Advertisement

karnataka polls;ಸೋಮಣ್ಣ ಅವರನ್ನು ಗೆಲ್ಲಿಸಿ, ದೊಡ್ಡ ವ್ಯಕ್ತಿಯಾಗಿ ಮಾಡುತ್ತೇವೆ: ಅಮಿತ್ ಶಾ

03:46 PM May 02, 2023 | Team Udayavani |

ಮೈಸೂರು : ರಾಜ್ಯದ ಹೈ-ವೋಲ್ಟೇಜ್ ಕ್ಷೇತ್ರವಾದ ಮೈಸೂರಿನ ವರುಣಾದಲ್ಲಿ ಮಂಗಳವಾರ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಕೇಂದ್ರ ಗೃಹ ಸಚಿವ ಅಮಿತ್ ಶಾ ಭರ್ಜರಿ ಪ್ರಚಾರ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿ ಪರ ವಿ. ಸೋಮಣ್ಣ ಪರ ಮತಯಾಚಿಸಿದರು.

Advertisement

ವರುಣಾ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಹೊಸಕೋಟೆ ಗ್ರಾಮದ ಬಳಿ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ ಸೋಮಣ್ಣ ಅವರನ್ನು ವರುಣಾದಲ್ಲಿ ಗೆಲ್ಲಿಸಿ ಕೊಡಿ, ನಾವು ಅವರನ್ನು ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತೇವೆ ಎಂದು ಹೇಳಿದರು.

ಸೋಮಣ್ಣ, ರೇವಣ್ಣ ಅವರಿಗೆ ಕೊಡುವ ಒಂದು ಮತ ಕರ್ನಾಟಕವನ್ನು ಸುರಕ್ಷಿತವಾಗಿಡುತ್ತದೆ. ಕರ್ನಾಟಕವನ್ನು ಸಮೃದ್ದ ಸುರಕ್ಷಿತವಾಗಿಡುವ ಕೆಲಸವನ್ನು ನರೇಂದ್ರ ಮೋದಿ ಮಾಡುತ್ತಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ಕಾಂಗ್ರೆಸ್ ಗೆದ್ದರೆ, ಸಿದ್ದರಾಮಯ್ಯ ಗೆದ್ದರೆ ಫಿಎಫ್‌ಐ ಬ್ಯಾನ್ ವಾಪಸ್ಸು ಪಡೆಯುತ್ತಾರೆ. ಕರ್ನಾಟಕವನ್ನು ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕರು ಎಟಿಎಂ ಮಾಡಿಕೊಂಡಿದ್ದಾರೆ ಸಿದ್ದರಾಮಯ್ಯ 5 ವರ್ಷದಲ್ಲಿ ಭ್ರಷ್ಟಾಚಾರ ಬಿಟ್ಟು ಏನನ್ನೂ ಮಾಡಲಿಲ್ಲ .ನಿಮ್ಮ ಕಾಲದ ಸರ್ಕಾರ ದೇಶದಲ್ಲೇ ಅತಿ ಹೆಚ್ಚು ಭ್ರಷ್ಟಾಚಾರ ಮಾಡಿದ ಸರ್ಕಾರ ಎಂದು ಹೇಳಿದರು.

ಲಿಂಗಾಯತ ಸಮಾಜ ಭ್ರಷ್ಟಾಚಾರ ತಂದಿದೆ ಅಂತಾ ಸಿದ್ದರಾಮಯ್ಯ ಹೇಳುತ್ತಾರೆ. ಯಡಿಯೂರಪ್ಪ ಬೊಮ್ಮಾಯಿ ಯೋಜನೆಗಳನ್ನು ಮುಂದುವರಿಸಿದರು. ಸಿದ್ದರಾಮಯ್ಯ ಹೇಳಿಕೆ ಇಡೀ ಲಿಂಗಾಯತ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ. ಕಾಂಗ್ರೆಸ್ ನಿಜಲಿಂಗಪ್ಪ ವೀರೇಂದ್ರ ಪಾಟೀಲ್ ಅವರನ್ನು ತೆಗೆದು ಲಿಂಗಾಯತ ಸಮುದಾಯಕ್ಕೆ ಅಪಮಾನ ಮಾಡಿದೆ ಎಂದರು.

Advertisement

ಸಿದ್ದರಾಮಯ್ಯಗೆ ಅಮಿತ್ ಶಾ ಪ್ರಶ್ನೆ
ಪ್ರತಿಬಾರಿ ನೀವು ಏಕೆ ಕ್ಷೇತ್ರವನ್ನು ಹುಡುಕುತ್ತೀರಾ ? ಒಂದು ಸಲ‌ ವರುಣಾ, ಒಂದು ಸಲ ಚಾಮುಂಡೇಶ್ವರಿ, ಬಾದಾಮಿ. ಏಕೆ ಕ್ಷೇತ್ರ ಬದಲಾಯಿಸುತ್ತೀರಾ ? ಗೆದ್ಧ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವುದಿಲ್ಲ, ಅದಕ್ಕೆ ಜನ ಅಲ್ಲಿಂದ ಓಡಿಸುತ್ತಾರೆ. ನಿವೃತ್ತಿಯಾಗುವ ನಾಯಕ ಬೇಕಾ? ಭವಿಷ್ಯದ ನಾಯಕ ಬೇಕಾ? ನೀವೆ ನಿರ್ಧರಿಸಿ ಎಂದರು.

“ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ವೇ ನಮ್ಮ ಅವಧಿಯಲ್ಲಿ ಪೂರ್ಣಗೊಂಡಿತು. ಮೈಶುಗರ್ ಆರಂಭಮಾಡಿದ್ದು ನಮ್ಮ ಸರ್ಕಾರ. ಮುಸ್ಲಿಂ ಮೀಸಲಾತಿ ತೆಗೆದದ್ದು ತಪ್ಪೋ ಸರಿಯೋ ನೀವೇ ಹೇಳಿ?, ಸಿದ್ದರಾಮಯ್ಯ ಗೆದ್ದರೆ ಲಿಂಗಾಯತರ ಮೀಸಲಾತಿ ಹೋಗುತ್ತದೆ. ಮುಸ್ಲಿಂ ಮೀಸಲಾತಿ ಬರುತ್ತದೆ,” ಎಂದು ಹರಿಹಾಯ್ದರು.

ಎಸ್ ಟಿ ಸಮುದಾಯದ ಮೀಸಲಾತಿ ಹೊರಟು ಹೋಗುತ್ತದೆ.ದಲಿತರಿಗೆ ನೀಡಿರುವ ಮೀಸಲಾತಿ ವಾಪಸ್ ತೆಗೆದುಕೊಳ್ಳುತ್ತಾರೆ.

ದೇಶವನ್ನು ಸುರಕ್ಷಿತವಾಗಿಡುವ ಕೆಲಸವನ್ನು ನರೇಂದ್ರ ಮೋದಿ ಮಾಡುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ಅಯೋಧ್ಯೆ ಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಕಾಶ್ಮೀರದ ಮೇಲೆ ಅಟ್ಯಾಕ್ ಮಾಡಿದ್ದ ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಿತ್ತು ಎಂದು ಹೇಳಿದರು.

ಸೋಮಣ್ಣ ಅವರನ್ನು ಗೆಲ್ಲಿಸಿದರೆ ರಾಜ್ಯದಲ್ಲೇ ವರುಣ ಮಾದರಿ ಮಾಡುತ್ತೇವೆ. ಭಾಷಣದ ಮೂಲಕ ಅಮಿತ್ ಶಾ ಭರವಸೆ ನೀಡಿದರು.

ಇದಕ್ಕೂ ಮುನ್ನ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಶ್ರೀನಿವಾಸ ಪ್ರಸಾದ್ ಅವರ ಆಶೀರ್ವಾದ ನಮ್ಮೆಲ್ಲರ ಮೇಲಿದೆ.”ನಮ್ಮ ಪ್ರಣಾಳಿಕೆಯಲ್ಲಿ ವಿಧವೆಯರ ಮಾಸಿಕ ಪಿಂಚಣಿಯನ್ನು 800 ರೂಪಾಯಿಯಿಂದ 2000ಕ್ಕೆ ಏರಿಸಿದ್ದೇವೆ.ಮೂರು ಸಿಲಿಂಡರ್ ಉಚಿತ, ಪ್ರತಿ ದಿನ ಅರ್ಧ ಲೀಟರ್ ಹಾಲು, 5 ಕಿ‌ಲೋ ಸಿರಿಧಾನ್ಯ ನೀಡಲು ತೀರ್ಮಾನಿಸಿದ್ದೇವೆ. ಸೋಮಣ್ಣ ಎಂತಹ ಕೆಲಸಗಾರ ಅಂತ ಎಲ್ಲರಿಗೂ ಗೊತ್ತು. ವರುಣಾ ಕ್ಷೇತ್ರದಲ್ಲಿ ಸೋಮಣ್ಣ 20-25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ‌. ಕೇವಲ ಘೋಷಣೆಯಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ.‌ ಮನೆ ಮನೆಗೆ ಹೋಗಿ ಮತಯಾಚನೆ ಮಾಡಿ ಕರೆ‌ ಎಂದು ನೀಡಿದರು.

ಸಂಸದ ಪ್ರತಾಪ್ ಸಿಂಹ, ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ವಿ ಸೋಮಣ್ಣ, ನಂಜನಗೂಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರ್ಷವರ್ಧನ್, ಟಿ ನರಸೀಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ರೇವಣ್ಣ, ಮಾಜಿ ಸಂಸದ ಹಾಗು ನಟ ಶಶಿಕುಮಾರ್, ಮಾಜಿ ಸಚಿವ ಎಂ ಶಿವಣ್ಣ, ಮಾಜಿ ಎಂಎಲ್ಸಿ ಸಿ ರಮೇಶ್, ಮುಖಂಡರಾದ ಎಲ್ ರೇವಣ್ಣಸಿದ್ಧಯ್ಯ, ಕಾಪು ಸಿದ್ಧಲಿಂಗಸ್ವಾಮಿ, ಎಸ್ ಮಹದೇವಯ್ಯ, ಎಂ ಅಪ್ಪಣ್ಣ, ಮೈಸೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ಮಂಗಳಾ ಸೋಮಶೇಖರ್ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಉಪಸ್ಥಿತರಿದ್ದರು.

ವರುಣಾ ವಿಧಾನಸಭಾ ಕ್ಷೇತ್ರದ ವಿವಿಧೆಡೆಗಳಿಂದ ಆಗಮಿಸಿರುವ ಸಾವಿರಾರು ಬಿಜೆಪಿ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next