗೆ ಈಗಲೇ ನಡುಕ ಶುರುವಾಗಿದೆ ಎಂದು ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಹೇಳಿದರು.

Advertisement

ಸೋಮವಾರ ಕಾರ್ಯಕ್ರಮದ ವೇದಿಕೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ರಾಜ್ಯದ ಎಲ್ಲ ಕಡೆಗಳಿಂದ ಬರುವ ಅಭಿಮಾನಿಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಮಧ್ಯ ಕರ್ನಾಟಕ ಭಾಗದ ದಾವಣಗೆರೆಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದರಿಂದ ಆತಿಥ್ಯ ಜಿಲ್ಲೆ ದಾವಣಗೆರೆಗೂ ಹೆಚ್ಚಿನ ಅನುಕೂಲವಾಗಲಿದೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಲು ಇದು ಸಹಕಾರಿಯೂ ಆಗಲಿದೆ ಎಂದರು.

ಸಿದ್ದರಾಮಯ್ಯ ಇಚ್ಛಿಸಿದರೆ ಹರಿಹರ ವಿಧಾನಸಭೆ ಕ್ಷೇತ್ರ ಬಿಟ್ಟು ಕೊಡುವುದಾಗಿ ಈಗಾಗಲೇ ಶಾಸಕ ಎಸ್‌. ರಾಮಪ್ಪ ಘೋಷಿಸಿದ್ದಾರೆ. ಅದೇ ರೀತಿ ಅವರು ಜಿಲ್ಲೆಯಲ್ಲಿ ಎಲ್ಲಿ ಸ್ಪರ್ಧಿಸಿದರೂ ಅವರಿಗೆ ಅಭೂತಪೂರ್ವ ಸಹಕಾರ, ಬೆಂಬಲ ಸಿಗಲಿದೆ. ಇನ್ನು ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸ್ಪರ್ಧಿಸಲಿ ಅಥವಾ ಪ್ರಧಾನಿ ಮೋದಿಯೇ ಸ್ಪರ್ಧಿಸಲಿ. ಸಮರ್ಥವಾಗಿ ಅವರನ್ನು ಎದುರಿಸಲು ಸಿದ್ಧ. ತಾವಿನ್ನೂ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಆಲೋಚಿಸಿಲ್ಲ. ಮೊದಲು ಪಕ್ಷ ಸಂಘಟಿಸುವ ಗುರಿ ಹೊಂದಿದ್ದೇವೆ ಎಂದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಬಿ. ಮಂಜಪ್ಪ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್‌ ಮಂಜುನಾಥ್‌, ಮುಖಂಡರಾದ ಎ. ನಾಗರಾಜ್‌, ಅಯೂಬ್‌ ಪೈಲ್ವಾನ್‌, ಅನಿತಾ ಮಹಾಂತೇಶ್‌, ಎಸ್‌. ಮಲ್ಲಿಕಾರ್ಜುನ್‌, ಹರೀಶ್‌ ಬಸಾಪುರ, ಕೆ.ಜಿ. ಶಿವಕುಮಾರ್‌, ಪಾಮೇನಹಳ್ಳಿ ನಾಗರಾಜ್‌ ಇತರರು ಇದ್ದರು.

ಕಮಿಷನ್‌ ಇಲ್ಲದೇ ಕೆಲಸ ಆಗಲ್ಲ
ಕಾಂಗ್ರೆಸ್‌ ಅಧಿಕಾರದಲ್ಲಿ ಇಲ್ಲದಿದ್ದರೂ ನಾವು ಒಂದು ಮಾತು ಹೇಳಿದರೆ ಆಡಳಿತದಲ್ಲಿ ಕೆಲಸ ಆಗುತ್ತದೆ. ಆದರೆ ಬಿಜೆಪಿಯಲ್ಲಿ ಆ ವ್ಯವಸ್ಥೆ ಇಲ್ಲ. ಎರಡು ಜತೆ ಪಾದರಕ್ಷೆ ಸವೆಸಿದರೂ ಕೆಲಸ ಆಗಲ್ಲ. 40 ಪರ್ಸೆಂಟ್‌ ಕಮಿಷನ್‌ ಕೊಡದೆ ಕೆಲಸ ಆಗುವುದೇ ಇಲ್ಲ ಎಂದು ಮಾಜಿ ಸಚಿವ ಮಲ್ಲಿಕಾರ್ಜುನ್‌ ಟೀಕಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next