Advertisement

ಬರ್ರೀ, ಇದು ಸ್ಟ್ರಾಬೆರ್ರಿ!

10:14 AM Jan 07, 2020 | mahesh |

ಝೀರೋ ಟು ಹೀರೋ
ಹೆಸರು- ಶಶಿಧರ ಗೊರವರ
ಸ್ಥಳ- ಹುಲ್ಲಂಬಿ ಗ್ರಾಮ, ಕಲಘಟಗಿ, ಧಾರವಾಡ
ಸಿನ್ಸ್‌- 2009

Advertisement

-200 ಕೆ.ಜಿ ಇಳುವರಿ
-65,000 ರೂ. ಲಾಭ
-ನರ್ಸರಿಯಲ್ಲಿ 40,000 ಸಸಿಗಳು

ಪ್ರಗತಿಪರ ರೈತ ಶಶಿಧರ ಗೊರವರ, ತಮ್ಮ ಜಮೀನಿನಲ್ಲಿ ಸಾವಯವ ಪದ್ಧತಿಯಲ್ಲಿ ಅಮೆರಿಕದ ಫಲ ಸ್ಟ್ರಾಬೆರ್ರಿ ಬೆಳೆದು ಯಶಸ್ವಿಯಾಗಿದ್ದಾರೆ. ಆ ಮೂಲಕ ನೆರೆಹೊರೆಯ ರೈತರಿಗೆ ಹೊಸದೊಂದು ವಾಣಿಜ್ಯ ಕೃಷಿಯಲ್ಲಿ ತೊಡಗಲು ಪ್ರೇರಣೆಯಾಗಿದ್ದಾರೆ.

ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಕಂಪನಿ ನಡೆಸುತ್ತಿದ್ದ ಶಶಿಧರ, ಅಲ್ಲಿ ಪ್ರತಿಯೊಬ್ಬ ರೈತರೂ ಸ್ಟ್ರಾಬೆರ್ರಿಯನ್ನು ಅಗಾಧ ಪ್ರಮಾಣದಲ್ಲಿ ಬೆಳೆಯುವುದನ್ನು ನೋಡಿ ಅದರ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ತಾವೂ ಊರಿನಲ್ಲಿ ಈ ಫಲವನ್ನು ಯಾಕೆ ಬೆಳೆಯಬಾರದು ಎಂಬ ಆಲೋಚನೆ ಅವರಿಗೆ ಬಂದಿತು. ಮುಂದೆ, ಸ್ಟ್ರಾಬೆರ್ರಿ ಬೆಳೆಯುವ ಬಗ್ಗೆ ತರಬೇತಿ ಪಡೆದರು. ಇಂದು, ಶಶಿಧರ್‌ ಅವರು ಕೇವಲ ಹಣ್ಣು ಬೆಳೆಯುವುದಷ್ಟೇ ಅಲ್ಲ, ಬೆಂಗಳೂರಿನ ಒಂದು ಕಂಪನಿಯಿಂದ ತಾವು ಬೆಳೆದ ಹಣ್ಣಿಗೆ ಆರ್ಡರ್‌ ಕೂಡ ಪಡೆದುಕೊಂಡಿದ್ದಾರೆ.

