Advertisement

ಬಾಲಕಿಯರಿಗೆ ವಿಷಪ್ರಾಶನ: ಮುಸ್ಲಿಂ ಮೂಲಭೂತವಾದಿಗಳ ಪೈಶಾಚಿಕ ಕೃತ್ಯ

12:48 AM Feb 28, 2023 | Team Udayavani |

ಕಳೆದ ನಾಲ್ಕು ತಿಂಗಳುಗಳಿಂದೀಚೆಗೆ ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್‌ ವಿರೋಧಿ ಪ್ರತಿಭಟನೆಯನ್ನು ಮಣಿಸಲು ಅಲ್ಲಿನ ಸರಕಾರ ಶತಾಯಗತಾಯ ಪ್ರಯತ್ನ ನಡೆಸುತ್ತಿರುವಂತೆಯೇ ಇದೀಗ ಅಲ್ಲಿನ ಕಟ್ಟಾ ಮುಸ್ಲಿಂ ಮೂಲಭೂತವಾದಿಗಳು ಹೆಣ್ಣು ಮಕ್ಕಳನ್ನು ಭಯಭೀತರನ್ನಾಗಿಸುವ ಮೂಲಕ ಅವರನ್ನು ಶಾಲೆಗಳಿಂದ ದೂರವುಳಿಯುವಂತೆ ಮಾಡಲು ವಿಷ ಉಣಿಸುವಂತಹ ಅಮಾನವೀಯ ಮತ್ತು ಘನಘೋರ ಕೃತ್ಯಕ್ಕೆ ಕೈಹಾಕಿದ್ದಾರೆ. ಶಾಲೆಗಳಿಗೆ ತೆರಳುತ್ತಿರುವ ಬಾಲಕಿಯರಿಗೆ ಅವರ ಅರಿವಿಗೆ ಬಾರದಂತೆ ಅಲ್ಪಪ್ರಮಾಣದಲ್ಲಿ ವಿಷಪ್ರಾಶನ ಮಾಡಲಾಗುತ್ತಿರುವುದು ಬೆಳಕಿಗೆ ಬಂದಿದ್ದು ಇದರಿಂದ ನೂರಾರು ಸಂಖ್ಯೆಯಲ್ಲಿ ಬಾಲಕಿಯರು ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

Advertisement

ಮೂಲಭೂತವಾದಿಗಳ ಈ ಅಮಾನವೀಯ ನಡೆಗೆ ಇರಾನ್‌ ಮಾತ್ರವಲ್ಲದೆ ವಿಶ್ವಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಬಾಲಕಿಯರಿಗೆ ವಿಷಪ್ರಾಶನ ಮಾಡಲಾಗುತ್ತಿರುವ ಮಾಹಿತಿಯನ್ನು ಇರಾನ್‌ನ ಆರೋಗ್ಯ ಖಾತೆಯ ಉಪ ಸಚಿವರೇ ದೃಢಪಡಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ದೇಶದಲ್ಲಿ ಹೆಣ್ಣು ಮಕ್ಕಳಿಗೆ ಕಟ್ಟುನಿಟ್ಟಿನ ವಸ್ತ್ರಸಂಹಿತೆಯನ್ನು ಜಾರಿಗೊಳಿಸಲಾಗಿದ್ದು ಶಾಲಾ-ಕಾಲೇಜುಗಳಿಗೆ ತೆರಳುವ ಹೆಣ್ಣುಮಕ್ಕಳು ಹಿಜಾಬ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಇದನ್ನು ವಿರೋಧಿಸಿ ಕಳೆದ ವರ್ಷದ ನವೆಂಬರ್‌ನಿಂದೀಚೆಗೆ ದೇಶಾದ್ಯಂತ ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರ ಸಹಿತ ಹೆಣ್ಣುಮಕ್ಕಳು ಸರಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಜನರ ಪ್ರತಿಭಟನೆಯನ್ನು ಹತ್ತಿಕ್ಕಲು ಸರಕಾರ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು ಪ್ರತಿಭಟನಕಾರರು ಮತ್ತು ಅವರ ಬೆಂಬಲಿಗರ ವಿರುದ್ಧ ನಿರ್ದಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿರುವವರನ್ನು ಬಂಧಿಸಿ ಕಾರಾಗೃಹಗಳಲ್ಲಿ ಅವರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆಯಲ್ಲದೆ ಕೆಲವರು ಪೊಲೀಸರ ವಶದಲ್ಲಿರುವಾಗಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಅಷ್ಟು ಮಾತ್ರವಲ್ಲದೆ ಇನ್ನೂ ಕೆಲವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವ ಮೂಲಕ ಸರಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಜನರು ಪಾಲ್ಗೊಳ್ಳದಂತೆ ಬೆದರಿಸುವ ತಂತ್ರವನ್ನೂ ಅನುಸರಿಸಲಾಗುತ್ತಿದೆ.

