Advertisement

ಕಣಿವೆಯಲ್ಲಿ ಹೆಚ್ಚಿದ ಹಿಂಸೆ

11:30 PM Aug 30, 2021 | Team Udayavani |

ಹೊಸದಿಲ್ಲಿ/ಕಾಬೂಲ್‌: ಅಫ್ಘಾನಿಸ್ಥಾನದಿಂದ ಅಮೆರಿಕ ಸೇನೆಯ ವಾಪಸಾತಿ ಪ್ರಕ್ರಿಯೆಯ ಎಫೆಕ್ಟ್ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಣಿಸಿಕೊಳ್ಳತೊಡಗಿದೆ. ದೊಡ್ಡ ಮಟ್ಟದ ಟಾರ್ಗೆಟ್‌ ಇಟ್ಟುಕೊಂಡು ಕನಿಷ್ಠ 6 ಭಯೋತ್ಪಾದಕ ಗುಂಪುಗಳು ಕಾಶ್ಮೀರ ಕಣಿವೆಗೆ ನುಸುಳಿವೆ ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿವೆ.

Advertisement

ಈಗಾಗಲೇ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಉಗ್ರರ ಹೊರತಾಗಿ, ಕಳೆದೊಂದು ತಿಂಗಳಿಂದ ಸುಮಾರು 25-30 ಭಯೋತ್ಪಾದಕರು ಸತತವಾಗಿ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ಶುರು ಮಾಡಿದ್ದಾರೆ. ಈ ಅವಧಿಯಲ್ಲಿ ಪ್ರತೀ ದಿನ ಒಂದಿಲ್ಲೊಂದು ಐಇಡಿ ಸ್ಫೋಟ, ಭದ್ರತಾ ಪಡೆಗಳ ಮೇಲೆ ದಾಳಿ, ರಾಜಕೀಯ ನಾಯಕರ ಮೇಲೆ ದಾಳಿ ಗಳು ನಡೆಯುತ್ತಲೇ ಇವೆ. ಈ ವರ್ಷದ ಫೆಬ್ರವರಿ ಯಲ್ಲಿ ಕದನ ವಿರಾಮ ಘೋಷಿಸಿದ ಅನಂತರ ಖಾಲಿ ಬಿದ್ದಿದ ಲಾಂಚ್‌ಪ್ಯಾಡ್‌ಗಳಲ್ಲಿ ಮತ್ತೆ ಚಟುವಟಿಕೆಗಳು ಗರಿಗೆದರತೊಡಗಿವೆ ಎಂದು ಹಿರಿಯ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ. ಗಡಿ ನಿಯಂತ್ರಣ ರೇಖೆ ಯುದ್ದಕ್ಕೂ ವಿವಿಧ ಶಿಬಿರಗಳಲ್ಲಿ ಸುಮಾರು 300 ಉಗ್ರರು ನೆಲೆನಿಂತಿದ್ದಾರೆ ಎಂದು ವಿವಿಧ ಗುಪ್ತಚರ ಸಂಸ್ಥೆಗಳು ವರದಿ ನೀಡಿವೆ. ನಾವು ಕೂಡ ಎಲ್ಲ ರೀತಿಯ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಿ ದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದೆಡೆ, ಜಮ್ಮು-ಕಾಶ್ಮೀರದಲ್ಲಿ ಕಳೆದ ಕೆಲವು ತಿಂಗಳಿಂದ ಸುಮಾರು 60 ಯುವಕರು ತಮ್ಮ ಮನೆಗಳಿಂದ ನಾಪತ್ತೆಯಾಗಿರುವುದು ಕೂಡ ಭದ್ರತಾ ಪಡೆಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಆಫ್ಘನ್ ನೆಲದ ದುರ್ಬಳಕೆ ಸಲ್ಲ: ಭಾರತ ಮತ್ತು ಪಾಕಿಸ್ಥಾನದ ವಿಚಾರ ಬಂದಾಗ ನಾವು ಯಾರ ಪರವೂ ನಿಲ್ಲುವುದಿಲ್ಲ. ಆದರೆ ಭಾರತವಾಗಲೀ, ಪಾಕಿಸ್ಥಾನವಾಗಲೀ ತಮ್ಮ ಆಂತರಿಕ ಸಂಘರ್ಷಕ್ಕೆಂದು ಅಫ್ಘಾನಿಸ್ಥಾನವನ್ನು ಬಳಕೆ ಮಾಡಲು ನಾವು ಬಿಡುವುದಿಲ್ಲ ಎಂದು ಇಂಡಿಯನ್‌ ಮಿಲಿಟರಿ ಅಕಾಡೆಮಿಯ ಹಳೆಯ ವಿದ್ಯಾರ್ಥಿ, ಅಫ್ಘಾನಿಸ್ಥಾನದ ಸಂಭಾವ್ಯ ವಿದೇಶಾಂಗ ಸಚಿವ ಶೇರ್‌ ಮೊಹಮ್ಮದ್‌ ಅಬ್ಟಾಸ್‌ ಸ್ಟಾನಿಕ್‌ಝೈ ಹೇಳಿದ್ದಾನೆ.

