ಹೊಸದಿಲ್ಲಿ: ಶನಿವಾರ ಮುಂಜಾನೆಯಿಂದಲೇ ಮಹಾರಾಷ್ಟ್ರ ರಾಜಕೀಯದಲ್ಲಿ ಭಾರಿ ಬದಲಾವಣೆಗಳು ನಡೆಯುತ್ತಿವೆ. ಶಿವಸೇನೆ- ಕಾಂಗ್ರೆಸ್- ಎನ್ ಸಿಪಿ ಸರಕಾರದ ನಿರೀಕ್ಷೆಯಲ್ಲಿದ್ದವರಿಗೆ ದೊಡ್ಡ ಶಾಕ್ ನೀಡಿದ್ದು ಬಿಜೆಪಿ ಮತ್ತು ಎನ್ ಸಿಪಿ ಮೈತ್ರಿ. ಇಂದು ಮುಂಜಾನೆ ರಾಜಭವನದಲ್ಲಿ ತರಾತುರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಮತ್ತು ಶರದ್ ಪವಾರ್ ಸಂಬಂಧಿ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ಧಾರೆ.
ಆದರೆ ಎನ್ ಸಿಪಿ ಮೈತ್ರಿಯಲ್ಲಿ ಬಿಜೆಪಿ ಸರಕಾರ ರಚಿಸುತ್ತಿದ್ದಂತೆ ಸ್ವತಃ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದು ಅಜಿತ್ ಅವರ ವೈಯಕ್ತಿಕ ನಿರ್ಧಾರ, ಇದಕ್ಕೆ ನಮ್ಮ ಬೆಂಬಲವಿಲ್ಲ ಎಂದು ಖಚಿತಪಡಿಸಿದ್ಧಾರೆ.
ಶುಕ್ರವಾರ ರಾತ್ರಿಯವರೆಗೂ ಶಿವಸೇನೆಯೊಂದಿಗೆ ಕಾಣಿಸಿಕೊಂಡಿದ್ದ ಅಜಿತ್ ಪವಾರ್ ಅದು ಹೇಗೆ ರಾತ್ರೋ ರಾತ್ರಿ ಮನಸ್ಸು ಬದಲಿಸಿದರು. ಅದರಲ್ಲೂ ಬಹುಮತಕ್ಕೆ ಬೇಕಾಗುವಷ್ಟು ಎನ್ ಸಿಪಿ ಶಾಸಕರನ್ನು ಹೇಗೆ ಒಪ್ಪಿಸಿದರು ಎನ್ನುವುದೇ ಯಕ್ಷ ಪ್ರಶ್ನೆ.
5.47ಕ್ಕೆ ರಾಷ್ಟ್ರಪತಿ ಆಡಳಿತ ತೆರವು!
ಶನಿವಾರ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ತರಾತುರಿಯಲ್ಲೇ ಫಡ್ನವೀಸ್ ಮತ್ತು ಅಜಿತ್ ಪವಾರ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಇಲ್ಲಿ ಗಮನಿಸಿಬೇಕಾದ ಅಂಶವೆಂದರೆ ಇಂದು ಮುಂಜಾನೆ 5.47ಕ್ಕೆ ರಾಷ್ಟ್ರಪತಿ ಆಡಳಿತವನ್ನು ತೆರವು ಮಾಡಲಾಗಿದೆ. ಇದೆಲ್ಲವೂ ಪೂರ್ವ ನಿಯೋಜಿತವಾಗಿದ್ದು, ಬಿಜೆಪಿ ಕೇಂದ್ರ ನಾಯಕರ ಸಹಾಯದಿಂದಲೇ ಈ ಬೆಳವಣಿಗೆಗಳು ನಡೆದಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.
288 ಸದಸ್ಯರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 105 ಶಾಸಕ ಸ್ಥಾನ ಹೊಂದಿದ್ದರೆ, ಎನ್ ಸಿಪಿ 54 ಸದಸ್ಯರನ್ನು ಹೊಂದಿದೆ. ಅದರಲ್ಲಿ ಎಷ್ಟು ಶಾಸಕರು ಅಜಿತ್ ಪವಾರ್ ಜೊತೆ ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎಂದು ಇನ್ನಷ್ಟೇ ತಿಳಿಯಬೇಕಾಗಿದೆ. ಉಳಿದ 29 ಇತರ ಶಾಸಕರ ಪೈಕಿ ಎಷ್ಟು ಮಂದಿ ಫಡ್ನವೀಸ್ ಗೆ ಬೆಂಬಲ ನೀಡಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.