Advertisement

ಅಮೀನಗಡ: ಶೌಚಾಲಯ ಸಕ್ಕಿಂಗ್‌ ಯಂತ್ರ ನಿಷ್ಕ್ರಿಯ

03:33 PM May 27, 2023 | Team Udayavani |

ಅಮೀನಗಡ: ಪಟ್ಟಣದ ಮನೆ-ಮನೆಯಲ್ಲಿ ಬ್ಲಾಕ್‌ ಆಗಿ ನಿಲ್ಲುವ ಶೌಚಾಲದ ತ್ಯಾಜ್ಯ ಹೀರುವ ಸಕ್ಕಿಂಗ್‌ ಯಂತ್ರ ಕಳೆದೊಂದು ವರ್ಷದಿಂದ ಮೂಲೆ ಸೇರಿದೆ. ಲಕ್ಷಾಂತರ ರೂ. ವೆಚ್ಚದ ಸಕ್ಕಿಂಗ್‌ ಯಂತ್ರ, ವರ್ಷ ಕಳೆದರೂ, ಹೊರ ಬಂದಿಲ್ಲ. ಹೀಗಾಗಿ ಶುಚಿತ್ವವಿದ್ದಲ್ಲಿ ದೈವತ್ವವಿದೆ ಎಂಬುದಾಗಿ ಶತಮಾನದ ಹಿಂದೆಯೇ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೇಳಿದ ಮಾತು, ಇಲ್ಲಿ ಭಾಷಣಕ್ಕಿದೆ, ಪಾಲನೆಗಿಲ್ಲ ಎಂಬಂತಾಗಿದೆ.

Advertisement

ನೈರ್ಮಲ್ಯ ಸುಧಾರಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಹಲವಾರು ಯೋಜನೆಗಳು ಜಾರಿಗೆ ತಂದು ಅದಕ್ಕಾಗಿ ಕೋಟ್ಯಂತರ ರೂ, ಖರ್ಚು ಮಾಡಿವೆ. ಸ್ವಚ್ಚತೆಗಾಗಿ ಎಲ್ಲ ರೀತಿಯ ಪ್ರಯತ್ನಗಳು ನಿರಂತರವಾಗಿ ಮಾಡುತ್ತಿದ್ದಾರೆ. ಆದರೆ ಸ್ಥಳಿಯ ಪಟ್ಟಣ ಪಂಚಾಯಿತಿಯಲ್ಲಿ ಶೌಚಾಲಯದ ತ್ಯಾಜ್ಯ ಹೀರುವ (ಸಕ್ಕಿಂಗ್‌) ಯಂತ್ರ ಕೆಟ್ಟು ನಿಂತು ಸುಮಾರು ಒಂದು ವರ್ಷಕ್ಕೂ ಹೆಚ್ಚು ದಿನ ಕಳೆದಿವೆ. ಇನ್ನುವರೆಗೆ ಸಕ್ಕಿಂಗ್‌ ಯಂತ್ರ ಸಿದ್ದವಾಗಿಲ್ಲ ಮತ್ತು ಹೊಸ ಯಂತ್ರ ಕೂಡಾ ಬಂದಿಲ್ಲ. ಇದರಿಂದ ಸೆಪ್ಟಿಕ್‌ ಟ್ಯಾಂಕ ತುಂಬಿ, ಗಬ್ಬೆದ್ದು ಹೋಗಿವೆ. ಇದಕ್ಕಾಗಿ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.

