ವಾಷಿಂಗ್ಟನ್: ದಕ್ಷಿಣ ಚೀನ ಸಮುದ್ರದ ವಿವಾದಿತ ಪ್ರದೇಶಕ್ಕೆ ಅಮೆರಿಕ ಎರಡು ಯುದ್ಧ ನೌಕೆಗಳನ್ನು ಕಳುಹಿಸಿದ್ದು ಚೀನ ಹಾಗೂ ಅಮೆರಿಕದ ಮಧ್ಯೆ ವಾಗ್ಧಾಳಿಗೆ ಕಾರಣವಾಗಿದೆ. ತನ್ನ ಗಡಿ ಪ್ರದೇಶ ಎಂದು ಚೀನ ಹೇಳಿಕೊಳ್ಳುತ್ತಿರುವ ಪ್ರದೇಶಕ್ಕೆ ಕ್ಷಿಪಣಿ ನಾಶ ಸಾಮರ್ಥ್ಯ ಹೊಂದಿರುವ ಅಮೆರಿಕದ ಯುಎಸ್‌ಎಸ್ ಸುವೆನ್ಸ್ ಮತ್ತು ಯುಎಸ್‌ಎಸ್ ಪ್ರಬಲ್ ಯುದ್ಧನೌಕೆಗಳು ಸಾಗಿವೆ. ಇವು ವಿವಾದಿತ ಸಾಟಿ ದ್ವೀಪದಿಂದ 12 ನಾಟಿಕಲ್ ಮೈಲು ದೂರದಲ್ಲಿ ಸಂಚರಿಸಿವೆ. ಇದಕ್ಕೆ ಚೀನ ಕ್ರುದ್ಧಗೊಂಡಿದ್ದು, ತನ್ನ ಗಡಿ ಪ್ರದೇಶದಲ್ಲಿ ಅಮೆರಿಕ ಒಳನು ಸುಳಿದೆ ಎಂದು ಆಕ್ಷೇಪಿಸಿದೆ. ದಕ್ಷಿಣ ಚೀನ ಸಮುದ್ರದಲ್ಲಿ ವಿವಾದವನ್ನು ಎಬ್ಬಿಸುವುದಕ್ಕಾಗಿ ಅಮೆರಿಕ ಪ್ರಯತ್ನಿಸುತ್ತಿದೆ ಎಂದು ಚೀನದ ವಿದೇಶಾಂಗ ಸಚಿವಾಲಯದ ವಕ್ತಾರೆ ಹುವಾ ಚುನ್ಯಿಂಗ್ ಆರೋಪಿಸಿದ್ದಾರೆ. ಇಂಥ ಪ್ರಚೋದಕ ಕ್ರಮ ಗಳಿಂದ ಅಮೆರಿಕ ಹಿಂದೆ ಸರಿಯಬೇಕು ಎಂದೂ ಆಗ್ರಹಿಸಿದ್ದಾರೆ. ಅಂತಾರಾಷ್ಟ್ರೀಯ ಕಾನೂನು ಪ್ರಕಾರ ಜಲಗಡಿ ರಕ್ಷಿಸುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಮೆರಿಕ ಹೇಳಿದೆ.