ಧಾರವಾಡ: ಗುಜರಾತ್‌ದಲ್ಲಿರುವ ರಾಷ್ಟ್ರೀಯ ವಿಧಿವಿಜ್ಞಾನ ಶಾಸ್ತ್ರ ವಿವಿಯ ಎಂಟು ಕ್ಯಾಂಪಸ್‌ಗಳು ದೇಶದ ವಿವಿಧ ರಾಜ್ಯಗಳಲ್ಲಿದ್ದು, 9ನೇ ಕ್ಯಾಂಪಸ್ ಧಾರವಾಡದಲ್ಲಿ ಆರಂಭವಾಗಲಿದೆ. ಇದ ರೊಂದಿಗೆ ದಕ್ಷಿಣ ಭಾರತದಲ್ಲೇ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ, ಗುಣಮಟ್ಟದ ವಿವಿ ಕ್ಯಾಂಪಸ್ ಸ್ಥಾಪಿತವಾದಂತಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿ ಭಾನುವಾರ ವಿವಿ ಕ್ಯಾಂಪಸ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ.28ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೂತನ ಕ್ಯಾಂಪಸ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಕ್ಯಾಂಪಸ್ ನಿರ್ಮಾಣಕ್ಕೆ ಸುಮಾರು 50ಕ್ಕೂ ಹೆಚ್ಚು ಎಕರೆ ಭೂಮಿ ಅಗತ್ಯವಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಪ್ರಯೋಗಾಲಯ, ಆಡಳಿತ ಭವನ, ಕ್ಲಾಸ್ ರೂಂ, ವಿದ್ಯಾರ್ಥಿ ನಿಲಯ, ಸಿಬ್ಬಂದಿಗೆ ವಸತಿ ಸಮುತ್ಛಯ ಮುಂತಾದ ಮೂಲ ಸೌಕರ್ಯ ನಿರ್ಮಾಣಕ್ಕೆ ವಿಶಾಲ ಪ್ರದೇಶದ ಅಗತ್ಯವಿದೆ. ವಿವಿಗೆ ಈಗಾಗಲೇ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದ್ದು, ಕೇಂದ್ರ ಸಚಿವ ಸಂಪುಟ ತೀರ್ಮಾನದಂತೆ ಕೇಂದ್ರದಿಂದ ತಜ್ಞರ ತಂಡ ಆಗಮಿಸಿ ಕ್ಯಾಂಪಸ್ ನಿರ್ಮಾಣದ ರೂಪುರೇಷೆಗಳನ್ನು ಅಂತಿಮಗೊಳಿಸಲಿದೆ. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ವಿಶ್ವವಿದ್ಯಾಲಯವಾಗಿ ಪರಿವರ್ತನೆಗೊಳ್ಳಲಿದೆ ಎಂದರು.