ಮೂಲೆ ಸೇರಿದ ಸಕ್ಕಿಂಗ್‌ ಯಂತ್ರ: ಕಾರ್ಮಿಕರು ಶೌಚಾಲಯ ಟ್ಯಾಂಕ್‌ಗೆ ಇಳಿದು ಸ್ವತ್ಛ ಮಾಡುವುದು ಹಾಗೂ ವಿಲೇವಾರಿ ಮಾಡುವ ಪದ್ಧತಿಯನ್ನು ಸರ್ಕಾರ ನಿಷೇಧಿಸಿದೆ. ಶೌಚಾಲಯಗಳಲ್ಲಿನ ತ್ಯಾಜ್ಯವನ್ನು ಯಂತ್ರಗಳ ಮೂಲಕವೇ ವಿಲೇವಾರಿ ಮಾಡುವುದು ಸರ್ಕಾರ ಕಡ್ಡಾಯಗೊಳಿಸಿದೆ. ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಸ್ಥಳಿಯ ಪಪಂ ವತಿಯಿಂದ 3ಲಕ್ಷ ರೂ, ವೆಚ್ಚದ ಸುಸಜ್ಜಿತವಾದ ಸಕ್ಕಿಂಗ್‌ ಯಂತ್ರ ಖರೀದಿ ಮಾಡಲಾಗಿತ್ತು. ಆದರೆ ಅದು ಬಳಕೆಗಿಂತ ಮೂಲೆ ಸೇರಿದ್ದು ಹೆಚ್ಚು ಎರಡು ವರ್ಷಗಳಲ್ಲಿ ಪ್ರಾರಂಭದ ಎಂಟು ತಿಂಗಳ ಮಾತ್ರ ಬಳಕೆಗೆ ಮಾಡಲಾಗಿದೆ. ನಂತರ ಸುಮಾರು ಒಂದು ವರ್ಷಕ್ಕೂ ಹೆಚ್ಚು ದಿನ ಮೂಲೆ ಸೇರಿದೆ.

ಸಾರ್ವಜನಿಕರ ಪರದಾಟ: ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಪಪಂ ಸಕ್ಕಿಂಗ್‌ ಯಂತ್ರ ಕೆಟ್ಟು ನಿಂತಿದೆ. ಅಲ್ಲಿಂದ ಇಲ್ಲಿಯವರೆಗೂ ಸಾರ್ವಜನಿಕರು ಸಮಸ್ಯೆಯ ಬಗ್ಗೆ ಪಪಂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಸಕ್ಕಿಂಗ್‌ ಯಂತ್ರ ಮಾತ್ರ ಸಿದ್ಧವಾಗಿಲ್ಲ. ವಾರದಲ್ಲಿ ಸಿದ್ದವಾಗುತ್ತೆ ಎಂಬ ಅಧಿಕಾರಿಗಳ ಹೇಳಿಕೆಗಳು ಸುಮಾರು ಒಂದು ವರ್ಷಗಳಿಂದ ಜನ ಕೇಳುತ್ತಲೇ ಇದ್ದಾರೆ.

ಖಾಸಗಿ ಯಂತ್ರಕ್ಕೆ ಡಿಮ್ಯಾಂಡ್‌: ಸ್ಥಳೀಯ ಪಟ್ಟಣ ಪಂಚಾಯತಿಯಲ್ಲಿ ಸಕ್ಕಿಂಗ್‌ ಯಂತ್ರದ ಮೂಲಕ ಸೆಪ್ಟಿಕ್‌ ಟ್ಯಾಂಕ್‌ ಸ್ವಚ್ಚಗೊಳಿಸಲು ಸರ್ಕಾರದ ನಿಯಮಾವಳಿ ಪ್ರಕಾರ ಕಡಿಮೆ ದರವನ್ನು ನೀಡಿ ಸಾರ್ವಜನಿಕರು ಅದನ್ನು ಬಳಸುತ್ತಿದ್ದರು. ಆದರೆ ಪಪಂಯ ಯಂತ್ರ ಕೆಟ್ಟುನಿಂತ ಪರಿಣಾಮ ಖಾಸಗಿಯವರಿಗೆ ಒಂದು ಟ್ಯಾಂಕರ್‌ ಸ್ವಚ್ಚ ಮಾಡಲು ಸುಮಾರು ಮೂರು ಸಾವಿರ ರೂ. ದರವನ್ನು ನೀಡಿ ಸ್ವಚ್ಚ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕರು ಪಪಂ ಅಧಿಕಾರಿಗಳ
ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

