ನವದೆಹಲಿ: ಭಾರತದಲ್ಲಿ 2000, 500, 200, 100 ಹೀಗೆ ಹಲವು ಮುಖಬೆಲೆಯ ನೋಟುಗಳಿವೆಯಾದರೂ ಅದರಲ್ಲಿ ಭಾರತೀಯರ ಆದ್ಯತೆ 100 ರೂ. ಮುಖಬೆಲೆಯ ನೋಟೇ ಆಗಿದೆ.
ಈ ಅಂಶವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಬಿಡುಗಡೆ ಮಾಡಿರುವ ವರದಿಯಿಂದ ತಿಳಿದುಬಂದಿದೆ.
ವರದಿಯ ಪ್ರಕಾರ, ದೇಶದಲ್ಲಿ ಮೊದಲ ಪ್ರಾಮುಖ್ಯತೆ 100 ರೂ. ನೋಟಿಗಿದ್ದರೆ ಕೊನೆಯ ಆದ್ಯತೆ 2000 ರೂ. ಮುಖಬೆಲೆಯ ನೋಟಿಗಿದೆ. ಆದರೆ ಅತಿ ಹೆಚ್ಚು ಬಳಕೆಯಲ್ಲಿರುವುದು 500 ರೂ. ಮುಖಬೆಲೆಯ ನೋಟುಗಳು.
ಹಾಗೆಯೇ ನಾಣ್ಯಗಳ ವಿಚಾರಕ್ಕೆ ಬಂದರೆ ಜನರಿಗೆ 5 ರೂ. ಮುಖಬೆಲೆಯ ನಾಣ್ಯ ಮೊದಲ ಆದ್ಯತೆಯಲ್ಲಿದ್ದರೆ 1 ರೂ. ಮುಖಬೆಲೆಯ ನಾಣ್ಯ ಕೊನೆಯ ಆದ್ಯತೆಯಲ್ಲಿದೆ.
ಬೇಡಿಕೆ ಇಳಿಕೆ: ದೇಶಾದ್ಯಂತ ಡಿಜಿಟಲ್ ಪಾವತಿ ಹೆಚ್ಚಾದ ಹಿನ್ನೆಲೆಯಲ್ಲಿ, ಭಾರತದಲ್ಲಿ ನೋಟುಗಳ ಬೇಡಿಕೆಯು 2020-21ಕ್ಕೆ ಹೋಲಿಸಿದರೆ 2021-22ರಲ್ಲಿ ಶೇ.1.8 ಇಳಿಕೆ ಕಂಡಿದೆ. ನಾಣ್ಯಗಳ ಬೇಡಿಕೆಯಲ್ಲಂತೂ ಶೇ.73.3 ಇಳಿದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಶ್ರೇಣೀಕೃತ ವಿಧಾನ ಅಳವಡಿಕೆ:
ಡಿಜಿಟಲ್ ಕರೆನ್ಸಿ ವ್ಯವಸ್ಥೆಯ ಜಾರಿಗಾಗಿ ಶ್ರೇಣೀಕೃತ ವಿಧಾನವನ್ನು ಅಳವಡಿಸಿಕೊಂಡಿರುವುದಾಗಿ ಆರ್‌ಬಿಐ ಹೇಳಿದೆ. ಡಿಜಿಟಲ್ ಕರೆನ್ಸಿಯ ಸಾಧಕ- ಬಾಧಕಗಳನ್ನು ಅಧ್ಯಯನ ಮಾಡಲಾಗುತ್ತಿದ್ದು, ಎಲ್ಲೆಡೆಯೂ ಸುಗಮ ವ್ಯವಸ್ಥೆ ಕಲ್ಪಿಸುವುದು, ಎಲ್ಲೂ ತೊಂದರೆಯಾಗದಂಥ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ ಎಂದು ಆರ್‌ಬಿಐ ಹೇಳಿದೆ.