ಒಂದೆಡೆಯಿಂದ ಜನರು ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೆ ಮತ್ತೂಂದೆಡೆ ಮುಸ್ಲಿಂ ಮೂಲಭೂತವಾದಿಗಳು ಹೆಣ್ಣು ಮಕ್ಕಳನ್ನು ಶಿಕ್ಷಣವಂಚಿತರನ್ನಾ ಗಿಸುವ ತಮ್ಮ ಉದ್ದೇಶವನ್ನು ಸಾಧಿಸಲು ತಮ್ಮ ರಹಸ್ಯ ಅಜೆಂಡಾವನ್ನು ಜಾರಿಗೊಳಿಸುತ್ತಿದ್ದಾರೆ. ಇದರ ಭಾಗವಾಗಿಯೇ ಇರಾನ್‌ನ ರಾಜಧಾನಿ ಟೆಹ್ರಾನ್‌ನ ದಕ್ಷಿಣ ಭಾಗದಲ್ಲಿರುವ ಖೋಮ್‌ನಲ್ಲಿನ ಹಲವಾರು ಶಾಲೆಗಳ ಹೆಣ್ಣುಮಕ್ಕಳಿಗೆ ವಿಷಪ್ರಾಶನ ಮಾಡಿಸಲಾಗಿದೆ. ಈ ಮೂಲಕ ಪ್ರದೇಶದ ಶಾಲೆಗಳನ್ನು ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳು ಅಧಿಕವಾಗಿರುವ ಶಾಲೆಗಳನ್ನು ಶಾಶ್ವತವಾಗಿ ಮುಚ್ಚಿಸಲು ಮೂಲಭೂತವಾದಿಗಳು ಈ ಷಡ್ಯಂತ್ರ ರೂಪಿಸಿರುವುದು ಖಚಿತವಾಗಿದೆ. ಬಾಲಕಿಯರು ಶಾಲೆಗಳಲ್ಲಿ ಅಸ್ವಸ್ಥರಾಗುತ್ತಿರುವುದರಿಂದ ಸಂಶಯಗೊಂಡಿರುವ ಸ್ಥಳೀಯರು ಸರಕಾರದ ಮೇಲೆ ಒತ್ತಡ ಹೇರಿದ್ದರಿಂದಾಗಿ ಸರಕಾರ ಹೆಣ್ಣುಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳಲು ಕಾರಣವೇನು? ಎಂಬ ಬಗೆಗೆ ಅಧ್ಯಯನ ನಡೆಸಲು ಮುಂದಾಗಿದೆ.

ಒಟ್ಟಾರೆ ಇರಾನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಇಡೀ ವಿಶ್ವವನ್ನೇ ಕಂಗೆಡುವಂತೆ ಮಾಡಿವೆ. ಧರ್ಮ, ಮತ, ಜಾತಿ, ವರ್ಗ, ಲಿಂಗಗಳ ತಾರತಮ್ಯವಿಲ್ಲದೆ ಸಮ ಸಮಾಜದ ಕನಸನ್ನು ವಿಶ್ವ ಕಾಣುತ್ತಿರುವ ಸಂದರ್ಭದಲ್ಲಿ ಹೆಣ್ಣು ಮಕ್ಕಳನ್ನು ಧರ್ಮದ ಹೆಸರಿನಲ್ಲಿ ಶಿಕ್ಷಣದಿಂದ ಆ ಮೂಲಕ ಸಮಾಜದ ಮುಖ್ಯವಾಹಿನಿಯಿಂದ ದೂರವುಳಿಸುವ ಪ್ರಯತ್ನ ನಡೆಯುತ್ತಿರುವುದು ಖಂಡನೀಯ. ಅಲ್ಲದೆ ತಮ್ಮ ಈ ಕುತ್ಸಿತ ಉದ್ದೇಶವನ್ನು ಸಾಕಾರಗೊಳಿಸಲು ಮುಸ್ಲಿಂ ಮೂಲಭೂತವಾದಿಗಳು ಬಾಲಕಿಯರಿಗೆ ವಿಷವುಣಿಸುವಂಥ ಅತ್ಯಂತ ಪೈಶಾಚಿಕ ಕೃತ್ಯಕ್ಕೆ ಮುಂದಾಗಿರುವುದು ಅತ್ಯಂತ ಘೋರ ಮತ್ತು ಬೀಭತ್ಸ ಬೆಳವಣಿಗೆಯಾಗಿದೆ. ಇರಾನ್‌ ಸರಕಾರ ಇಂತಹ ಮೂಲಭೂತವಾದಿಗಳನ್ನು ಮಟ್ಟಹಾಕುವ ಬದಲಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ನಾಗರಿಕರ ವಿರುದ್ಧವೇ ನಿಷ್ಠುರ ಕ್ರಮ ಕೈಗೊಳ್ಳುತ್ತಿರುವುದು ತೀರಾ ನಾಚಿಕೆಗೇಡು. ಸರಕಾರ ತನ್ನ ಧೋರಣೆಯನ್ನು ಬದಲಾಯಿಸದೇ ಹೋದಲ್ಲಿ ವಿಶ್ವ ಸಮುದಾಯ ಅಲ್ಲಿನ ಪ್ರಜ್ಞಾವಂತ ಅದರಲ್ಲೂ ಹೆಣ್ಣುಮಕ್ಕಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ಇರಾನ್‌ ಇನ್ನೊಂದು ಅಫ್ಘಾನಿಸ್ಥಾನವಾಗಿ ಇಡೀ ವಿಶ್ವವನ್ನು ಕಾಡಲಿರುವುದು ನಿಶ್ಚಿತ.

Advertisement
Advertisement

Udayavani is now on Telegram. Click here to join our channel and stay updated with the latest news.

Next