ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಉಪಾಹಾರಕ್ಕೆ ಆಗಮಿಸಿ ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಿದರು.
ವಿಧಾನಸಭೆ ಚುನಾವಣೆ ಸಿದ್ಧತೆ, ಮೋರ್ಚಾಗಳ ಕಾರ್ಯನಿರ್ವಹಣೆ ಜತೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ವಿಚಾರವೂ ಸಮಾಲೋಚನೆ ಸಂದರ್ಭದಲ್ಲಿ ಪ್ರಸ್ತಾಪವಾಯಿತು ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಸೋಮಣ್ಣ ಅವರು ದೆಹಲಿಗೆ ಭೇಟಿ ನೀಡಿ ಆಮಿತ್ ಶಾ ಅವರೊಂದಿಗೆ ಚರ್ಚಿಸಿ ಬಂದ ಬೆನ್ನಲ್ಲೇ ಯಡಿಯೂರಪ್ಪ ನಿವಾಸಕ್ಕೆ ಅಮಿತ್ ಶಾ ಉಪಾಹಾರ ಕೂಟಕ್ಕೆ ಬಂದು ರಾಜಕೀಯ ವಿದ್ಯಮಾನ ಚರ್ಚಿಸಿರುವುದು ಕುತೂಹಲ ಮೂಡಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಸಚಿವರಾದ ಗೋವಿಂದ ಕಾರಜೋಳ, ಶ್ರೀರಾಮುಲು ಮಾತುಕತೆ ವೇಳೆ ಉಪಸ್ಥಿತರಿದ್ದರು.
Related Articles
ಆನೆಬಲ
ಅಮಿತ್ ಶಾ ಭೇಟಿ ನಂತರ ಮಾತನಾಡಿದ ವಿಜಯೇಂದ್ರ, ಅಮಿತ್ ಶಾ ಭೇಟಿಯಿಂದ ನನಗೆ ಆನೆಬಲ ಬಂದಂತಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಅತಂತ್ರ ಪತಿಸ್ಥಿತಿ ನಿರ್ಮಾಣವಾಗಲು ಬಿಡುವುದಿಲ್ಲ ಎಂದು ಹೇಳಿದರು.
ಅಮಿತ್ ಶಾ, ಯಡಿಯೂರಪ್ಪ ಮಧ್ಯೆ ರಾಜಕೀಯ ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ. ಯಡಿಯೂರಪ್ಪ ಅವರನ್ನು ಯಾರೂ ಸೈಡ್ ಲೈನ್ ಮಾಡಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು ಎಂದು ತಿಳಿಸಿದರು.
ಅಮಿತ್ ಶಾ ಬೆನ್ನು ತಟ್ಟಿ ಮಾತಾಡಿಸಿದ್ದರಿಂದ ನನಗೆ ಆನೆ ಬಲ ಬಂದಂತಾಗಿದೆ. ಕೆಲಸದ ಒತ್ತಡದ ನಡುವೆಯೂ ಬಿಡುವು ಮಾಡುಕೊಂಡು ಬಂದಿದ್ದರು. ರಾಜ್ಯದಲ್ಲಿ ಚುನಾವಣೆ ಎದುರಿಸಬೇಕಿರುವುದರಿಂದ ಎಲ್ಲ ನಾಯಕರೂ ಸೇರಿ ಸುದೀರ್ಘ ಸಮಾಲೋಚನೆ ನಡೆಸಿದ್ದೇವೆ ಎಂದು ಹೇಳಿದರು.
ಕೇಂದ್ರ, ರಾಜ್ಯ ಸರ್ಕಾರದ ಯೊಜನೆ ಮನೆ ಮನೆಗೆ ತಲುಪಿಸುವ ಮೂಲಕ ರಾಜ್ಯದಲ್ಲಿ ಮತ್ತೂಮ್ಮೆ ಅಧಿಕಾರಕ್ಕೆ ತರಬೇಕೆಂದು ಚರ್ಚಿಸಲಾಗಿದೆ. ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಿಲ್ಲ ಎಂದು ಹಲವಾರು ಬಾರಿ ಯಡಿಯೂರಪ್ಪನವರೇ ಬಹಿರಂಗವಾಗಿ ಹೇಳಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಷಯದಲ್ಲೂ ಕೂಡ ಒತ್ತಡ ಇಲ್ಲ ಎಂದಿದ್ದಾರೆ. ಹಿಂದಿನ ಉತ್ಸಾಹದಲ್ಲೇ ಅವರು ಕೆಲಸ ಮಾಡುತ್ತಿದ್ದಾರೆ ಎಂದರು.
ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ನೀವು ಕಣಕ್ಕಿಳಿಯುವಿರಾ ಎಂದಾಗ, ಶಿಕಾರಿಪುರ ಕ್ಷೇತ್ರದ ಜನತೆ, ಮತದಾರರ ಅಭಿಪ್ರಾಯ ಮೇರೆಗೆ ಅಲ್ಲಿ ಸ್ಪರ್ಧೆ ಮಾಡುತ್ತೇನೆ. ಆದರೂ ಕೇಂದ್ರದ ನಿರ್ಧಾರಕ್ಕೆ ಈ ವಿಚಾರವನ್ನು ಬಿಡಲಾಗಿದೆ ಎಂದು ಹೇಳಿದರು.
ಸೋಮಣ್ಣ ಪಕ್ಷದ ಹಿರಿಯ ನಾಯಕರು. ಅಮಿತ್ ಶಾ ಸೂಚನೆ ಮೇರೆಗೆ ಅವರಿಗೆ ಚಾಮರಾಜನಗರ ಉಸ್ತುವಾರಿ ನೀಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿಜಯೇಂದ್ರ ಬೆನ್ನುತಟ್ಟಿದ ಶಾ
ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿದ ಅಮಿತ್ ಶಾ ಅವರನ್ನು ಹೂಗುತ್ಛ ನೀಡಿ ಸ್ವಾಗತಿಸಲು ಯಡಿಯೂರಪ್ಪ ಮುಂದಾದಾಗ, ವಿಜಯೇಂದ್ರ ಅವರಿಂದ ಹೂಗುತ್ಛ ಕೊಡಿಸುವಂತೆ ಅಮಿತ್ ಶಾ ಸೂಚಿಸಿ ಅವರಿಂದ ಹೂ ಗುತ್ಛ ಪಡೆದು ಬೆನ್ನು ತಟ್ಟಿದರು. ಖುದ್ದು ವಿಜಯೇಂದ್ರ ಅಮಿತ್ ಶಾ ಅವರಿಗೆ ಉಪಾಹಾರ ಬಡಿಸಿದ್ದು ವಿಶೇಷ.