Advertisement

ಅಮಿತ್‌ ಶಾ ಭರ್ಜರಿ ರೋಡ್‌ ಶೋ

06:40 AM Apr 30, 2018 | Team Udayavani |

ತುಮಕೂರು/ದಾವಣಗೆರೆ: ಕರ್ನಾಟಕದಲ್ಲಿ ಶತಾಯ ಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲು ಹವಣಿಸುತ್ತಿರುವ ಬಿಜೆಪಿ, ಭಾನುವಾರ ಬೆಣ್ಣೆನಗರಿ, ದಾವಣಗೆರೆ ಹಾಗೂ ಕಲ್ಪತರು ನಾಡು, ತುಮಕೂರಿನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನೇತೃತ್ವದಲ್ಲಿ ಭರ್ಜರಿ ರೋಡ್‌ ಶೋ ನಡೆಸಿತು.

Advertisement

ದಾವಣಗೆರೆಯಲ್ಲಿ ಅಮಿತ್‌ ಶಾ ಅವರು ಬಿರು ಬಿಸಿಲಿನಲ್ಲೂ ಕರ್ನಾಟಕ ನವ ನಿರ್ಮಾಣ ಯಾತ್ರೆಯ ರಥವೇರಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ, ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ್‌, ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಯಶವಂತರಾವ್‌ ಜಾಧವ್‌ ಪರ ಸುಮಾರು 2 ಕಿಲೋ ಮೀಟರ್‌ ಉದ್ದಕ್ಕೂ ಮತಯಾಚಿಸಿದರು. ವೀರಮದಕರಿ(ಹೊಂಡದ) ವೃತ್ತದಿಂದ ತೆರೆದ ಬಸ್‌ನಲ್ಲಿ ರೋಡ್‌ ಶೋ ಆರಂಭಿಸಿದ ಶಾಗೆ ಸಂಸದ ಜಿ.ಎಂ. ಸಿದ್ದೇಶ್ವರ್‌ ಸಾಥ್‌ ನೀಡಿದರು. ಹಿಂದೆ ಶಾ ಜನರತ್ತ ಕೈ ಬೀಸಿ ಬರುತ್ತಿದ್ದರೆ, ಮುಂದೆ ಡೊಳ್ಳು, ಡ್ರಂ ವಾದ್ಯಗಳು ಮೊಳಗುತ್ತಿದ್ದವು. ನಂದಿಕೋಲು ಗಮನ ಸೆಳೆಯಿತು. ರಸ್ತೆಯ ಅಕ್ಕಪಕ್ಕದ ಕಟ್ಟಡಗಳ ಮೇಲೆ ನಿಂತ ಜನರು ಹೂವಿನ ಮಳೆ ಸುರಿಸುವ ಮೂಲಕ ಅಮಿತ್‌ ಶಾಗೆ ಭರ್ಜರಿ ಸ್ವಾಗತ ಕೋರಿದರು.

ಬಳಿಕ, ಸಂಜೆ 4.30ಕ್ಕೆ ತುಮಕೂರಿಗೆ ಆಗಮಿಸಿದ ಶಾ, ನಗರದ ಮುಖ್ಯರಸ್ತೆಗಳಲ್ಲಿ ಸುಮಾರು 1.5 ಕಿ.ಮೀ ದೂರ ರೋಡ್‌ ಶೋ ನಡೆಸಿದರು. ಗ್ರಾಮಾಂತರ ಶಾಸಕ ಬಿ.ಸುರೇಶ್‌ ಗೌಡ ಸೇರಿ ಹಲವು ಮುಖಂಡರು ಸಾಥ್‌ ನೀಡಿದರು. ರೋಡ್‌ ಶೋ ನಂತರ ಶ್ರೀದೇವಿ ಕಾಲೇಜು ಸಭಾಂಗಣದಲ್ಲಿ ವಿಭಾಗೀಯ ಮಟ್ಟದ ಪ್ರಮುಖ ಕಾರ್ಯಕರ್ತರ ಸಭೆ ಏರ್ಪಡಿಸಲಾಗಿತ್ತು. ಆದರೆ, ಸಭೆ ರದ್ದಾಯಿತು. ರ್ಯಾಲಿ ಮುಗಿದ ನಂತರ ಶಾ ನೇರವಾಗಿ ಬೆಂಗಳೂರಿಗೆ ತೆರಳಿದರು.

