Advertisement

ಬೊಮ್ಮಾಯಿ ಸಾರಥ್ಯ:  ಹಾಲಿ ಸಿಎಂ ನೇತೃತ್ವದಲ್ಲೇ ಮುಂದಿನ ಚುನಾವಣೆ: ಶಾ

11:50 PM Sep 02, 2021 | Team Udayavani |

ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅತ್ಯುತ್ತಮ ವಾಗಿ ಕೆಲಸ ಮಾಡುತ್ತಿದ್ದು, ಮುಂದಿನ ಚುನಾವಣೆಯನ್ನು ಅವರ ನೇತೃತ್ವದಲ್ಲೇ ಎದುರಿಸಲಾಗುವುದು. 2023ರಲ್ಲಿ ಬಿಜೆಪಿ ಸಂಪೂರ್ಣ ಬಹುಮತ ದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ…

Advertisement

-ಇದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಮೆಚ್ಚುಗೆಯ ಮಾತು. ಸಿಎಂ ಬದಲಾವಣೆ, ಸಂಪುಟ ಪುನಾರಚನೆಯಂಥ ಬೆಳವಣಿಗೆಗಳ ಬಳಿಕ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಶಾ, “ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ’ ಎಂದು ಘೋಷಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ನಗರದಲ್ಲಿ ಗುರುವಾರ ಮಾತ ನಾಡಿದ ಶಾ, ಬೊಮ್ಮಾಯಿ ಅವರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ರಾಜ್ಯದಲ್ಲಿ ಬಿಜೆಪಿ ತನ್ನನ್ನು ತಾನು ಸದೃಢಗೊಳಿಸಿಕೊಂಡಿದೆ ಎಂಬ ಮಾತುಗಳು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಕೇಳಿಬರುತ್ತಿದೆ. ಅವರು ಅಧಿಕಾರ ವಹಿಸಿಕೊಂಡ ಬಳಿಕ ಉತ್ತಮ ಆಡಳಿತ ನೀಡುತ್ತಿದ್ದಾರೆ. ಪೊಲೀಸ್‌ ಧ್ವಜವಂದನೆ, ಗೌರವ ನಿರಾಕರಿಸಿದ್ದಾರೆ. ಅನೇಕ ವಿವಿಐಪಿ ಸಂಸ್ಕೃತಿಗಳಿಗೆ ತಿಲಾಂಜಲಿ ನೀಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಬೊಮ್ಮಾಯಿ ನೇತೃತ್ವದಲ್ಲೇ ಬಿಜೆಪಿ ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.

ಮುಂದಿನ ದಿನಗಳಲ್ಲಿ ಮತ್ತೆ ಕರ್ನಾಟಕಕ್ಕೆ ಭೇಟಿ ನೀಡುತ್ತೇನೆ. ಆಗ ರಾಜ್ಯದ ಸಮಗ್ರ ಅಭಿವೃದ್ಧಿ, ಆಂತರಿಕ ಸುರಕ್ಷೆಯ ಬಗ್ಗೆ ಜನರಿಗೆ ಮಾಹಿತಿ ನೀಡುತ್ತೇನೆ. ಕರ್ನಾಟಕ ರಾಜ್ಯ ನಾಲ್ಕೂ ದಿಕ್ಕುಗಳಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗಲಿ. ದೇಶದ ಇತರ ಅಭಿವೃದ್ಧಿ ಹೊಂದಿದ ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಲಿ ಎಂದು ಆಶಿಸಿದರು.

ಲಸಿಕೆ ಬಗ್ಗೆ ಜಾಗೃತಿ ಮೂಡಿಸಿ :

Advertisement

ಕೆಲವು ರಾಜ್ಯ, ಜಿಲ್ಲೆ, ಸಮುದಾಯ, ವರ್ಗಗಳಲ್ಲಿ ಲಸಿಕೆ ಪಡೆಯುವುದಕ್ಕೆ ಹಿಂಜರಿಕೆ ಕಂಡು ಬರುತ್ತಿದೆ. ಬಿಜೆಪಿ ಕಾರ್ಯಕರ್ತರು, ಮುಖಂಡರು ಲಸಿಕೆ ಹಾಕಿಸಿಕೊಳ್ಳುವುದರ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿ. ಯಾರೂ ಲಸಿಕೆಯಿಂದ ದೂರ ಉಳಿಯದಂತೆ ನೋಡಿಕೊಳ್ಳಬೇಕು ಎಂದರು.

