Advertisement

ಬೆಲೆ ಏರಿಕೆ ನಡುವೆ ಬೆಳಕಿನ ಹಬ್ಬಆಚರಿಸಲು ಜನತೆ ಸಜ್ಜು

02:27 PM Nov 04, 2021 | Team Udayavani |

ಮಾಸ್ತಿ: ಬೆಳಕಿನ ಹಬ್ಬ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಿಸಲು ಮಾಸ್ತಿ ಸೇರಿದಂತೆ ಹೋಬಳಿಯಾದ್ಯಂತ ಜನತೆ ಸಕಲ ಸಿದ್ಧತೆ ಕೈಗೊಂಡಿದ್ದಾರೆ. ಮಾಸ್ತಿಯಲ್ಲಿ ಬುಧವಾರ ಹಣತೆ, ನೋಮುದಾರ ಹಾಗೂ ಪಟಾಕಿ ಸೇರಿದಂತೆ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು.

Advertisement

ಮುಗಿಬಿದ್ದ ಗ್ರಾಹಕರು: ಮಾಸ್ತಿ ಗ್ರಾಮದ ಬಸ್‌ ನಿಲ್ದಾಣ ಸೇರಿ ಪ್ರಮುಖ ರಸ್ತೆಯಲ್ಲಿ ಹಣತೆ, ನೋಮುದಾರ, ಹೂ, ಹಣ್ಣು ಹಂಪಲು, ಮೊರ, ದೀಪಾವಳಿ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ವ್ಯಾಪಾರದ ವಹಿವಾಟು ನಡೆದಿದ್ದು, ಬುಧವಾರ ಬೆಳಗ್ಗೆಯಿಂದಲೇ ಗ್ರಾಹಕರು ಮುಗಿಬಿದ್ದಿದ್ದರು. ಬೆಲೆ ಏರಿಕೆ ಲೆಕ್ಕಿಸದೆ ಹಬ್ಬಕ್ಕೆ ಅಗತ್ಯ ವಸ್ತು ಖರೀದಿಸಲು ಬುಧವಾರ ಮಾಸ್ತಿಯಲ್ಲಿ ಜನತೆ ಜಾತ್ರೆಯಂತೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮದ ಬಸ್‌ ನಿಲ್ದಾಣದ ಅಂಗಡಿ ಮುಂಗಟ್ಟುಗಳಿಗೆ ಮುಗಿ ಬಿದ್ದಿದ್ದರು.

ಪಟಾಕಿ ವ್ಯಾಪಾರ ಕಡಿಮೆ: ಮಾಸ್ತಿಯಲ್ಲಿ ಕಳೆದ 2-3 ವರ್ಷಗಳ ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಪಟಾಕಿ ವ್ಯಾಪಾರ ನಡೆದಿಲ್ಲ. ಪ್ರತಿ ವರ್ಷ ಎಲ್ಲೆಂದರಲ್ಲಿ ಪಟಾಕಿ ಅಂಗಡಿಗಳು ತಲೆ ಎತ್ತಿರುತ್ತಿದ್ದವು. ಆದರೆ ಈ ಬಾರಿ ಒಂದೆರೆಡು ಪಟಾಕಿ ಅಂಗಡಿ ಬಿಟ್ಟರೆ ಪಟಾಕಿ ಅಂಗಡಿಗಳೇ ಕಾಣ ಸಿಕ್ಕಿಲ್ಲ. ಪಟಾಕಿ ಚೀಟಿಗಳ ಹಾವಳಿ ಹೆಚ್ಚಾಗಿರುವ ಕಾರಣ ಅಂಗಡಿಗಳು ಕಡಿಮೆಯಾಗಿವೆ.

ಅಂಗಡಿಗಳಲ್ಲಿ ಖರೀದಿ ಇಲ್ಲ:ಪಟಾಕಿ ಚೀಟಿ ನಡೆಸುವ ಮಾಲಿಕರು ಪ್ರತಿ ತಿಂಗಳಿನಂತೆ ಒಂದು ವರ್ಷ ಕಂತು ಕಟ್ಟಿಸಿಕೊಂಡು ಯಾವುದಾದರೂ ಗೃಹೋಪಯೋಗಿ ವಸ್ತು ಅಥವಾ ದಿನಸಿ ಜತೆಗೆ ಪಟಾಕಿ ಬಾಕ್ಸ್‌ ನೀಡುವುದರಿಂದ ಜನತೆ ಅಂಗಡಿಗಳಲ್ಲಿ ಪಟಾಕಿ ಕೊಳ್ಳುವುದು ಕಡಿಮೆಯಾಗಿದೆ.

Advertisement

ಮಣ್ಣಿನ ಮಡಿಕೆಗಳ ವ್ಯಾಪಾರ ಕುಸಿತ: ಈ ಹಿಂದೆ ಮಣ್ಣಿನ ಮಡಿಕೆಗಳನ್ನು ಹಬ್ಬಕ್ಕೆ ಹೆಚ್ಚಾಗಿ ಬಳಸಿ ಕೊಳ್ಳುತ್ತಿದ್ದರು. ಆದರೆ, ಆಧುನಿಕತೆ ಹೆಚ್ಚಾದಂತೆಲ್ಲಾ ಮಣ್ಣಿನ ಮಡಿಕೆಗಳ ಬಳಕೆ ಕಡಿಮೆಯಾಗುತ್ತಿದ್ದು ಬೇಡಿಕೆಯೂ ಕುಸಿದಿದೆ. ಬೆಳಕಿನ ಹಬ್ಬಕ್ಕೆ ಸಿದ್ದತೆ: ಹಾಗೆಯೇ ಗ್ರಾಮೀಣ ಭಾಗದಲ್ಲಿ ಬಡವರು ಹಾಗೂ ಮಧ್ಯಮ ವರ್ಗದವರು ಮನೆಗಳಿಗೆ ಈಗಾಗಲೇ ಸುಣ್ಣ ಬಣ್ಣ ಬಳಿದು ಶುಭ್ರಗೊಳಿಸಿ ಸಮೀಪದ ಮಾರುಕಟ್ಟೆಗಳಿಗೆ ತೆರಳಿ ಪೂಜಾ ಸಾಮಗ್ರಿ ಖರೀದಿಸಿ ತರುವ ಮೂಲಕ ದೀಪಾವಳಿಗೆ ತಯಾರಿ ನಡೆಸುತ್ತಿದ್ದಾರೆ.

 “ಬೆಳಕಿನ ಹಬ್ಬ ದೀಪಾವಳಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸಿ. ಮಕ್ಕಳು ಪಟಾಕಿ ಹಚ್ಚುವುದನ್ನು ಬಿಟ್ಟು ಹಣತೆಗಳಿಂದ ದೀಪ ಹಚ್ಚಿ. ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯ, ಶಬ್ದ ಮಾಲಿನ್ಯದ ಪ್ರಮಾಣದ ಹೆಚ್ಚಳದಿಂದ ಪರಿಸರಕ್ಕೆ ಹಾನಿ ಆಗುತ್ತದೆ.”- ಎಂ.ಪಿ.ಸತೀಶ್‌ ಆರಾಧ್ಯ, ಮಾಲೂರು ಯೋಜನಾ ಪ್ರಾಧಿಕಾರದ ಅಧ್ಯಕ್ಷರು.

– ಮಾಸ್ತಿ ಎಂ.ಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next