ಸೊಗಡು ಶಿವಣ್ಣ ಗೈರು :
ಬಿಜೆಪಿಯಿಂದ ಟಿಕೆಟ್‌ ವಂಚಿತರಾಗಿರುವ ಮಾಜಿ ಸಚಿವ ಸೊಗಡು ಎಸ್‌.ಶಿವಣ್ಣ ತುಮಕೂರಿನ ರ್ಯಾಲಿಯಲ್ಲಿ ಭಾಗವಹಿಸಿರಲಿಲ್ಲ. ಆದರೆ ದಾರಿಯಲ್ಲಿ ಬಿಜೆಪಿ ಕಾರ್ಯಕರ್ತರು ಮುಖಂಡರಿಗೆ ಜೈಕಾರ ಹಾಕುವಾಗ ಶಿವಣ್ಣನವರಿಗೂ ಜೈಕಾರ ಹಾಕುತ್ತಿದ್ದುದು ಕಂಡು ಬಂತು.

ಶ್ರೀಶೈಲ ಶ್ರೀ ಭೇಟಿ ನಡೆಯಲೇ ಇಲ್ಲ!
ದಾವಣಗೆರೆ:
ಅಮಿತ್‌ ಶಾಗೆ ದಾವಣಗೆರೆಯಲ್ಲಿ ಮಠಾಧೀಶರ ಭೇಟಿ, ಆಶೀರ್ವಾದ ಪಡೆಯುವ ಭಾಗ್ಯ ಕೂಡಿ ಬರಲಿಲ್ಲ. ರೋಡ್‌ ಶೋ ಬಳಿಕ ಅಮಿತ್‌ ಶಾ ಅವರು ಇಲ್ಲಿನ ಹಳೆ ಪಿಬಿ ರಸ್ತೆಯಲ್ಲಿರುವ ಶ್ರೀಶೈಲ ಮಠದಲ್ಲಿ ಶ್ರೀಶೈಲ ಜಗದ್ಗುರು ಡಾ|ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುವರು ಎಂಬುದಾಗಿ ಬಿಜೆಪಿ ಮೂಲಗಳು ತಿಳಿಸಿದ್ದವು. ಆದರೆ, ಅಮಿತ್‌ ಶಾ ಮತ್ತು ಶ್ರೀಶೈಲ ಜಗದ್ಗುರು ಡಾ| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ ಭೇಟಿ ನಡೆಯಲೇ ಇಲ್ಲ. ಶ್ರೀಶೈಲ ಜಗದ್ಗುರುಗಳು ಪೂರ್ವ ನಿರ್ಧರಿತ ಕಾರ್ಯಕ್ರಮದಂತೆ ಹರಪನಹಳ್ಳಿ ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಏರ್ಪಡಿಸಿದ್ದ ಶ್ರೀ ಮಂಜುನಾಥಸ್ವಾಮಿ ನೂತನ ದೇವಸ್ಥಾನ ಉದ್ಘಾಟನೆ ಹಾಗೂ ನೂತನ ಶಿಲಾಮೂರ್ತಿಗಳ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಮಿತ್‌ ಶಾ ಶ್ರೀಶೈಲ ಮಠಕ್ಕೆ ಬರುವ ಬಗ್ಗೆ, ಜಗದ್ಗುರುಗಳ ಭೇಟಿ ಮಾಡುವ ಬಗ್ಗೆ ಮಠದವರಿಗೆ ಮಾಹಿತಿ ಇರಲಿಲ್ಲ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next