Advertisement

ಬೆಳಗಾವಿಯಲ್ಲಿ ಇಂದು “ಶಾ’ಕಿಂಗ್‌ ಸಭೆ; ಯತ್ನಾಳ, ರಮೇಶ್‌ಗೆ “ಎಚ್ಚರಿಕೆ ಪಾಠ’ಕ್ಕೆ ಸಿದ್ಧತೆ

10:32 PM Jan 27, 2023 | Team Udayavani |

ಬೆಳಗಾವಿ: ಚುನಾವಣಾ ಚಾಣಕ್ಯ, ಬಿಜೆಪಿ ವರಿಷ್ಠ ನಾಯಕ ಅಮಿತ್‌ ಶಾ ಗಡಿ ಜಿಲ್ಲೆ ಬೆಳಗಾವಿ ಭೇಟಿ ಮತ್ತು ಜಿಲ್ಲೆಯ ಪ್ರಮುಖ ನಾಯಕರ ಜತೆಗಿನ ಸಭೆ ಹೊಸ ಸಂಚಲನ ಮೂಡಿಸಿದೆ.

Advertisement

ಇದು ಮುಖಂಡರ ಸಭೆ ಎನ್ನುವದಕ್ಕಿಂತ ಪಕ್ಷದ ವರಿಷ್ಠರ ಅಂತಿಮ ತೀರ್ಪಿನ ಸಂದೇಶದ ಸಭೆ ಎನ್ನುವಂತಿದೆ. ಇಲ್ಲಿ ಚರ್ಚೆ, ಅಭಿಪ್ರಾಯ ಆಲಿಸುವುದು, ಅರ್ಜಿಗಳನ್ನು ಸಲ್ಲಿಸುವುದು, ಮೌಖೀಕವಾಗಿ ದೂರು ಹೇಳುವುದಕ್ಕೆ ಅವಕಾಶ ಇಲ್ಲ. ಅಮಿತ್‌ ಶಾ ಹೇಳಿದ್ದನ್ನು ಕೇಳಬೇಕು. ಅದರಂತೆ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಾರಿ ನೋಡಿಕೊಳ್ಳಬೇಕು. ಹೀಗಾಗಿ ಈ ಸಭೆ ಬಹಳ ಮಹತ್ವ ಪಡೆದುಕೊಂಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಭೆಯಲ್ಲಿ ರಮೇಶ ಜಾರಕಿಹೊಳಿ ನಡೆ ಬಗ್ಗೆ ಹೆಚ್ಚು ಪ್ರಸ್ತಾಪವಾಗುವ ಸಾಧ್ಯತೆ ಇದೆ. ಜತೆಗೆ ಯತ್ನಾಳ್‌ಗೂ ಬುಲಾವ್‌ ನೀಡಲಾಗಿದ್ದು “ಎಚ್ಚರಿಕೆ ಪಾಠ’ ಮಾಡುವ ಸಾಧ್ಯತೆ ಇದೆ.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಮಿತ್‌ ಶಾ ಜಿಲ್ಲೆಗೆ ಭೇಟಿ ಮತ್ತು ಜಿಲ್ಲಾ ನಾಯಕರ ಸಭೆ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಅಮಿತ್‌ ಶಾ ಜತೆಗಿನ ಸಭೆಗೆ ಮುನ್ನ ಜಿಲ್ಲೆಯ ನಾಯಕರು ಈಗಾಗಲೇ ಒಂದು ಸುತ್ತಿನ ಸಭೆ ನಡೆಸಿ ಸಮಾಲೋಚನೆ ನಡೆಸಿದ್ದಾರೆ.

