ಹತ್ತೂಂಭತ್ತು ವರ್ಷದ ರಾಧಾಗೆ ತಂದೆ ತೀರಿಕೊಂಡ ಸಮಯದಿಂದ ಕಣ್ಣುನೋವು. ನೇತ್ರ ಪರೀಕ್ಷೆ ಮಾಡಿಸಿದಾಗ ದೃಷ್ಟಿ ದೋಷ ಕಂಡುಬರಲಿಲ್ಲ. ಮುಂದೆ ನರರೋಗ ವೈದ್ಯರು ತಪಾಸಣೆ ನಡೆಸಿದಾಗ, ಯಾವ ವೈದ್ಯಕೀಯ ಸಮಸ್ಯೆಯೂ ಇರಲಿಲ್ಲವಾದ್ದರಿಂದ “ಕೌನ್ಸೆಲಿಂಗ್ ಮಾಡಿಸಿ’ ಎಂದು ನನ್ನ ಬಳಿ ಕಳಿಸಿದ್ದರು.
ಕುಡಿತದ ಚಟವೇ ತಂದೆಯನ್ನು ಬಲಿತೆಗೆದುಕೊಂಡಿತ್ತು. ಸ್ನೇಹಿತರು ಇರಲಿಲ್ಲ. ಮನೆಯಲ್ಲೂ ಮಾತಿಲ್ಲ. ಹೆಂಡವೇ ಪರಮಾಪ್ತ. ಸಂಬಳ ತಂದುಕೊಡುತ್ತಿದ್ದರೇ ವಿನಹ ಹೆಂಡತಿ ಮಕ್ಕಳ ಜೊತೆ ಭಾವನಾತ್ಮಕ ಸಂಬಂಧವಿರಲಿಲ್ಲ. ಖುರ್ಚಿಯಲ್ಲಿ ಕುಳಿತು ಸೂರನ್ನು ದಿಟ್ಟಿಸಿನೋಡುತ್ತಿದ್ದರು. ಒಂದು ದಿನ ಏಕಾಏಕಿ ಆರೋಗ್ಯ ಕೈಕೊಟ್ಟಿದೆ. ಆಸ್ಪತ್ರೆಗೆ ಸೇರಿಸಿದರೂ ಉಳಿಸಿಕೊಳ್ಳಲಾಗಲಿಲ್ಲ.
ಮಣ್ಣು ಮಾಡಿದ ಕೆಲವೇ ದಿನಗಳಲ್ಲಿ, ತಾಯಿಯ ಅಣ್ಣನ ಮನೆಯ ಕೆಳಗೇ ಮನೆ ಬದಲಿಸಿದ್ದಾರೆ. ಬಂಧು-ಬಳಗವೆಲ್ಲಾ ಅಮ್ಮನಿಗೆ ಸಾಂತ್ವನ ಹೇಳಿದರು. ಹೇಳಬೇಕಾದ್ದೇ. ಅಮ್ಮನೇ ಸಂಸಾರ ನಡೆಸಿದ್ದು. ಆದರೆ, ಸಾವಿನ ನಂತರ ಬಂಧುವರ್ಗ ಮತ್ತು ಅಮ್ಮನೂ ಸೇರಿ ಸತ್ತಂತೆ ಬದುಕಿದ್ದ ಅಪ್ಪನ ಬಗ್ಗೆ ಕೆಟ್ಟದಾಗಿ ಮಾತಾಡಿಕೊಳ್ಳುತ್ತಿದ್ದುದು ರಾಧಾಗೆ ಇಷ್ಟವಾಗಲಿಲ್ಲ. ಅಪ್ಪನ ಜೊತೆ ಪಟ್ಟಿದ್ದ ಕಷ್ಟದ ಬಗ್ಗೆ ಅಮ್ಮ, ರಾಧಾಳ ಬಳಿಯೂ ಮಾತಾಡುತ್ತಿದ್ದರು. ಇದೆಲ್ಲ ಆಕೆಗೆ ಸಹ್ಯವೆನಿಸಲಿಲ್ಲ. ರಾಧಾಗೆ ತೀವ್ರ ನೋವಾಗಿದೆ. ಆದರೆ, “ಅಪ್ಪನನ್ನು ಕ್ಷಮಿಸು’ ಎಂದು ಅಮ್ಮನಿಗೆ ಹೇಗೆ ತಿಳಿಸುವುದು? ತಿಳಿಸದ ಮಾತುಗಳು, ಮಾನಸಿಕ ಕ್ಷೊಭೆಯಾಗಿ, ಶಾರೀರಕ ಬೇನೆಯಾಗಿ ಕಂಡುಬರುತ್ತವೆ.
