Advertisement

ರಾಜ್ಯಕ್ಕೆ ನಾಲ್ವರು ಡಿಸಿಎಂ?, ಮಹತ್ವದ ಬದಲಾವಣೆಗೆ ವರಿಷ್ಠರ ಸಿದ್ಧತೆ‌

02:37 AM May 03, 2022 | Team Udayavani |

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಗಮನವು ಸರಕಾರದಲ್ಲಿ ದೊಡ್ಡ ಮಟ್ಟದ ಬದಲಾವಣೆಯ ಸುಳಿವು ನೀಡಿದೆ.

Advertisement

ಸಂಪುಟ ಪುನಾರಚನೆ ಹಾಗೂ ನಾಯಕತ್ವ ಬದಲಾವಣೆಯ ಕುರಿತು ಚರ್ಚೆಯಾಗುತ್ತಿರುವಂತೆಯೇ, ಹೊಸ ಬೆಳವಣಿಗೆ ಎಂಬಂತೆ ಮತ್ತೆ ಡಿಸಿಎಂ ಹುದ್ದೆ ಸೃಷ್ಟಿಸಲು ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಸೋಮವಾರ ರಾತ್ರಿಯೇ ಅಮಿತ್‌ ಶಾ ರಾಜ್ಯಕ್ಕೆ ಆಗಮಿಸಿದ್ದು, ಮಂಗಳವಾರ ಪಕ್ಷದ ನಾಯಕರ ಜತೆ ವಿವಿಧ ಹಂತದಲ್ಲಿ ಮಾತುಕತೆ ನಡೆಸಲಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಸರಕಾರದಲ್ಲಿ ಮಹತ್ವದ ಬದಲಾವಣೆ ತರಲು ಬಿಜೆಪಿ ವರಿಷ್ಠರು ಸಿದ್ಧತೆ ನಡೆಸಿದ್ದಾರೆ.

ಮೂರು ಅಥವಾ ನಾಲ್ಕು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ಕುರಿತು ಚಿಂತನೆ ನಡೆದಿದ್ದು, ಮಂಗಳವಾರ ಶಾ ನಡೆಸುವ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಭೋಜನಕೂಟದಲ್ಲಿ ಭಾಗಿ
ಶಾ ಮಂಗಳವಾರ ಸಿಎಂ ಬಸವರಾಜ ಬೊಮ್ಮಾಯಿ ಅವರ ಸರಕಾರಿ ನಿವಾಸದಲ್ಲಿ ಭೋಜನ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಚಿವ ಸಂಪುಟದ ಸದಸ್ಯರು, ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳಿಗೂ ಭೋಜನ ಕೂಟಕ್ಕೆ ಸಿಎಂ ಬೊಮ್ಮಾಯಿ ಆಹ್ವಾನ ನೀಡಿರುವುದು ಚರ್ಚೆಗೆ ಹಾಗೂ ಕುತೂಹಲಕ್ಕೆ ಗ್ರಾಸವಾಗಿದೆ. ಅನಂತರ ಖಾಸಗಿ ಹೊಟೇಲ್‌ನಲ್ಲಿ ಅಮಿತ್‌ ಶಾ ಪಕ್ಷದ ಪದಾಧಿಕಾರಿಗಳು ಹಾಗೂ ಕೋರ್‌ ಕಮಿಟಿ ಸದಸ್ಯರೊಂದಿಗೆ ವಿಶೇಷ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಈ ಸಭೆಯಲ್ಲಿ ಪ್ರಮುಖವಾಗಿ ಚುನಾವಣೆಯ ಸಿದ್ಧತೆ, ಪಕ್ಷದ ಸಂಘಟನೆ ಹಾಗೂ ಸರಕಾರದ ಯೋಜನೆಗಳ ಅನುಷ್ಠಾನ ಮತ್ತು ಅವುಗಳನ್ನು ಜನರಿಗೆ ತಲುಪಿಸುವ ಕುರಿತು ಚರ್ಚೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ನಡ್ಡಾ ನಿವಾಸದಲ್ಲಿ ಸಭೆ
ಇನ್ನೊಂದೆಡೆ, ಶಾ ಆಗಮನಕ್ಕೂ ಮುನ್ನ ದಿಲ್ಲಿಯಲ್ಲಿ ಬಿಜೆಪಿಯ ಪ್ರಮುಖ ನಾಯಕರು ಹಾಗೂ ಆರೆಸ್ಸೆಸ್‌ನ ಪ್ರಮುಖರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಸಂಘಟನಾತ್ಮಕ ವಿಚಾರಗಳು, ಪಕ್ಷ ಹಾಗೂ ಸರಕಾರದ ನಡುವಿನ ಸಮನ್ವಯತೆ, ಕರ್ನಾಟಕ ಸಹಿತ ಮುಂಬರುವ ವಿಧಾನಸಭೆ ಚುನಾವಣ ಕಾರ್ಯತಂತ್ರಗಳ ಕುರಿತೂ 3 ಗಂಟೆ ಕಾಲ ಚರ್ಚೆ ನಡೆದಿದೆ ಎನ್ನಲಾಗಿದೆ.

ಬಿಎಸ್‌ವೈ- ಬೊಮ್ಮಾಯಿ ಭೇಟಿ
ಮಹತ್ವದ ಬೆಳವಣಿಗೆಯೊಂದರಲ್ಲಿ ಸೋಮ ವಾರ ತಡರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಯಾಗಿ ಮಾತುಕತೆ ನಡೆಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯ ಪ್ರವಾಸದ ವೇಳೆ ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗುವುದಿಲ್ಲ. ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ. ಈ ಬಗ್ಗೆ ಅವರು ನಿರ್ಧಾರ ಕೈಗೊಳ್ಳಲಿದ್ದಾರೆ. ಇದರಲ್ಲಿ ಪಕ್ಷದ ವರಿಷ್ಠರು ಹಸ್ತಕ್ಷೇಪ ಮಾಡುವುದಿಲ್ಲ.
– ನಳಿನ್‌ ಕುಮಾರ್‌ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next