ಬೆಂಗಳೂರು : ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಆರಂಭಿಸಿದ್ದ ನ್ಯಾಶನಲ್ ಹೆರಾಲ್ಡ್ ಪತ್ರಿಕೆಯನ್ನು ಕಾಂಗ್ರೆಸ್ ಪಕ್ಷ ಕೋರ್ಟ್ ಸಮರದ ನಡುವೆಯೇ ಇಲ್ಲಿ ಸೋಮವಾರದಿಂದ ಆರಂಭಿಸಲಿದೆ.
ಇಲ್ಲಿನ ಮಿಲ್ಲರ್ ರೋಡ್‌ನಲ್ಲಿರುವ ಅಂಬೇಡ್ಕರ ಭವನದಲ್ಲಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಸಮಕ್ಷಮದಲ್ಲಿ, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ದೇಶದ 70ನೇ ಸ್ವಾತಂತ್ರ್ಯ ವರ್ಷದ ಪ್ರಯುಕ್ತ ಸಂಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡುವರು.
ಈ ಕಾರ್ಯಕ್ರಮವನ್ನು ಅನುಸರಿಸಿ ಇದೇ ಜೂನ್ 20ರಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಹೊಸದಿಲ್ಲಿಯಲ್ಲಿ ನ್ಯಾಶನಲ್ ಹೆರಾಲ್ಡ್‌ನ ಉದ್ಘಾಟಿಸಿ ಔಪಚಾರಿಕ ಮುದ್ರಣ ಕಾರ್ಯಾರಂಭಕ್ಕೆ ಚಾಲನೆ ನೀಡುವರು. ರಾಷ್ಟ್ರ ರಾಜಧಾನಿ ದಿಲ್ಲಿಯಿಂದ ನ್ಯಾಶನಲ್ ಹೆರಾಲ್ಡ್ ಪತ್ರಿಕೆಯು ಸಾಪ್ತಾಹಿಕವಾಗಿ ಪ್ರಕಟಗೊಳ್ಳಲಿದೆ.
ನ್ಯಾಶನಲ್ ಹೆರಾಲ್ಡ್ ಡಾಟ್ ಕಾಮ್ ಕಳೆದ ವರ್ಷದಿಂದಲೇ ಕಾರ್ಯಾಚರಿಸುತ್ತಿದ್ದು ನೀಲಭ್ ಮಿಶ್ರಾ ಅವರು ಈ ವೆಬ್ ಆವೃತ್ತಿಯ ಸಂಪಾದಕರಾಗಿದ್ದಾರೆ.
ನ್ಯಾಶನಲ್ ಹೆರಾಲ್ಡ್ ಪತ್ರಿಕೆಯ ಮುದ್ರಣ ಆವೃತ್ತಿಯನ್ನು 1938ರ ಸೆಪ್ಟಂಬರ್ 9ರಂದು ಲಕ್ನೋದಿಂದ ಆರಂಭಿಸಲಾಗಿತ್ತು. ಆಗ ಪಂಡಿತ್ ಜವಾಹರ್‌ಲಾಲ್ ನೆಹರೂ ಅವರೇ ಪತ್ರಿಕೆಯ ಸಂಪಾದಕರಾಗಿದ್ದರು. ಆದರೆ ಹಣಕಾಸು ತೊಂದರೆಗಳಿಂದಾಗಿ ಪತ್ರಿಕೆಯ ಮುದ್ರಣವನ್ನು 2008ರಲ್ಲಿ ನಿಲ್ಲಿಸಲಾಗಿತ್ತು.
ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೋಶಾಧಿಕಾರಿ ಮೋತಿಲಾಲ್ ವೋರಾ, ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್, ಸುಮನ್ ದುಬೆ ಮತ್ತು ಸ್ಯಾಮ್ ಪಿತ್ರೋಡಾ ವಿರುದ್ದ ಕೇಸು ದಾಖಲಿಸಿದ ಬಳಿಕ ನ್ಯಾಶನಲ್ ಹೆರಾಲ್ಡ್ ಹೆಸರು ರಾಷ್ಟ್ರ ವಾಹಿನಿಯಲ್ಲಿ ಸುದ್ದಿಯಲ್ಲಿದೆ.