Advertisement

ಆಪರೇಷನ್‌ಗಿಲ್ಲ ಶಾ ನಿಶಾನೆ

06:00 AM Aug 09, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಆಪರೇಷನ್‌ ಕಮಲ ಮೂಲಕ ಸಮ್ಮಿಶ್ರ ಸರ್ಕಾರ ಕೆಡವಲು ತುದಿಗಾಲಲ್ಲಿ ನಿಂತಿರುವ ಬಿಜೆಪಿ ರಾಜ್ಯ ನಾಯಕರಿಗೆ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ರೆಡ್‌ ಸಿಗ್ನಲ್‌ ತೋರಿದ್ದಾರೆ.

Advertisement

ರಾಜ್ಯ ನಾಯಕರ ಆಪರೇಷನ್‌ ಕಮಲ ಕಾರ್ಯಾಚರಣೆ ಯಶಸ್ವಿಯಾಗುವ ಬಗ್ಗೆ ಅಮಿತ್‌ ಶಾಗೆ ಸಂಪೂರ್ಣ ನಂಬಿಕೆ ಹುಟ್ಟುತ್ತಿಲ್ಲ. ಹೀಗಾಗಿ, ಬಿಜೆಪಿಗೆ ಸೇರ್ಪಡೆ ಅಥವಾ ಬೆಂಬಲ ಸೂಚಿಸಲು ಸಿದ್ಧವಿರುವ ಅತೃಪ್ತ ಜೆಡಿಎಸ್‌-ಕಾಂಗ್ರೆಸ್‌ ಶಾಸಕರ ಪಟ್ಟಿ ನೀಡುವಂತೆ ಸೂಚನೆ ನೀಡಲಾಗಿದೆ.

ದಿಢೀರ್‌ ದೆಹಲಿ ಭೇಟಿ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಸಹ ಅಮಿತ್‌ ಶಾ ಜತೆ ಆಪರೇಷನ್‌ ಕಮಲ ಕಾರ್ಯಾಚರಣೆ ಬಗ್ಗೆ ಪ್ರಸ್ತಾಪಿಸಿದರು. ಅಸಮಾಧಾನಿತ ಕಾಂಗ್ರೆಸ್‌ ಶಾಸಕರಾದ ಎಂ.ಬಿ.ಪಾಟೀಲ್‌, ಸತೀಶ್‌ ಜಾರಕಿಹೊಳಿ, ಬಿ.ಸಿ.ಪಾಟೀಲ್‌ ಜತೆಗೆ ಪಕ್ಷ ಸಂಪರ್ಕದಲ್ಲಿರುವ ಕುರಿತು ಮಾಹಿತಿ ನೀಡಿದರು.

ಅಮಿತ್‌ ಶಾ ಅವರು ಎಲ್ಲವನ್ನೂ ಸಮಾಧಾನದಿಂದಲೇ ಕೇಳಿಸಿಕೊಂಡು ವಿನಾ ಕಾರಣ ಸರ್ಕಾರ ಕೆಡವಲು ಕೈ ಹಾಕಿದರೆ ಕಳಂಕ ಬರುತ್ತದೆ. ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗದೆ ಅವರಲ್ಲೇ ಜಗಳ ಉಂಟಾದಾಗ ಅವಕಾಶ ಸಿಕ್ಕರೆ ನೋಡೋಣ. ಸಮ್ಮಿಶ್ರ ಸರ್ಕಾರ ಬೀಳಬೇಕಾದರೆ ಕನಿಷ್ಠ 25 ಶಾಸಕರು ಸರ್ಕಾರದ ವಿರುದ್ಧ ಸಮರ ಸಾರಬೇಕು. ಅದಕ್ಕೆ ಸಿದ್ಧವಿರುವವರು ಯಾರು ಎಂಬುದರ ಪಟ್ಟಿ ನಮಗೆ ಕೊಡಿ ಆ ನಂತರ ನಾವು ಮುಂದೇನು ಮಾಡಬೇಕು ಎಂದು ಹೇಳುತ್ತೇವೆ ಎಂದು ಹೇಳಿ ಕಳುಹಿಸಿದ್ದಾರೆ .

ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಅತೃಪ್ತ ಶಾಸಕರ ಪಟ್ಟಿ ತರಿಸಿಕೊಂಡು ಅವರ ಚಲನ-ವಲನ ಮೇಲೆ ನಿಗಾವಹಿಸುವುದು.ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಉರುಳಿಸುವಷ್ಟು ಸಂಖ್ಯೆಯ ಶಾಸಕರು ಬಿಜೆಪಿಗೆ ಬರುವುದು ಖಚಿತಪಡಿಸಿಕೊಂಡ ನಂತರ ಆ ಪ್ರಯತ್ನಕ್ಕೆ ಕೈ ಹಾಕುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Advertisement

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಡಿ ಲೋಕಸಭೆ ಚುನಾವಣೆಗೆ ಹೋಗುವುದರಿಂದ ಎರಡೂ ಪಕ್ಷಗಳಲ್ಲಿ ಅತೃಪ್ತಗೊಂಡವರು ಬಿಜೆಪಿ ಸೇರಬಹುದು. ಅದರಿಂದ ಪಕ್ಷ ಬಲಿಷ್ಠವಾಗುತ್ತದೆ ಎಂಬ ಲೆಕ್ಕಾಚಾರವೂ ಇದೆ ಎನ್ನಲಾಗಿದೆ.

ಪಟ್ಟಿ ಸಲ್ಲಿಕೆ
ಈ ಮಧ್ಯೆ,ಲೋಕಸಭೆ ಮೈತ್ರಿ ವಿರೋಧಿಸಿ ಬಿಜೆಪಿಗೆ ಬರುತ್ತಿರುವವರ ಪಟ್ಟಿ ಸಹ ಅಮಿತ್‌ ಶಾ ಅವರಿಗೆ ಸಲ್ಲಿಸಲಾಗಿದ್ದು,ಅದರಲ್ಲಿ ಮಾಜಿ ಸಚಿವರಾದ ಎ.ಮಂಜು, ಚೆಲುವರಾಯಸ್ವಾಮಿ,ಮಾಜಿ ಶಾಸಕರಾದ ಎಚ್‌.ಸಿ.ಬಾಲಕೃಷ್ಣ, ಕೆ.ಎನ್‌.ರಾಜಣ್ಣ, ವಿಧಾನಪರಿಷತ್‌ ಸದಸ್ಯ ಪುಟ್ಟಣ್ಣ ಅವರ ಹೆಸರು ಇದೆ.

ಎಚ್‌.ಸಿ.ಬಾಲಕೃಷ್ಣ ಅಥವಾ ಪುಟ್ಟಣ್ಣ ಅವರನ್ನು ಬಿಜೆಪಿಗೆ ಕರೆತಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಕಣಕ್ಕಿಳಿಸುವ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಹೇಳಲಾಗಿದೆ.

ಸಮ್ಮಿಶ್ರ ಸರ್ಕಾರ ಉರುಳಿಸಲು ನಾವು ಪ್ರಯತ್ನಿಸುತ್ತಿಲ್ಲ.ಆಪರೇಷನ್‌ ಕಮಲ ಅಗತ್ಯವಿಲ್ಲ. ದಿನೇಶ್‌ಗುಂಡೂರಾವ್‌, ಡಿ.ಕೆ.ಶಿವಕುಮಾರ್‌ ಆರೋಪದಲ್ಲಿ ಹುರುಳಿಲ್ಲ. ಈ ಸರ್ಕಾರ ತನ್ನಿಂತಾನೆ ಬೀಳುತ್ತದೆ, ನಾವು ಬೀಳಿಸುವ ಅಗತ್ಯವಿಲ್ಲ. ಪ್ರತಿಪಕ್ಷವಾಗಿ ನಮ್ಮ ಕೆಲಸ ನಾವು ಮಾಡುತ್ತೇವೆ. ತುರ್ತು ಸಭೆ ನಿಮಿತ್ತ ದೆಹಲಿಗೆ ಹೋಗಿದ್ದೆ.
– ಬಿ.ಎಸ್‌.ಯಡಿಯೂರಪ್ಪ

– ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next