ಪ್ರಯೋಗಾತ್ಮಕ ಮನೋಭಾವ ಬೇಕು
ಒಂದು ಎಕರೆ ಭೂಮಿಯಲ್ಲಿ ಸ್ಟ್ರಾಬೆರ್ರಿ ಸಸಿಗಳನ್ನು ನಾಟಿ ಮಾಡಲಾಗಿದ್ದು, ಪ್ರತಿದಿನ 200 ಕೆ.ಜಿ. ಇಳುವರಿ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದಿನಕ್ಕೆ 400 ಕೆ.ಜಿ. ಇಳುವರಿ ಪಡೆಯುವ ವಿಶ್ವಾಸ ಅವರಿಗಿದೆ. ಸದ್ಯ ಹೊಲದಲ್ಲಿಯೇ ಪ್ಯಾಕಿಂಗ್‌ ಮಾಡಿ ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ. ರೈತರು 10 ಗುಂಟೆ ಭೂಮಿಯಲ್ಲಿ ಸ್ಟ್ರಾಬೆರ್ರಿ ಬೆಳೆದೂ ಆರ್ಥಿಕ ಲಾಭ ಪಡೆಯಬಹುದು. ಒಂದು ಗುಂಟೆ ಜಾಗದಲ್ಲಿ 500 ಸಸಿಗಳನ್ನು ನೆಡಬಹುದು. ಹಳ್ಳಿಗಳಲ್ಲಿ ಮಾತ್ರವಲ್ಲ, ನಗರಗಳಲ್ಲಿನ ಖಾಲಿ ಪ್ಲಾಟ್‌ಗಳಲ್ಲಿಯೂ ಬೆರ್ರಿ ಹಣ್ಣಿನ ಕೃಷಿ ಮಾಡಬಹುದಾಗಿದೆ. ಈಗ “ವರ್ಟಿಕಲ್‌ ಫಾರ್ಮಿಂಗ್‌’ ಪದ್ಧತಿಯನ್ನು ಬಳಸಿ ಸ್ಟ್ರಾಬೆರ್ರಿ ಬೆಳೆಯಲಾಗುತ್ತಿದೆ. ಆದಾಯ ನಿಶ್ಚಿತ.

Advertisement

ಇಂಪೋರ್ಟೆಡ್‌ ಸಸಿಗಳು
ಸ್ಟ್ರಾಬೆರ್ರಿ ಹಣ್ಣು ಬೆಳೆಯುವ ಬಗ್ಗೆ ಶಶಿಧರ ಗೊರವರ ಕೃಷಿ ತಜ್ಞರನ್ನು, ಕೃಷಿ ವಿಜ್ಞಾನಿಗಳನ್ನು ಕೇಳಿದಾಗ ಅವರು, ಇಲ್ಲಿನ ಹವಾಗುಣ ಸೂಕ್ತವಾಗಿಲ್ಲ ಎಂದು ನಿರಾಸೆ ಮೂಡಿಸಿದ್ದರು. ಆದರೂ ಛಲ ಬಿಡದ ಶಶಿಧರ ಆದದ್ದಾಗಲಿ ಎಂದುಕೊಂಡು ಪ್ರಯತ್ನ ಮಾಡಲು ಮುಂದಾದರು. ಅಮೆರಿಕದಿಂದ 230 ಸಸಿಗಳನ್ನು ತರಿಸಿದರು. ತಾವೇ ಸ್ವತಃ ನರ್ಸರಿ ಮಾಡುವ ಮೂಲಕ 40,000 ಸಸಿಗಳನ್ನಾಗಿ ಮಾಡಿ ಅವುಗಳನ್ನು ನಾಟಿ ಮಾಡಿ ಬೆಳೆಸಿದರು. ಸಸಿಗಳ ಬುಡದಲ್ಲಿ ಮಲಿcಂಗ್‌ ಪೇಪರ್‌ ಹಾಕಿ ಕಸ ಬೆಳೆಯದಂತೆ ಮಾಡಿದ್ದಾರೆ. ಕೆ.ಜಿ 325 ರೂ.ಗಳಂತೆ ಮಾರುಕಟ್ಟೆಯ ಸಂಸ್ಥೆ ಶಶಿಧರ್‌ಅವರಿಂದ ಖರೀದಿಸುತ್ತಿದೆ.

