ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಜ.27ರಂದು ರಾಜ್ಯಕ್ಕೆ ಆಗಮಿಸಲಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ದೇವಸ್ಥಾನ ಸುತ್ತಾಟ ನಡೆಸಲಿದ್ದಾರೆ.
27ರಂದು ರಾತ್ರಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಲಿದ್ದು, 28ರಂದು ಬೆಳಗ್ಗೆ ಅಲ್ಲಿನ ಕೆ.ಎಲ್ ಇ. ಸೊಸೈಟಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ ಹಾಗೂ ಕೆಎಲ್ ಇ ಸೊಸೈಟಿಯ ಅಮೃತ ಮಹೋತ್ಸವ ಕಾರ್ಯ ಕ್ರಮದಲ್ಲಿ ಭಾಗವಹಿಸುವರು. ಅನಂತರ ಧಾರವಾಡದಲ್ಲಿ ಸ್ಥಾಪನೆಯಾಗಲಿರುವ ರಾಷ್ಟ್ರೀಯ ವಿಧಿ ವಿಜ್ಞಾನ ಕೇಂದ್ರಕ್ಕೆ ಶಂಕು ಸ್ಥಾಪನೆ ನೆರವೇರಿಸಿ, ಕುಂದ ಗೋಳದಲ್ಲಿ ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗವಹಿಸುವರು.
ಮಧ್ಯಾಹ್ನ ಕುಂದಗೋಳದ ಪುರಾತನ ಶಂಭುಲಿಂಗ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ಬಳಿಕ ಬಸವಣ್ಣ ದೇವರ ಮಠಕ್ಕೆ ಭೇಟಿ ನೀಡಲಿದ್ದಾರೆ. ಅನಂತರ 1.5 ಕಿ.ಮೀ. ಉದ್ದದ ರೋಡ್ ಶೋದಲ್ಲಿ ಭಾಗವಹಿ ಸುವರು. ಒಂದೆರಡು ಮನೆಗಳಿಗೆ ಕರಪತ್ರ ವಿತರಣೆ, ಮಿಸ್ಡ್ ಕಾಲ್ ಮೂಲಕ ಸದಸ್ಯತ್ವ ಅಭಿಯಾನಕ್ಕೂ ಚಾಲನೆ ನೀಡುವರು.
ಸಂಜೆ ಬೆಳಗಾವಿಯ ಕಿತ್ತೂರು ಕ್ಷೇತ್ರದ ವೀರ ಸೋಮೇಶ್ವರ ರಂಭಾಪುರಿ ಕಲ್ಯಾಣ ಮಂಟಪದ ಬಳಿಯ ಮೈದಾನದಲ್ಲಿ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸುವರು. ಬೆಳಗಾವಿಯಲ್ಲಿ ಹಿರಿಯರ ಜತೆ ಸಂವಾದ ನಡೆಸಲಿದ್ದು, ಬಳಿಕ ಸಂಘಟನಾತ್ಮಕ ಸಭೆಯಲ್ಲಿ ಭಾಗವಹಿ ಸುವರು. ಬಸವರಾಜ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲು, ಯಡಿಯೂರಪ್ಪ, ಪ್ರಹ್ಲಾದ್ ಜೋಷಿ ಮತ್ತಿತರರು ವಿವಿಧ ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ತಿಳಿಸಿದ್ದಾರೆ.