ಪ್ರಾಣ- ಪಕ್ಷಿ ಹಾರುವ ಮುನ್ನ ರಾಧಾಳೇ ತಂದೆಯ ಬಳಿ ಇದ್ದಿದ್ದು. ಅವರು ಕ್ಷಮಾಪಣೆ ಕೇಳಿದವರಂತೆ ಕಂಡಿದ್ದಾರೆ. ಮುಖದಲ್ಲಿ ಪಶ್ಚಾತ್ತಾಪ ಭಾವ. ಕಣ್ಣು ತಿರುಗಿಸಿ ಏನೋ ಹೇಳಲು ಪ್ರಯತ್ನಪಟ್ಟರಂತೆ. ಕೈ ಎತ್ತಿ ವಿದಾಯ ಹೇಳಿದ್ದಾರೆ. ಅವಳ ಹೃದಯ ಅವರನ್ನು ಆ ಕ್ಷಣದಲ್ಲೇ ಕ್ಷಮಿಸಿಬಿಟ್ಟಿದೆ. ತನ್ನನ್ನು ಈ ಪ್ರಪಂಚಕ್ಕೆ ತಂದುದ್ದಕ್ಕೆ ಗೌರವ ಮತ್ತು ಕೃತಜ್ಞತೆ ಸಲ್ಲಿಸಲು, ತಂದೆಯ ಹಣೆಯ ಮೇಲೆ ಕೈ ಇಟ್ಟಿದ್ದಾಳೆ. ಕೊಟ್ಟ ಪ್ರೀತಿಯನ್ನು ಅವರು ಸ್ವೀಕರಿಸಿ, ಮಂದಹಾಸ ಬೀರಿದ್ದಾರೆ. ಹತ್ತೂಂಭತ್ತು ವರ್ಷಗಳಲ್ಲಿ ಆಡಬೇಕಿದ್ದ ಮಾತುಗಳನ್ನು ಒಂದು ಕ್ಷಣದಲ್ಲಿ ತುಂಬಿಕೊಟ್ಟು, ಮಗಳಿಗೆ ತೃಪ್ತಿ ಕೊಟ್ಟು ಹೊರಟುಬಿಟ್ಟಿದ್ದಾರೆ. ಮಗಳು ಸಮಚಿತ್ತ- ಸ್ಥಿತಪ್ರಜ್ಞಳಾದದ್ದು ಯಾರಿಗೂ ಗೊತ್ತಾಗಲೇ ಇಲ್ಲ.
ತಾಯಿ ಮತ್ತು ಸೋದರಮಾವ ತಂದೆಯ ಆತ್ಮ ರಾಧಾಗೆ ಮೆಟ್ಟಿಕೊಂಡಿರುವುದೇ ಅನಾರೋಗ್ಯಕ್ಕೆ ಕಾರಣ ಎಂದು ನಂಬಿದ್ದರು. ನಂಬಿಕೆಗಳ ಸರಿ- ತಪ್ಪು ಅವಲೋಕನಕ್ಕಿಂತ, ಅವುಗಳನ್ನು ಆಸಕ್ತಿಯಿಂದ ಆಲಿಸುತ್ತೇನೆ. ಗೌರವ ಕೊಡುತ್ತೇನೆ. ಸಾವಿನ ಘಳಿಗೆಯಲ್ಲಿ ಮಗಳಿಗಾದ ಬೌದ್ಧಿಕ ವಿಕಾಸವನ್ನು ತಾಯಿಗೆ ನಾನು ವಿವರಿಸಿ ಹೇಳಿದೆ. ಪತಿ- ಪತ್ನಿಯಾಗಿ ಬಾಳದೇ ಎದ್ದು ನಡೆದ ಜೀವವನ್ನು ಕ್ಷಮಿಸಿಬಿಡಲು ತಾಯಿಯಲ್ಲಿ ಕೋರಿದೆ.
ಮಕ್ಕಳಿಗೆ ತಂದೆ- ತಾಯಿ ಎರಡು ಕಣ್ಣು- ಒಂದು ದೃಷ್ಟಿ ಎಂಬುದು ಕಷ್ಟ ಸಹಿಷ್ಣುತಾಯಿಗೆ ಅರ್ಥವಾಯಿತು. ಮಗಳನ್ನು ಪ್ರೀತಿಯಿಂದ ತಬ್ಬಿಕೊಂಡರು. ಇಬ್ಬರ ಅಳುವಿನ ನಡುವೆ, ಸುಖದ ಆಲಿಂಗನ. ನೋಡಲು ನಾನು ಪುಣ್ಯ ಮಾಡಿದ್ದೆ.
ಶುಭಾ ಮಧುಸೂದನ್