ಲಕ್ನೋ: ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯ ಪಾಲಿಟೆಕ್ನಿಕ್ ವಿದ್ಯಾರ್ಥಿನಿಯೊಬ್ಬರ ಕನಸಿಗೆ ಕೇಂದ್ರ ಸಚಿವೆ ಸ್ಮತಿ ಇರಾನಿ ರೆಕ್ಕೆ ಕಟ್ಟಿದ್ದಾರೆ.
ಸಚಿವೆ ಯುವತಿಯೊಂದಿಗೆ ಶನಿವಾರ ಬೆಂಗಳೂರಿನ ಇಸ್ರೋ ಮುಖ್ಯ ಕಚೇರಿಗೆ ಭೇಟಿ ನೀಡಲಿದ್ದಾರೆ. ಕಳೆದ ತಿಂಗಳು ಸಚಿವೆ ಗೌರಿಗಂಜ್ ಗ್ರಾಮದಲ್ಲಿ ಖಾಸಗಿ ಶೈಕ್ಷಣಿಕ ಸಂಸ್ಥೆಯೊಂದನ್ನು ಉದ್ಘಾಟಿಸುವ ವೇಳೆ ವಿದ್ಯಾರ್ಥಿನಿ ನೀತು ಸೇರಿ ಹಲವರಿಗೆ ಟ್ಯಾಬ್ ವಿತರಿಸಿದ್ದರು.
ಆ ವೇಳೆ “ಮುಂದೆ ಏನಾಗಬೇಕೆಂದುಕೊಂಡಿದ್ದೀಯ?’ ಎಂದು ನೀತುಗೆ ಕೇಳಿದಾಗ, ಯುವತಿ “ಇಸ್ರೋಗೆ ತೆರಳಿ ವಿಜ್ಞಾನಿಯಾಗಬೇಕು’ ಎಂದಿದ್ದರು.
ನೀತುವನ್ನು ತಾವೇ ಇಸ್ರೋಗೆ ಕರೆದೊಯ್ಯುವುದಾಗಿ ಸಚಿವೆ ಘೋಷಿಸಿದ್ದರು. ಅದರಂತೆ ನೀತು ಗುರುವಾರ ಲಕ್ನೋದಿಂದ ದೆಹಲಿಗೆ ಬಂದಿದ್ದು, ಅಲ್ಲಿಂದ ಸಚಿವೆಯೊಂದಿಗೆ ಬೆಂಗಳೂರಿಗೆ ತೆರಳಲಿದ್ದಾರೆ.