ಹೈದರಾಬಾದ್/ಹೊಸದಿಲ್ಲಿ: ಪ್ರತಿಪಕ್ಷಗಳ ಮಹಾಘಟಬಂಧನ್ ಎನ್ನುವುದು ದೊಡ್ಡ ವಂಚನೆಯಾಗಿದ್ದು, ಮೋದಿ ಸರಕಾರವು “ಮೇಕಿಂಗ್ ಇಂಡಿಯಾ'(ದೇಶ ನಿರ್ಮಾಣ)ದತ್ತ ಹೆಜ್ಜೆಯಿಟ್ಟರೆ, ಪ್ರತಿಪಕ್ಷಗಳು “ಬ್ರೇಕಿಂಗ್ ಇಂಡಿಯಾ'(ದೇಶ ವಿಭಜನೆ) ಮಾಡಲು ಹೊರಟಿವೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಆರೋಪಿಸಿದ್ದಾರೆ.
ರವಿವಾರ ಸಂಜೆ ಹೈದರಾಬಾದ್‌ನಲ್ಲಿ ಭಾರತೀಯ ಜನತಾ ಯುವ ಮೋರ್ಚಾ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಅವರು ಬಡತನ, ನಿರುದ್ಯೋಗ, ಅಭದ್ರತೆ ನಿರ್ಮೂಲನೆ ಮಾಡಿ ಎಂದು ಹೇಳುತ್ತಿದ್ದರೆ, ಪ್ರತಿಪಕ್ಷಗಳ ನಾಯಕರು ಮೋದಿಯವರನ್ನೇ ನಿರ್ಮೂಲನೆ ಮಾಡಿ ಎಂದು ಬೊಬ್ಬಿಡುತ್ತಿದ್ದಾರೆ.
ಮಹಾಮೈತ್ರಿಗೆ ನೀತಿಯೂ ಇಲ್ಲ, ನಾಯಕನೂ ಇಲ್ಲ, ತತ್ವಗಳೂ ಇಲ್ಲ ಎಂದೂ ಶಾ ಲೇವಡಿ ಮಾಡಿದರು.
ಗದ್ದರ್ ಸ್ಪರ್ಧೆ: ಇದೇ ವೇಳೆ, ಕ್ರಾಂತಿಕಾರಿ ತೆಲುಗು ಕವಿ ಗುಮ್ಮಡಿ ವಿಠಲ್ ರಾವ್ ಅಲಿಯಾಸ್ ಗದ್ದರ್ ಅವರು ಈ ಬಾರಿಯ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇತರೆ ರಾಜಕೀಯ ಪಕ್ಷಗಳು ಬೆಂಬಲ ನೀಡಿದರೆ, ಸಿಎಂ ಕೆಸಿ ಚಂದ್ರಶೇಖರ್ ರಾವ್ ವಿರುದ್ಧ ಕಣಕ್ಕಿಳಿಯುತ್ತೇನೆ ಎಂದಿದ್ದಾರೆ ಗದ್ದರ್.
ರಾಹುಲ್‌ಗೆ ರಾಜೇ ಸವಾಲು: ಏತನ್ಮಧ್ಯೆ, ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಮುಖ್ಯಮಂತ್ರಿ ಹುದ್ದೆಗಳಲ್ಲಿ ಶೇ.50ರಷ್ಟು ಪಾಲು ಮಹಿಳೆಯರಿಗೆ ನೀಡಲಾಗುತ್ತದೆ ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಹೇಳಿಕೆಗೆ ರಾಜಸ್ಥಾನ ಸಿಎಂ ವಸುಂಧರಾ ರಾಜೇ ತಿರುಗೇಟು ನೀಡಿದ್ದಾರೆ. ರಾಹುಲ್‌ರದ್ದು ಬರೀ ಸುಳ್ಳು. ಕಾಂಗ್ರೆಸ್ ಆಡಳಿತವಿರುವ ಯಾವ ರಾಜ್ಯದಲ್ಲಿ ಮಹಿಳಾ ಸಿಎಂಗಳಿದ್ದಾರೆ ಎಂದು ಅವರು ಉತ್ತರಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ ರಾಜೇ.