ಕಿರುಚಿತ್ರ ನಿರ್ದೇಶನ ಮಾಡಿದವರ ಮುಂದಿನ ಕನಸು ಸಿನಿಮಾ. ಹಾಗಾಗಿಯೇ ಕಥೆ ಮಾಡಿಕೊಂಡು ಸಿನಿಮಾ ಮಾಡುವ ಪ್ರಯತ್ನದಲ್ಲಿರುತ್ತಾರೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ ಅಮೋಘ್ ಶಂಭು. ಅಮೋಘ್ ಈಗಾಗಲೇ ಎರಡು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. “ಸ್ನೇಹದ ಜೀವಿಗಳು’ ಹಾಗೂ “ಕ್ಯಾಂಪಸ್ ಲವ್‌ಸ್ಟೋರಿ’ ಎಂಬ ಎರಡು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಈ ಕಿರುಚಿತ್ರಗಳಿಗೆ ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರಿಂದ ಸಿಗುತ್ತಿರುವ ಪ್ರೋತ್ಸಾಹ ಕಂಡು ಖುಷಿಯಾಗಿರುವ ಅಮೋಘ್ ಈಗ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಸಾಕಷ್ಟು ಕಥೆಗಳನ್ನು ಸಿದ್ಧಪಡಿಸಿಟ್ಟುಕೊಂಡಿದ್ದಾರೆ. ಸಿನಿಮಾಕ್ಕೆ ಬರುವ ಮುನ್ನ ಅದರ ತಾಂತ್ರಿಕ ಅಂಶಗಳನ್ನು ತಿಳಿದುಕೊಳ್ಳಬೇಕೆಂಬ ಕಾರಣಕ್ಕೆ ನಿರ್ದೇಶನ ಹಾಗೂ ಚಿತ್ರಕಥೆ ಬರೆಯುವ ವಿಚಾರದಲ್ಲಿ ಪುಣೆಯಲ್ಲಿ ಡಿಪ್ಲೋಮಾ ಕೋರ್ಸ್ ಕೂಡಾ ಮಾಡಿದ್ದಾರೆ.
ಜೊತೆಗೆ ಆದರ್ಶ ಫಿಲಂ ಇನ್ಸಿಟಿಟ್ಯೂಟ್‌ನಲ್ಲಿ ನಟನೆಯ ತರಬೇತಿ ಪಡೆದಿರುವ ಅಮೋಘ್, ಮೊದಲಿಗೆ ಬಾಲಿವುಡ್‌ನ ನಿರ್ದೇಶಕರೊಬ್ಬರ ಜೊತೆ ಸಹಾಯಕ ನಿರ್ದೇಶಕರಾಗುವ ಅವಕಾಶ ಸಿಕ್ಕಿತಂತೆ. ಆ ನಂತರ ಕನ್ನಡದಲ್ಲೂ ಅನೇಕ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ ಅಮೋಘ್. ನಿರ್ದೇಶಕರಾದ ಹರ್ಷ, ಗೌಸ್ ಪೀರ್ ಸೇರಿದಂತೆ ಅನೇಕರ ಸಿನಿಮಾಗಳಲ್ಲಿ ಕೆಲಸ ಮಾಡಿ ಸಿನಿಮಾ ಅನುಭವ ಪಡೆದಿದ್ದಾರೆ.
“ನನಗೆ ಶಾಲಾ ದಿನಗಳಿಂದಲೇ ಸಿನಿಮಾ ಬಗ್ಗೆ ಆಸಕ್ತಿ ಹೆಚ್ಚು. ಆಗಲೇ ನಾನು ಸಿನಿಮಾ ನಿರ್ದೇಶಕರನ್ನು ಭೇಟಿಯಾಗಿ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದೆ. ನನಗೆ ಸಿನಿಮಾ ಕ್ಷೇತ್ರದಲ್ಲೇ ಮುಂದುವರಿಯುವ ಆಸೆ, ಆಸಕ್ತಿ ಇದೆ. ಅದೇ ಕಾರಣದಿಂದ ಅದಕ್ಕೆ ಬೇಕಾದ ತಯಾರಿ ಮಾಡಿಕೊಂಡಿದ್ದೇನೆ. ಗುಣಮಟ್ಟದ ಸಿನಿಮಾ ಕೊಡಬೇಕೆಂಬ ಆಸೆ ಇದೆ’ ಎನ್ನುತ್ತಾರೆ ಅಮೋಘ್.
* ರವಿ ರೈ