Advertisement

ಕರಾವಳಿ ಘಟನೆ ಮಾಹಿತಿ ಪಡೆದ ಕೇಂದ್ರ ಗೃಹ ಸಚಿವ: ಆರಗ ವಿರುದ್ಧ ಶಾ ಗರಂ

12:01 AM Aug 05, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಘಟನೆಗಳ ಕುರಿತು ಮಾಹಿತಿ ಪಡೆದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಪ್ರಕರಣಗಳನ್ನು ಸರಿಯಾಗಿ ನಿರ್ವಹಿಸದಿರುವ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಗರಂ ಆಗಿದ್ದಾರೆ.  ಕಾರ್ಯಕರ್ತರ ರಕ್ಷಣೆ ಮತ್ತು ವಿಶ್ವಾಸ ಗಳಿಸಲು ಪ್ರಯತ್ನಿಸುವಂತೆ  ಸಿಎಂ ಬಸವ ರಾಜ ಬೊಮ್ಮಾಯಿಗೆ ಸೂಚಿಸಿದ್ದಾರೆ.

Advertisement

ಕೇಂದ್ರ ಸಂಸ್ಕೃತಿ ಸಚಿವಾಲಯ ಆಯೋಜಿಸಿದ್ದ “ಸಂಕಲ್ಪ್ ಸೆ ಸಿದ್ಧಿ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದ  ಶಾ, ಗುರುವಾರ ಬೆಳಗ್ಗೆ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲು, ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರೊಂದಿಗೆ ಚರ್ಚಿಸಿದರು.

ಸ್ವಂತ ನಿರ್ಧಾರ ಕೈಗೊಳ್ಳಿ:

ಕರಾವಳಿ ಭಾಗದಲ್ಲಿ  ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಕೊಲೆ ಬಳಿಕ ರಾಜ್ಯದಲ್ಲಿ ಬಿಜೆಪಿ ಕಾರ್ಯ ಕರ್ತರು ಪಕ್ಷದ ವಿರುದ್ಧವೇ ಬಹಿ ರಂಗವಾಗಿ ಆಕ್ರೋಶ ವ್ಯಕ್ತಪಡಿಸಿರುವ ಬಗ್ಗೆ ಶಾ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ. ಸಚಿವರ  ಕಾರ್ಯವೈಖರಿ ಬಗ್ಗೆ  ಗರಂ ಆಗಿ ಮಾತನಾಡಿದ್ದಾರೆ ಎನ್ನಲಾಗಿದ್ದು, ಯುವ ಮೋರ್ಚಾ ಪದಾಧಿಕಾರಿಗಳ ರಾಜೀ ನಾಮೆ, ಗೃಹ ಸಚಿವರ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರ ಮುತ್ತಿಗೆಯಂಥ ಬೆಳವಣಿಗೆಗಳು ರಾಷ್ಟ್ರ ಮಟ್ಟದಲ್ಲಿ ಪಕ್ಷಕ್ಕೆ ಮುಜುಗರ ಉಂಟು ಮಾಡಿವೆ. ಗೃಹ ಸಚಿವರಾಗಿ ಸ್ವಂತ ನಿರ್ಧಾರ ಕೈಗೊಳ್ಳಬೇಕು. ಕೇವಲ ಅಧಿಕಾರಿಗಳು ನೀಡುವ ಮಾಹಿತಿ ಆಧರಿಸಿ ಆಡಳಿತ ನಡೆಸಬಾರದು. ಅಗತ್ಯ ಬಿದ್ದರೆ ಸಿಎಂ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ ಎಂದರೆನ್ನಲಾಗಿದೆ. ಕಾರ್ಯಕರ್ತರ ರಕ್ಷಣೆ, ವಿಶ್ವಾಸ ಮುಖ್ಯ

ಯಾವುದೇ ಪಕ್ಷ ಅಧಿಕಾರದಲ್ಲಿರಲು ಕಾರ್ಯಕರ್ತರ ವಿಶ್ವಾಸ  ಮುಖ್ಯ. ರಾಜ್ಯ ಸರಕಾರ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸರಕಾರದ ಮಟ್ಟದಲ್ಲಿ  ಅವಕಾಶಗಳನ್ನು ಕಾರ್ಯಕರ್ತರಿಗೆ ನೀಡಬೇಕು. ಅಲ್ಲದೆ, ಮುಖ್ಯಮಂತ್ರಿ ಹಾಗೂ ಸಚಿವರು ಜಿಲ್ಲೆಗಳಿಗೆ ಭೇಟಿ ನೀಡಿದಾಗ ಕಾರ್ಯಕರ್ತರನ್ನು ಭೇಟಿ ಮಾಡಿ, ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು ಎಂದು ಶಾ ಹೇಳಿದರೆನ್ನಲಾಗಿದೆ.

Advertisement

2023ರ ಚುನಾವಣೆ ಸಿದ್ಧತೆ ಬಗ್ಗೆ ಕಾರ್ಯ ತಂತ್ರಗಳ ಬಗ್ಗೆ ಸಿದ್ಧತೆ ನಡೆಸುವಂತೆ  ನಳಿನ್‌ ಕುಮಾರ್‌ ಅವರಿಗೂ ಸೂಚಿಸಿದ್ದಾರೆ.

ಸಂಪುಟ ವಿಸ್ತರಣೆ ಸುಳಿವು? :

ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಬಗ್ಗೆ ಅಮಿತ್‌ಶಾ ಸುಳಿವು ನೀಡಿದ್ದು, ಆ. 15ರ ಬಳಿಕ  ಪುನಾರಚನೆ ಸಾಧ್ಯತೆ ಇದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೆಲವು ಸಮುದಾಯಗಳ ಮತ ಸೆಳೆಯಲು ಈ ಸಂಪುಟ ವಿಸ್ತರಣೆ ಎನ್ನಲಾಗಿದೆ.

ನಳಿನ್‌ ಮುಂದುವರಿಕೆ? :

ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರ 3 ವರ್ಷಗಳ ಅವಧಿ ಆಗಸ್ಟ್‌ ಅಂತ್ಯಕ್ಕೆ ಮುಗಿಯುತ್ತಿದ್ದು, ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರಿಸುವ ಕುರಿತು ಅಮಿತ್‌ ಶಾ ಸುಳಿವು ನೀಡಿದ್ದಾರೆ ಎನ್ನ ಲಾಗಿದೆ. ಸಂಘಟನೆ ಮತ್ತು ಚುನಾವಣೆ ಸಿದ್ಧತೆ ಆರಂಭಿಸುವಂತೆ ನಳಿನ್‌ಗೆ ಸೂಚಿಸಿರುವುದು ಪೂರಕ ಬೆಳವಣಿಗೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next