ಬೆಳಗಾವಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಉತ್ತರ ಕ್ಷೇತ್ರದ ಪ್ರಮುಖ ಬೀದಿಗಳಲ್ಲಿ ಅಬ್ಬರದ ರೋಡ್ ಶೋ ನಡೆಸಿದರು.
ಶನಿವಾರ ಸಂಜೆ ಧರ್ಮವೀರ ಸಂಭಾಜಿ ವೃತ್ತದಿಂದ ಆತಂಭಿಸಿದ ರೋಡ್ ಶೋ ವೇಳೆ ಜನಸಾಗರವೇ ಹರಿದು ಬಂದಿತ್ತು. ಕೇಸರಿ ಪೇಟಾ ಧರಿಸಿದ್ದ ಮಹಿಳೆಯರು, ಯುವಕರು ಅತಿ ಹಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ರೋಡ್ ಶೋ ಸಾಗಿದ ಮಾರ್ಗದೆಲ್ಲೆಡೆ ಬಿಜೆಪಿ ಹಾಗೂ ಭಗವಾ ಧ್ವಜಗಳು ರಾರಾಜಿಸಿದವು.
ಧರ್ಮವೀರ ಸಂಭಾಜಿ ವೃತ್ತದಿಂದ ಆರಂಭವಾದ ರೋಡ್ ಶೋ ಕಿರ್ಲೋಸ್ಕರ್ ರಸ್ತೆ, ಮಾರುತಿ ಗಲ್ಲಿ ಮೂಲಕಗಣಪತಿ ಗಲ್ಲಿವರೆಗೆ ನಡೆಯಿತು. ರಸ್ತೆಯ ಇಕ್ಕೆಲಗಳಲ್ಲಿ ಜನರು ನಿಂತುಕೊಂಡಿದ್ದರು. ಭಾರತ ಮಾತಾ ಕೀ ಜೈ ಎಂಬ ಘೋಷಣೆ ಮೊಳಗಿಸಿದರು.
ಅಮಿತ್ ಶಾ ಅವರನ್ನು ಜನರು ಸಮೀಪದಿಂದ ನೋಡಿ ಕಣ್ತುಂಬಿಕೊಂಡರು. ವಿವಿಧ ವಾದ್ಯ ಮೇಳಗಳು, ಕಲಾ ತಂಡಗಳು ರೋಡ್ ಶೋ ದಲ್ಲಿ ಪಾಲ್ಗೊಂಡಿದ್ದವು. ಛತ್ರಪತಿ ಶಿವಾಜಿ ಮಹಾರಾಜರ ವೇಷ ಧರಿಸಿದ ಮಕ್ಕಳು ಮೆರವಣಿಗೆಗೆ ಮೆರುಗು ತಂದರು.
Related Articles
ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ, ಸಂಸದೆ ಮಂಗಲಾ ಅಂಗಡಿ, ಶಾಸಕ ಅನಿಲ್‌ಬೆನಕೆ, ಅಭ್ಯರ್ಥಿ ಡಾ. ರವಿ ಪಾಟೀಲ ಇತರರು ಇದ್ದರು.
ಭ್ರಷ್ಟ ಕಾಂಗ್ರೆಸ್ ದೂರ ಮಾಡೋಣ
ಕರ್ನಾಟಕದ ಈ ಬಾರಿಯ ಚುನಾವಣೆ ಭ್ರಷ್ಟಾ ಕಾಂಗ್ರೆಸ್ ಪಕ್ಷವನ್ನು ದೂರ ಮಾಡಬೇಕಿದೆ. ಮುಸ್ಲಿಂರಿಗೆ ಇದ್ದ ಶೇ. 4ರಷ್ಟು ಮೀಸಲಾತಿಯನ್ನು ತೆಗೆದು ಎಸ್ ಸಿ, ಎಸ್ ಟಿ, ಒಬಿಸಿ, ಲಿಂಗಾಯತ ಸಮಾಜದವರಿಗೆ ನೀಡಲಾಗಿದ್ದು, ಇದನ್ನು ಮುಂದುವರಿಸುವುದಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ನಗರದಲ್ಲಿ ರೋಡ್ ಶೋ ಬಳಿಕ ಮಾತನಾಡಿದ ಅವರು, ಕರ್ನಾಟಕ ಚುನಾವಣಾ ಶಾಸಕ, ಮಂತ್ರಿ ಮಾಡುವ ಚುನಾವಣೆ ಅಲ್ಲ. ಭ್ರಷ್ಟ ಕಾಂಗ್ರೆಸ್ ಪಕ್ಷವನ್ನು ತೆಗೆದು ಹಾಕುವುದಾಗಿದೆ. ಸುಭದ್ರ ಕರ್ನಾಟಕ ಮಾಡುವುದಾಗಿದೆ. ಮೋದಿ ಕೈ ಬಲಪಡಿಸುವುದಾಗಿದೆ. ಹೀಗಾಗಿ ಈ ಬಾರಜ. ಬಿಜೆಪಿಯನ್ನು ಗೆಲ್ಲಿಸಬೇಕು ಎಂದರು.
ಕಿತ್ತೂರು ಕರ್ನಾಟಕ ಬಿಜೆಪಿಯ ಭದ್ರಕೋಟೆ ಆಗಿದೆ. ಬೆಳಗಾವಿ ಜಿಲ್ಲೆಯಲ್ಲಿ 18ರ ಪೈಕಿ 16ರಲ್ಲಿ ಗೆಲುವು ಸಾಧಿಸಲಿದ್ದೇವೆ. ಹೀಗಾಗಿ ಎಲ್ಲರೂ ತಮ್ಮ ಕುಟುಂಬದವರು ಹಾಗೂ ಸಂಬಂಧಿಕರಿಗೆ ಹೇಳಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.