ಬಯಲು ಶೌಚಾಲಯದ ಆತಂಕ: ಬಯಲು ಶೌಚಾಲಯ ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದು ಸರ್ಕಾರಗಳು ಹಲವಾರು ಪ್ರಯತ್ನ ಮಾಡುತ್ತಿವೆ. ಇದರ ಫಲವಾಗಿ ಬಹುತೇಕ ಜನ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸ್ಥಳಿಯ ಪಪಂಯ ಶೌಚಾಲಯ ತ್ಯಾಜ್ಯ ಹೀರುವ (ಸಕ್ಕಿಂಗ್‌) ಯಂತ್ರದ ಸಮಸ್ಯೆ ಮತ್ತು ಸೆಪ್ಟಿಕ್‌ ಟ್ಯಾಂಕ್‌ ತುಂಬಿರುವ ಮನೆಯ ಕುಟುಂಬಗಳ ಪರಿಸ್ಥಿತಿ ಕಂಡು, ಬಯಲಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಪಪಂಯ ಸಕ್ಕಿಂಗ್‌ ಯಂತ್ರ ದುರಸ್ಥಿಗೊಳಿಸಿ ಸಾರ್ವಜನಿಕರ ಸೆಪ್ಟಿಕ್‌ ಟ್ಯಾಂಕ್‌ ಸಮಸ್ಯೆ
ಬಗೆಹರಿಸಿ, ಬಯಲು ಶೌಚಾಲಯ ಮುಕ್ತ ಪಟ್ಟಣಕ್ಕೆ ಮುಂದಾಗಬೇಕು ಎಂಬುದು ಜನರ ಒತ್ತಾಯ.

ಪಟ್ಟಣ ಪಂಚಾಯಿತಿಯ ಸಕ್ಕಿಂಗ್‌ ಯಂತ್ರ ತಾಂತ್ರಿಕ ತೊಂದರೆಯಿಂದ ಕೆಟ್ಟಿದೆ. ಹಲವಾರು ಭಾರಿ ಸಂಬಂಧಪಟ್ಟ ಸಿಬ್ಬಂದಿಗಳಿಗೆ ತಂದು ತೋರಿಸಲಾಗಿದೆ. ಆದರು ಅದು ಸಿದ್ದವಾಗುತ್ತಿಲ್ಲ. ಅದಕ್ಕಾಗಿ ಹಲವಾರು ರೀತಿಯ ಪ್ರಯತ್ನ ಮಾಡಲಾಗಿದೆ. ನಂತರ ಚುನಾವಣೆ ಘೋಷಣೆಯಾದ ಪರಿಣಾಮ ಚುನಾವಣೆ ಕಾರ್ಯದಲ್ಲಿ ನಿರತರಾಗಿದ್ದೇವೆ. ಈಗ ಚುನಾವಣೆ ಮುಗಿದಿದೆ. ಒಂದು ವಾರದಲ್ಲಿ ಸಕ್ಕಿಂಗ್‌ ಯಂತ್ರ ಸಮಸ್ಯೆ ಬಗೆಹರಿಸುತ್ತೇವೆ.
ಸಂತೋಷ ವ್ಯಾಪಾರಿಮಠ, ಕಿರಿಯ ಆರೋಗ್ಯ ನಿರೀಕ್ಷಕರು, ಪಪಂ

ಅಮೀನಗಡ ಪಟ್ಟಣ ಪಂಚಾಯಿತಿಯ ಸಕ್ಕಿಂಗ್‌ ಯಂತ್ರದ ಸಮಸ್ಯೆ ಬಹಳ ದಿನದಿಂದ ಇದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು ನಿಜ. ಸಂಬಂಧಪಟ್ಟ ಪಪಂ ಅಧಿಕಾರಿಗಳಿಗೆ ತಿಳಿಸಿ ಎರಡು-ಮೂರು ದಿನಗಳಲ್ಲಿ ಸಮಸ್ಯೆ ಬಗೆಹರಿಸಲು ತಿಳಿಸುತ್ತೇನೆ.
ರಮೇಶ ಮುರಾಳ, ಪಪಂ ಸದಸ್ಯರು

ಸಕ್ಕಿಂಗ್‌ ಯಂತ್ರ ಪದೆ-ಪದೆ ತಾಂತ್ರಿಕ ಸಮಸ್ಯೆ ಉಂಟಾಗುತ್ತಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇವೆ. ಸಾರ್ವಜನಿಕರು ಸಹಕರಿಸಬೇಕು.
ಮಹೇಶ ನೀಡಶೇಶಿ, ಮುಖ್ಯಾಧಿಕಾರಿ, ಪಪಂ

*ಎಚ್‌.ಎಚ್‌.ಬೇಪಾರಿ

Advertisement

Udayavani is now on Telegram. Click here to join our channel and stay updated with the latest news.

Next