ಹೊಲದಾಗೆ ನರ್ಸರಿ
ಸ್ಟ್ರಾಬೆರ್ರಿಯಲ್ಲಿ ಸ್ವೀಟ್‌ ಸೆನ್ಸೇಷನ್‌, ನಾಬಿಯಾ ತಳಿಗಳನ್ನು ಬೆಳೆಯುತ್ತಿದ್ದು, ಸ್ಟ್ರಾಬೆರ್ರಿಯಲ್ಲದೇ ಗೂಸ್‌ಬೆರ್ರಿ, ರಾಸ್‌ಬೆರ್ರಿ, ಮಾಲಬೆರ್ರಿ ಹಣ್ಣುಗಳನ್ನು ಕೂಡ ಬೆಳೆಯಲು ಶಶಿಧರ ಮುಂದಾಗಿದ್ದಾರೆ. ಹೊಲದಲ್ಲೇ ನರ್ಸರಿ ಆರಂಭಿಸಿ ಆಸಕ್ತರಿಗೆ ಸಸಿಗಳನ್ನು ಮಾರಾಟ ಮಾಡುವ ಉದ್ದೇಶವನ್ನೂ ಅವರು ಹೊಂದಿದ್ದಾರೆ.
ಹೆಚ್ಚಿನ ಮಾಹಿತಿಗೆ: 8698889944 (ಶಶಿಧರ)

ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು ಅವಶ್ಯ. ರೈತರು ಕಷ್ಟ ಪಟ್ಟು ಹಗಲಿರುಳು ದುಡಿದ ನಂತರ ಬಂದ ಫಸಲಿಗೆ ಉತ್ತಮ ಬೆಲೆ ಸಿಗಬೇಕು. ಸೂಕ್ತ ಮಾರುಕಟ್ಟೆ ದೊರೆತರೆ ಇನ್ನಷ್ಟು ರೈತರು ಸ್ಟ್ರಾಬೆರ್ರಿ ಹಣ್ಣುಗಳನ್ನು ಬೆಳೆಯಲು ಮುಂದಾಗುತ್ತಾರೆ.
– ಶಶಿಧರ ಗೊರವರ

ಮೀನು ಗೊಬ್ಬರ, ಗೋಮೂತ್ರ
ಶಶಿಧರ್‌ ಅವರು ಸಾವಯವ ಕೃಷಿ ಪದ್ಧತಿ, ಇಸ್ರೇಲ್‌ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಹನಿ ನೀರಾವರಿ, ಎರೆಹುಳ ಗೊಬ್ಬರ, ಗೋಮೂತ್ರ, ಸೆಗಣಿ ಮುಂತಾದ ಜೈವಿಕ ತ್ಯಾಜ್ಯಗಳನ್ನೇ ಬಳಸಿ ಉತ್ತಮ ಫ‌ಸಲನ್ನು ಪಡೆಯುತ್ತಿದ್ದಾರೆ. ಸಮೀಪದ ಮಾರುಕಟ್ಟೆಯಲ್ಲಿ ಸಿಗುವ ಕೊಳೆತ, ಹಾಳಾದ ಮೀನುಗಳನ್ನು ಕೆ.ಜಿ.ಗಟ್ಟಲೆ ಖರೀದಿಸಿ ತಂದು ಪ್ಲಾಸ್ಟಿಕ್‌ ಟ್ಯಾಂಕ್‌ ಒಂದರಲ್ಲಿ ತುಂಬಿ, ಬೆಲ್ಲವನ್ನು ಸೇರಿಸಿ 21 ದಿನಗಳ ಕಾಲ ಕೊಳೆಸಿ ಮೀನುಗೊಬ್ಬರವನ್ನು ತಯಾರಿಸುತ್ತಾರೆ. ಸ್ಟ್ರಾಬೆರ್ರಿಯನ್ನು ದೇಶದ ಕೆಲ ರಾಜ್ಯಗಳಲ್ಲಿ ಬೆಳೆಯಲಾಗುತ್ತಿದೆ. ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಇದನ್ನು ಐಸ್‌ಕ್ರೀಮ್‌, ಜಾಮ್‌ ಹಾಗೂ ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ.

– ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next