ಮಾಸಾಂತ್ಯಕ್ಕೆ ರಾಜ್ಯದ ಶೇ. 90 ಜನರಿಗೆ ಲಸಿಕೆ :

ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರಗಳು ಅತ್ಯಂತ ಸಮರ್ಥವಾಗಿ ಕೊರೊನಾವನ್ನು ನಿಭಾಯಿಸಿವೆ. ರಾಜ್ಯದಲ್ಲಿ ಈವರೆಗೆ 5.20 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. 4 ಕೋಟಿ ಜನರಿಗೆ ಪ್ರಥಮ, 1.16 ಕೋಟಿ ಜನರಿಗೆ ಎರಡನೇ ಡೋಸ್‌ ನೀಡಲಾಗಿದೆ. ಸೆಪ್ಟಂಬರ್‌ ಅಂತ್ಯಕ್ಕೆ ರಾಜ್ಯದ ಶೇ. 90ರಷ್ಟು ಜನರಿಗೆ ಲಸಿಕೆ ನೀಡಲಾಗುವುದು. ಕೇಂದ್ರ ಸರಕಾರವು ರಾಜ್ಯಗಳಿಗೆ ಅಗತ್ಯ ಪ್ರಮಾಣದ ಲಸಿಕೆ ಪೂರೈಸುತ್ತಿದೆ ಎಂದರು.

ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ :

ಮುಂದಿನ ವಿಧಾನಸಭೆ ಚುನಾವಣೆಯನ್ನು ಬಸವರಾಜ ಬೊಮ್ಮಾಯಿ  ನೇತೃತ್ವದಲ್ಲೇ ಎದುರಿಸಿ ಮತ್ತೂಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ದಾವಣಗೆರೆಯಲ್ಲಿ ಹೇಳಿದ್ದು, ಈ ಮೂಲಕ ನಾಯಕತ್ವದ ಕುರಿತು  ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಬೊಮ್ಮಾಯಿ ಅವರು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಒಂದೆಡೆ ಮುಖ್ಯಮಂತ್ರಿಗೆ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡಿದ್ದರೆ, ಇನ್ನೊಂದೆಡೆ ಪಕ್ಷಕ್ಕೆ ಮತ್ತು ರಾಜ್ಯಕ್ಕೆ ಸಂದೇಶವನ್ನು ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸಲಿಲ್ಲ, ಹೊಸ ನಾಯಕತ್ವಕ್ಕೆ ಅವಕಾಶ ಕೊಡಲು ಅವರು ಸ್ವಯಂಪ್ರೇರಿತರಾಗಿ  ರಾಜೀನಾಮೆ ನೀಡಿದರು. ಅವರ ಕಾರ್ಯವೈಖರಿ ಬಗ್ಗೆ ಪಕ್ಷದ ರಾಷ್ಟ್ರೀಯ ನಾಯಕರಲ್ಲಿ ಅಸಮಾಧಾನವಿಲ್ಲ ಎಂಬ  ಶಾ  ಹೇಳಿಕೆಯೂ ಕುತೂಹಲ ಮೂಡಿಸಿದೆ.

ಇತ್ತೀಚೆಗಷ್ಟೇ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಕೂಡ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದಿದ್ದರು. ಈಗ ಅಮಿತ್‌ ಶಾ ಕೂಡ ಬಹಿರಂಗವಾಗಿ ಹೇಳಿರುವುದು ರಾಜಕೀಯ ವಲಯದಲ್ಲೂ ಅಚ್ಚರಿ ಮೂಡಿಸಿದೆ.

ಅಮಿತ್‌ ಶಾ ಮಾತು ಜಾಣ್ಮೆಯ ನಡೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. “ರಾಜಕೀಯ ಚಾಣಕ್ಯ’ ಖ್ಯಾತಿಯ ಅಮಿತ್‌ ಶಾ ಪ್ರತೀ ಮಾತನ್ನು ಅಳೆದು ತೂಗಿ ಆಡುವುದರಿಂದ ಅವರ ಈ ಹೇಳಿಕೆ ಹೆಚ್ಚು ಪ್ರಾಮುಖ್ಯ ಪಡೆದಿದೆ. ಅವರ ಹೇಳಿಕೆ ರಾಜ್ಯದ ವಿಪಕ್ಷಗಳ ನಾಯಕರ ಬಾಯಿಮುಚ್ಚಿಸುವ ಜತೆಗೆ ರಾಜಕೀಯ ವಲಯದ ಹಲವು ಊಹಾಪೋಹಗಳಿಗೆ ತೆರೆ ಎಳೆದಿದೆ.