ಜಿಲ್ಲೆಯಲ್ಲಿ ಬಿಜೆಪಿ ಗಟ್ಟಿಯಾಗಿ ನೆಲೆಯೂರಿದ್ದರೂ ಆಂತರಿಕವಾಗಿ ಬಣ ರಾಜಕೀಯ ಪಕ್ಷಕ್ಕೆ ಸಾಕಷ್ಟು ಇರುಸು ಮುರುಸು ಉಂಟು ಮಾಡಿದೆ. ಜಿಲ್ಲೆಯ ಪ್ರಮುಖ ನಾಯಕರು ಪಕ್ಷದ ತತ್ವ-ಸಿದ್ಧಾಂತ, ನಿಯಮಗಳನ್ನು ಬದಿಗಿಟ್ಟು ತಮ್ಮದೇ ಗುಂಪು ರಚಿಸಿಕೊಂಡು ಅದರ ಮೂಲಕ ಚುನಾವಣೆ ಮಾಡುತ್ತಿರುವುದು ಪಕ್ಷದ ಕಾರ್ಯಕರ್ತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಪಕ್ಷಕ್ಕಿಂತ ವೈಯಕ್ತಿಕ ಪ್ರತಿಷ್ಠೆಯ ಮೇಲೆ ಚುನಾವಣೆ ಎದುರಿಸುತ್ತ ಬಂದಿರುವ ಕೆಲ ನಾಯಕರು ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾರಣರಾಗಿರುವುದು ಗುಟ್ಟಾಗಿ ಉಳಿದಿಲ್ಲ. ಇದೇ ಕಾರಣದಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಒಂದೆರಡು ಸ್ಥಾನಗಳನ್ನು ಕಳೆದುಕೊಳ್ಳಬೇಕಾಯಿತು. ನಂತರ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಸಹ ಇದೇ ಸ್ಥಿತಿ ಮುಂದುವರಿಯಿತು. ಪರಿಷತ್‌ ಚುನಾವಣೆಯಲ್ಲಿ ವೈಯಕ್ತಿಕ ಪ್ರತಿಷ್ಠೆಯ ಪರಿಣಾಮ ಸುಲಭವಾಗಿ ಬರಬಹುದಾಗಿದ್ದ ಎರಡು ಸ್ಥಾನಗಳು ಕೈ ತಪ್ಪಿದವು.

Advertisement

ಈ ಎಲ್ಲ ಅಂಶಗಳು ಈಗ ಬರುವ ವಿಧಾನಸಭೆ ಚುನಾವಣೆಯಲ್ಲಿ ಪರಿಣಾಮ ಬೀರಲಿವೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ವರಿಷ್ಠ ನಾಯಕ ಅಮಿತ್‌ ಶಾ ಜಿಲ್ಲೆಗೆ ಭೇಟಿ ನೀಡಿ ಪ್ರಮುಖ ನಾಯಕರ ಜತೆಗೆ ಸಭೆ ನಡೆಸುತ್ತಿರುವುದು ಬಹಳ ಮಹತ್ವ ಪಡೆದುಕೊಂಡಿದೆ. ಕುತೂಹಲಕ್ಕೂ ಕಾರಣವಾಗಿದೆ.

ಏನೇನು ಕಾರ್ಯಕ್ರಮ?
ಎಂ.ಕೆ.ಹುಬ್ಬಳ್ಳಿಯಲ್ಲಿ ಸಂಜೆ ಕಾರ್ಯಕರ್ತರ ಸಭೆ ಮುಗಿಸಿ ನೇರವಾಗಿ ಬೆಳಗಾವಿಗೆ ಬರಲಿರುವ ಅಮಿತ್‌ ಶಾ ನಗರದ ಯುಕೆ 27 ಹೋಟೆಲ್‌ನಲ್ಲಿ ಜಿಲ್ಲೆಯ ಪ್ರಮುಖ ನಾಯಕರ ಜತೆ ಸುದೀರ್ಘ‌ ಮಾತುಕತೆ ನಡೆಸಲಿದ್ದಾರೆ. ಎಷ್ಟು ಸಮಯ ಈ ಸಭೆ ನಡೆಯುತ್ತದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಆದರೆ ಸಭೆಯಲ್ಲಿ ಮುಂದಿನ ಚುನಾವಣೆಯ ಕಾರ್ಯತಂತ್ರ, ನಾಯಕರ ನಡುವಿನ ಭಿನ್ನಮತ, ಗುಂಪುಗಾರಿಕೆ, ಲಿಂಗಾಯತ ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟ, ಅದರಿಂದ ಚುನಾವಣೆ ಮೇಲೆ ಆಗುವ ಪರಿಣಾಮದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಭೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಗ್ಗೆ ರಮೇಶ ಜಾರಕಿಹೊಳಿ ಇತ್ತೀಚಿನ ಹೇಳಿಕೆಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ. ಜಾರಕಿಹೊಳಿ ಅವರು ಮಹಿಳೆಯರು ಮತ್ತು ಲಿಂಗಾಯತ ಸಮಾಜದ ಬಗ್ಗೆ ಆಡಿರುವ ಮಾತುಗಳಿಂದ ಚುನಾವಣೆ ಮೇಲೆ ಅಗುವ ಪರಿಣಾಮಗಳ ಕುರಿತು ಜಿಲ್ಲೆಯ ನಾಯಕರು ಸಭೆಯಲ್ಲಿ ಪ್ರಸ್ತಾಪ ಮಾಡಬಹುದು ಎನ್ನಲಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next