ದೋಹಾದಿಂದ ಸಿಎನ್‌ಎನ್‌ ನ್ಯೂಸ್‌18ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸ್ಟಾನಿಕ್‌ಝೈ, ಭಾರತ, ಪಾಕಿಸ್ಥಾನ, ಇರಾನ್‌, ತಜಕಿಸ್ಥಾನ, ಅಮೆರಿಕ ಸೇರಿದಂತೆ ಎಲ್ಲ ದೇಶಗಳೊಂದಿಗೂ ಸಾಂಸ್ಕೃತಿಕ, ಆರ್ಥಿಕ ಸೇರಿದಂತೆ ಎಲ್ಲ ರೀತಿಯಲ್ಲೂ ಉತ್ತಮ ಬಾಂಧವ್ಯವನ್ನು ನಾವು ಬಯಸುತ್ತೇವೆ. ಇನ್ನು, ಭಾರತ-ಪಾಕಿಸ್ಥಾನದ ನಡುವೆ ರಾಜಕೀಯ ಹಾಗೂ ಭೌಗೋಳಿಕ ವಿವಾದವಿದೆ. ಎರಡೂ ದೇಶಗಳಿಗೂ ತಮ್ಮದೇ ಆದ ಗಡಿಗಳಿವೆ. ಹಾಗಾಗಿ, ಅವರು ಬೇಕಿದ್ದರೆ ಪರಸ್ಪರ ಯುದ್ಧ ಮಾಡಿಕೊಳ್ಳಲಿ. ಆದರೆ ಅಫ್ಘಾನ್‌ ನೆಲವನ್ನು ಬಳಸುವುದು ಬೇಡ. ಅದಕ್ಕೆ ನಾವು ಅವಕಾಶವನ್ನೂ ನೀಡುವುದಿಲ್ಲ’ ಎಂದಿದ್ದಾನೆ.

Advertisement

ಕಾಬೂಲ್‌ಗೆ ಬಂತು ಆರೋಗ್ಯ ವಿಮಾನ: ಔಷಧ ಮತ್ತು ಇತರ ಅಗತ್ಯ ವಸ್ತುಗಳನ್ನು ಹೊಂದಿರುವ ಡಬ್ಲ್ಯೂಎಚ್‌ಒ ವಿಮಾನ ಅಫ್ಘಾನ್‌ ರಾಜಧಾನಿ ಕಾಬೂಲ್‌ಗೆ ಸೋಮವಾರ ಆಗಮಿಸಿದೆ. 2 ಲಕ್ಷಕ್ಕೂ ಅಧಿಕ ಮಂದಿಗೆ ನೆರವಾಗುವ ನಿಟ್ಟಿನಿಂದ ಹಲವು ಔಷಧ ಮತ್ತು ಶಸ್ತ್ರಚಿಕಿತ್ಸೆ ನಡೆಸಲು ಬೇಕಾಗುವ ಅಗತ್ಯ ವಸ್ತುಗಳನ್ನು ವಿಮಾನದಲ್ಲಿ ತರಲಾಗಿದೆ.

ದೇಶ ತ್ಯಜಿಸಲು ಅನುಮತಿ?: ಸೂಕ್ತ ದಾಖಲೆಗಳನ್ನು ಹೊಂದಿರುವ ಅಫ್ಘಾನಿಸ್ಥಾನದ ಪ್ರಜೆಗಳು ಇತರ ದೇಶಗಳ ನಾಗರಿಕರ ಜತೆಗೆ ತೆರಳಲು ತಾಲಿಬಾನ್‌ ಉಗ್ರರು ಅನುಮತಿ ನೀಡಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಅಮೆರಿಕ, ಬ್ರಿಟನ್‌ ಮತ್ತು ಇತರ ದೇಶಗಳ ಪ್ರತಿನಿಧಿಗಳು ಹೇಳಿಕೆ ನೀಡಿದ್ದಾರೆ.

ಅಫ್ಘಾನಿಸ್ಥಾನದಲ್ಲಿ ಸದ್ಯ ಉಂಟಾಗಿರುವ ಪರಿಸ್ಥಿತಿ ಹೊಸ ರೀತಿಯ ಭದ್ರತಾ ಸವಾಲುಗಳನ್ನು ನಮ್ಮ ಮುಂದೆ ಒಡ್ಡಿದೆ. ಕೇಂದ್ರ ಸರಕಾರಕ್ಕೆ ಅದನ್ನು ನಿಭಾಯಿಸುವ ಸಾಮರ್ಥ್ಯ ಇದೆ.-ರಾಜನಾಥ್‌ ಸಿಂಗ್‌, ರಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next