ಬಸವರಾಜ ಬೊಮ್ಮಾಯಿ ಅವರಿಗೆ, ನಿಮ್ಮದೇ ನಾಯಕತ್ವ, ನಿಮ್ಮದೇ ನೇತೃತ್ವ. ಸರಕಾರಕ್ಕೆ ಒಳ್ಳೆಯ ಹೆಸರು ಬರುವಂತೆ ನೋಡಿಕೊಂಡು ಪಕ್ಷ ಮತ್ತು ಸರಕಾರದ ನಡುವೆ ಸಮನ್ವಯ ಸಾಧಿಸಿ ಮುನ್ನಡೆಯಬೇಕು ಎಂಬ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.   ಶಾ ಮಾತಿನಿಂದ   ಬೊಮ್ಮಾಯಿಯವರ ಮುಂದಿನ ಹಾದಿ ಸ್ಪಷ್ಟವಾಗಿರಲಿದೆ ಎಂದು ಹೇಳಲಾಗಿದೆ.

ಸ್ವಪ್ರೇರಣೆಯಿಂದ ಬಿಎಸ್‌ವೈ ರಾಜೀನಾಮೆ :

ಮಾಜಿ ಸಿಎಂ ಯಡಿಯೂರಪ್ಪ ಪಕ್ಷದ ಯುವ ಮುಂದಾಳು ಗಳಿಗೆ ನಾಯಕತ್ವ ವಹಿಸಿಕೊಡಬೇಕೆಂಬ ಸದುದ್ದೇಶದಿಂದ ಸ್ವಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರೆ. ಅವರು 2  ವರ್ಷ ಗಳ ಕಾಲ ಉತ್ತಮ ಆಡಳಿತ ನೀಡಿದ್ದಾರೆ. ಕೊರೊನಾವನ್ನು ಸಮರ್ಥ

ವಾಗಿ ನಿಭಾಯಿಸಿದ್ದಾರೆ. ಗ್ರಾಮ ಮಟ್ಟದಿಂದ ಸರ್ವತೋ ಮುಖ ಅಭಿವೃದ್ಧಿ ಮಾಡಿದ್ದಾರೆ. ಹಾಲಿ ಸಿಎಂ ಬೊಮ್ಮಾಯಿ ಕೂಡ ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಎಲ್ಲರ ಸಹಕಾರದಿಂದ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ಶಾ ಶ್ಲಾಘಿಸಿದ್ದಾರೆ.

ಚಾಣಕ್ಯನ ಸಂದೇಶವೇನು? :

  • ಮುಖ್ಯಮಂತ್ರಿ ಬೊಮ್ಮಾಯಿಗೆ ಆತ್ಮಸ್ಥೈರ್ಯ ತುಂಬುವ ಯತ್ನ
  • ಪಕ್ಷ-ಸರಕಾರದ ನಡುವೆ ಸಮನ್ವಯವಿರಲಿ ಎಂಬ ಸೂಚನೆ
  • “ನಾಯಕತ್ವ’ದ ಕುರಿತು ರಾಜ್ಯ ನಾಯಕರಿಗೆ ಸ್ಪಷ್ಟ ಸಂದೇಶ ರವಾನೆ
  • ರಾಜಕೀಯ ಊಹಾಪೋಹಗಳಿಗೆ ತೆರೆ ಎಳೆಯುವ ಯತ್ನ
  • ಬೊಮ್ಮಾಯಿ ಕೆಳಗಿಳಿಯುತ್ತಾರೆ ಎನ್ನುವ ವಿಪಕ್ಷಗಳಿಗೆ ತಿರುಗೇಟು
  • ಚುನಾವಣೆಗೆ ಕಾರ್ಯಕರ್ತರನ್ನು ಸಿದ್ಧಗೊಳಿಸುವ ಯತ್ನ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next