Advertisement

ಒಂದೇ ಮಾತಿನಲ್ಲಿ ರಾಜ್ಯ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ ಅಮಿತ್‌ ಶಾ

08:32 AM Sep 03, 2021 | Team Udayavani |

ದಾವಣಗೆರೆ: ಮುಂದಿನ ವಿಧಾನಸಭೆ ಚುನಾವಣೆ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಎದುರಿಸಿ ಮತ್ತೂಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದು, ಈ ಮೂಲಕ ನಾಯಕತ್ವ ಕುರಿತು ರಾಜ್ಯ ನಾಯಕರಿಗೂ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

Advertisement

ಬೊಮ್ಮಾಯಿ ಅವರು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಒಂದೆಡೆ ಮುಖ್ಯಮಂತ್ರಿಗೆ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡಿದ್ದರೆ, ಇನ್ನೊಂದೆಡೆ ಪಕ್ಷಕ್ಕೆ ಮತ್ತು ರಾಜ್ಯಕ್ಕೆ ಸಂದೇಶವನ್ನೂ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸಲಿಲ್ಲ, ಹೊಸ ನಾಯಕತ್ವಕ್ಕೆ ಅವಕಾಶ ಕೊಡಲು ಸ್ವಯಂ ಪ್ರೇರಿತರಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರ ಕಾರ್ಯವೈಖರಿ ಬಗ್ಗೆ ಪಕ್ಷದ ರಾಷ್ಟ್ರೀಯ ನಾಯಕರಲ್ಲಿ ಯಾವುದೇ ಅಸಮಾಧಾನವಿಲ್ಲ ಎಂಬ ಅಮಿತ್‌ ಶಾ ಅವರ ಹೇಳಿಕೆಯೂ ಕುತೂಹಲ ಮೂಡಿಸಿದೆ.

ಇತ್ತೀಚೆಗಷ್ಟೇ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಸಹ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದ್ದರು. ಇದೀಗ ಅಮಿತ್‌ ಶಾ ಸಹ ಬಹಿರಂಗವಾಗಿಯೇ ಹೇಳಿರುವುದು ರಾಜಕೀಯ ವಲಯದಲ್ಲೂ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ:ರಾಜ್ಯ ಭಾಷೆಯಾಗಿ ತುಳು : ಅಧಿವೇಶನದಲ್ಲಿ ಮೊಳಗಲಿದೆ ಕರಾವಳಿಯ ಕೂಗು !

Advertisement

ಕಾರ್ಯಕ್ರಮದಲ್ಲಿ ಅಮಿತ್‌ ಶಾ ಅವರ ಮಾತುಗಳು ಒಂದು ರೀತಿಯಲ್ಲಿ ಜಾಣ್ಮೆಯ ನಡೆ ಎಂದೇ ವ್ಯಾಖ್ಯಾನಿಸಲಾಗುತ್ತಿದ್ದು, “ರಾಜಕೀಯ ಚಾಣಕ್ಯ’ ಖ್ಯಾತಿಯ ಅಮಿತ್‌ ಶಾ ಅವರು ಪ್ರತಿಯೊಂದು ಮಾತನ್ನೂ ಸಾಕಷ್ಟು ಅಳೆದು ತೂಗಿ ಮಾತನಾಡುವುದರಿಂದ ಅವರ ಈ ಹೇಳಿಕೆ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಅಮಿತ್‌ ಶಾ ಅವರಈ ಹೇಳಿಕೆ ರಾಜ್ಯದ ಪ್ರತಿಪಕ್ಷಗಳ ನಾಯಕರ ಬಾಯಿ ಮುಚ್ಚಿಸುವ ಜತೆಗೆ ರಾಜಕೀಯ ವಲಯದ ಹಲವು ಊಹಾಪೋಹಗಳಿಗೆ ತೆರೆ ಎಳೆದಂತಾಗಿದೆ.

ಬಸವರಾಜ ಬೊಮ್ಮಾಯಿ ಅವರು ಬಿ.ಎಸ್‌. ಯಡಿಯೂರಪ್ಪ ಅವರ ನೆರಳಾಗಿ (ಶ್ಯಾಡೋ ಸಿಎಂ) ಅಧಿಕಾರ ನಡೆಸುತ್ತಿದ್ದು ಬಹಳ ದಿನ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದು ಪ್ರತಿಪಕ್ಷಗಳ ನಾಯಕರ ಹೇಳಿಕೆಗೂ ಇದು ಒಂದು ರೀತಿಯ ತಿರುಗೇಟು. ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ಎದುರಿಸಲಾಗುವುದು ಎಂದು ಹೇಳುವ ಮೂಲಕ ಅವರಿಗೂ ಸಂದೇಶ ತಲುಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಬಸವರಾಜ ಬೊಮ್ಮಾಯಿ ಅವರಿಗೂ ನಿಮ್ಮದೇ ನಾಯಕತ್ವ, ನಿಮ್ಮದೇ ನೇತೃತ್ವ. ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವಂತೆ ನೋಡಿಕೊಂಡು ಪಕ್ಷ ಹಾಗೂ ಸರ್ಕಾರದ ನಡುವೆ ಸಮನ್ವಯತೆ ಸಾಧಿಸಿ ಮುನ್ನಡೆಯಬೇಕು ಎಂಬ ಸೂಚನೆಯನ್ನೂ ಪರೋಕ್ಷವಾಗಿ ಕೊಟ್ಟಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.

ಬಸವರಾಜ ಬೊಮ್ಮಾಯಿ ಅವರ ನಂತರ ಬೇರೊಬ್ಬರಿಗೆ ನಾಯಕತ್ವ ವಹಿಸಲಾಗುವುದು ಎಂಬ ಊಹಾಪೋಹಗಳಿಗೂ ತೆರೆ ಎಳೆಯುವಂತೆ ಅಮಿತ್‌ ಶಾ ಪಕ್ಷದ ಮನದಾಳ ಬಿಚ್ಚಿಟ್ಟಿದ್ದಾರೆ. ಇದರಿಂದ ಬಸವರಾಜ ಬೊಮ್ಮಾಯಿ ಅವರ ಮುಂದಿನ ಹಾದಿಯೂ ಸ್ಪಷ್ಟವಾಗಿರಲಿದೆ ಎಂದು ಹೇಳಲಾಗಿದೆ.

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next