Advertisement
2022ರ ಅಂಕಿಅಂಶಗಳ ಪ್ರಕಾರ ಅಮೆರಿಕದಲ್ಲಿ 523 ಸಾಮೂಹಿಕ ಗುಂಡಿನ ದಾಳಿಗಳು ನಡೆದಿದ್ದವು. ಇದೇನು ಇಂದು-ನಿನ್ನೆಯ ಸಮಸ್ಯೆಯಲ್ಲ. ದೇಶದ ಇತಿಹಾಸದತ್ತ ಬೆಳಕು ಚೆಲ್ಲಿದರೆ 2 ಶತಮಾನಗಳಷ್ಟು ಹಿಂದಿನಿಂದಲೇ ಗನ್ ಸಂಸ್ಕೃತಿ ಬೆಳೆದು ಬಂದಿದೆ. ಅಮೆರಿಕದಲ್ಲಿ ಬ್ರಿಟಿಷರು ವಸಾಹತು ಸ್ಥಾಪಿಸಿದ್ದ ವೇಳೆ ತಮ್ಮ ಕುಟುಂಬಗಳನ್ನು ರಕ್ಷಿಸಲು ಮನೆಯಲ್ಲಿ ಬಂದೂಕುಗಳನ್ನು ಇರಿಸಿಕೊಳ್ಳುತ್ತಿದ್ದರು. ಅಲ್ಲಿಂದ ಆರಂಭಗೊಂಡ ಈ “ಗನ್ ಕ್ರೇಝ್’ ದೇಶದಲ್ಲಿ ಇಂದಿಗೂ ಮುಂದುವರಿದಿದೆ. 1971ರಲ್ಲಿ ಅಮೆರಿಕದ ಸಂವಿಧಾನಕ್ಕೆ ತಿದ್ದುಪಡಿ ತಂದು ನಾಗರಿಕರಿಗೆ ಶಸ್ತ್ರಾಸ್ತ್ರಗಳನ್ನು ಹೊಂದಲು ನೀಡಿದ ಕಾನೂನುಬದ್ಧ ಹಕ್ಕು ಇಂದಿಗೂ ಮುಂದುವರಿದಿದ್ದು ಅದೀಗ ಅಮೆರಿಕದ ಖ್ಯಾತಿಗೆ ಮಸಿ ಬಳಿಯುತ್ತಿದೆ. ವಿದೇಶಿ ಸಂಶೋಧನ ಸಂಸ್ಥೆಯ ಅಧ್ಯಯನ ವರದಿಯ ಪ್ರಕಾರ ವಿಶ್ವದ ಒಟ್ಟಾರೆ ಜನಸಂಖ್ಯೆಯ ಶೇ.5ರಷ್ಟು ಜನರು ಅಮೆರಿಕದಲ್ಲಿದ್ದರೆ, ವಿಶ್ವದಲ್ಲಿರುವ ಒಟ್ಟಾರೆ ಬಂದೂಕುಗಳ ಪೈಕಿ ಶೇ. 46.9ರಷ್ಟು ಬಂದೂಕುಗಳು ಅಮೆರಿಕನ್ನರ ಬಳಿ ಇವೆ. ಇದು ನಿಜಕ್ಕೂ ಸೋಜಿಗವೇ ಸರಿ. ಇನ್ನೊಂದು ಆಘಾತಕಾರಿ ವಿಷಯ ಎಂದರೆ ಅಮೆರಿಕದಲ್ಲಿ ನಡೆದ ಸ್ವಾತಂತ್ರ್ಯ ಸಮರದ ವೇಳೆ ಸಾವನ್ನಪ್ಪಿದವರಿಗಿಂತ ಅಧಿಕ ಮಂದಿ ಶೂಟೌಟ್‌ಗಳಿಂದ ಪ್ರಾಣ ಕಳೆದುಕೊಂಡಿದ್ದಾರೆ. ಭಾರತವೂ ಸೇರಿದಂತೆ ಹಲವು ದೇಶಗಳ ಜನರು ಅಮೆರಿಕದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಗನ್ ದಾಳಿ ನಡೆಸುವ ದುಷ್ಕರ್ಮಿ ಎಲ್ಲಿ, ಯಾರ ಮೇಲೆ ದಾಳಿ ನಡೆಸುತ್ತಾನೆ ಎಂಬುದನ್ನು ನಿರೀಕ್ಷಿಸುವಂತಿಲ್ಲ. ಹೊಟ್ಟೆಪಾಡಿಗಾಗಿ ಅಮೆರಿಕಕ್ಕೆ ಆಗಮಿಸಿರುವವರೂ ಇತ್ತೀಚೆಗಿನ ಬೆಳವಣಿಗೆಗಳಿಂದ ಆತಂಕಕ್ಕೆ ಒಳಗಾಗಿದ್ದಾರೆ.
ಈಗಾಗಲೇ ಅತಿರೇಕಕ್ಕೆ ತಲುಪಿರುವ ಅಮೆರಿಕನ್ನರ ಗನ್ ವ್ಯಾಮೋಹಕ್ಕೆ ಕಡಿವಾಣ ಹಾಕಲು ಅಲ್ಲಿನ ಸರಕಾರ ಇನ್ನಾದರೂ ಮನಸ್ಸು ಮಾಡಬೇಕಿದೆ. ದೇಶದ ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತರುವ ಮೂಲಕ ಗನ್ ಪರವಾನಿಗೆ ಕಾನೂನನ್ನು ಬಿಗಿಗೊಳಿಸುವ ಜತೆಯಲ್ಲಿ ಈಗಾಗಲೇ ಗನ್ ಲೈಸನ್ಸ್ ಹೊಂದಿರುವವರಿಗೆ ಗನ್ ಬಳಕೆಗೆ ಸಂಬಂಧಿಸಿದಂತೆ ಕಠಿನ ನಿಯಮಾವಳಿಗಳನ್ನು ರೂಪಿಸಬೇಕಿದೆ. ಇಲ್ಲವಾದಲ್ಲಿ ಸದ್ಯೋಭವಿಷ್ಯದಲ್ಲಿ ದೇಶದೊಳಗೇ ಗನ್ ಸಮರ ನಡೆದರೆ ಅಚ್ಚರಿ ಏನೂ ಇಲ್ಲ.