ಮುಂಬೈ: ಮಹಾರಾಷ್ಟ್ರದ ಅಮರಾವತಿಯಲ್ಲಿ ಜೂ.21ರಂದು ಹತ್ಯೆಗೀಡಾದ ಕೆಮಿಸ್ಟ್ ಉಮೇಶ್ ಕೋಲ್ಹೆ ಅವರ ಹಂತಕರಿಗೆ 10,000 ರೂ. ನಗದು ಹಾಗೂ ಬೈಕ್‌ವೊಂದನ್ನು ಉಡುಗೊರೆಯಾಗಿ ಕೊಡಲಾಗಿತ್ತು ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಪ್ರಕರಣದ ಮಾಸ್ಟರ್ ಮೈಂಡ್ ಇರ್ಫಾನ್ ಶೇಖ್ ಸೇರಿ ಒಟ್ಟು ಆರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಉಮೇಶ್ ಹತ್ಯೆ ಮಾಡುವುದಕ್ಕಾಗಿ ಇರ್ಫಾನ್ ಐವರು ಆರೋಪಿಗಳಿಗೆ ಹಣ ಮತ್ತು ಬೈಕ್ ಕೊಟ್ಟಿದ್ದ ಎಂದು ಪೊಲೀಸ್ ಆಯುಕ್ತರಾಗಿರುವ ಆರ್ತಿ ಸಿಂಗ್ ತಿಳಿಸಿದ್ದಾರೆ.
“ಹಾಗೆಯೇ ಈ ಪ್ರಕರಣ ಕೂಡ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದಕ್ಕೇ ನಡೆದಿದ್ದು ಎನ್ನುವುದು ನಮಗೆ ತಿಳಿದಿತ್ತು. ಆದರೆ ಇದು ಸೂಕ್ಷ್ಮ ವಿಚಾರ ಎನ್ನುವ ಕಾರಣದಿಂದ ವಿಚಾರವನ್ನು ಬಹಿರಂಗಪಡಿಸಿರಲಿಲ್ಲ. ಇದೇ ರೀತಿ ಇನ್ನೂ ಮೂವರಿಗೆ ಬೆದರಿಕೆ ಬಂದಿದೆ. ಅದರಲ್ಲಿ ಒಬ್ಬರು ಮಾತ್ರ ದೂರು ದಾಖಲಿಸಿದ್ದಾರೆ.
ಶೀಘ್ರವೇ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಲಾಗುವುದು’ ಎಂದೂ ಅವರು ತಿಳಿಸಿದ್ದಾರೆ.