Advertisement

ಅಮೆರಿಕ :‌ ಕನ್ನಡ ನುಡಿ -ಕನ್ನಡ ಸಂಭಾಷಣೆ ಶಿಬಿರ

12:49 PM Oct 31, 2023 | Team Udayavani |

ವಾಷಿಂಗ್ಟನ್:ಕನ್ನಡದ ಕಂಪನ್ನು ಸಾಗರದಾಚೆಯೂ ಹರಡುವ ಮಹತ್ತರವಾದ ಕಾರ್ಯವನ್ನು ಅಮೆರಿಕದ “ಕನ್ನಡನುಡಿ’ ತಂಡವು ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ವಿಶ್ವದಾದ್ಯಂತ ಇರುವ ಕನ್ನಡಾಭಿಮಾನಿಗಳನ್ನ ಹಾಗೂ ಕನ್ನಡವನ್ನ ಕಲಿಯಲು ಬಯಸುವ ಕನ್ನಡ ಪ್ರೇಮಿಗಳನ್ನು ಒಂದು ಗೂಡಿಸಿ, ಕನ್ನಡ ಬಾಷೆಯನ್ನು ವರ್ಚುವಲ್‌ ಕ್ಲಾಸ್‌ ಮೂಲಕ ಅವರಿಗೆ ಕಲಿಸುತ್ತಾ ಇದೆ. ಸಹಜವಾದ ಸಂಭಾಷಣೆಯ ಮೂಲಕ ಕನ್ನಡದಲ್ಲಿ ಮಾತಾಡುವುದನ್ನು ಹೇಳಿ ಕೊಡಬೇಕೆನ್ನುವ ಮೂಲ ಉದ್ದೇಶದಿಂದ ಪ್ರಾರಂಭವಾದ ಈ ಕನ್ನಡನುಡಿ ಪದ್ದು ಮೆಲನಹಳ್ಳಿಯವರ ಕನಸಿನ ಕೂಸು.

Advertisement

ಇದೇ ಉದ್ದೇಶದಿಂದ ಈ ವರ್ಷದ ಜೂನ್‌ನಿಂದ ಹತ್ತು ವಾರಗಳ ಕಾಲ ಕನ್ನಡನುಡಿ ಶಿಬಿರವನ್ನು ನಡೆಸುತ್ತಾ ಬಂದಿದೆ. ಪ್ರತೀ ವಾರ ಸುಮಾರು ಒಂದೂವರೆ ಇಂದ ಎರಡು ಗಂಟೆಗಳ ಕಾಲ ನಡೆಯುತ್ತಿದ್ದ ಈ ತರಗತಿಗಳಲ್ಲಿ ಸರಳ ಪದಗಳಿಂದ ಸರಳವಾದ ವಾಕ್ಯ ರಚನೆ ಬಗ್ಗೆ ಹೇಳಿಕೊಡುವುದು ಮಾತ್ರವಲ್ಲದೆ ಬೇರೆ ಬೇರೆ ಕಲಿಕೆಯ ಹಂತದಲ್ಲಿರುವ ವಿದ್ಯಾರ್ಥಿಗಳನ್ನು ವರ್ಗೀಕರಿಸಿ ಅವರಿಗೆ ತಕ್ಕಂತೆ ಕಲಿಸುವುದು ಕೂಡ ಇದರ ವಿಶೇಷತೆವಾಗಿತ್ತು.

ಈ ಶಿಬಿರದ ಸಮಾರೋಪ ಸಮಾರಂಭ ಆ.19ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಸಂತೋಷ್‌ ಹಾನಗಲ್‌ ಅವರು ಮತ್ತು ಕನ್ನಡ ಪ್ರಸಾರ ಪರಿಷತ್‌ನ ಕಾರ್ಯದರ್ಶಿ ಗಳಾದ ರಾಘವನ್‌ರವರು ವಹಿಸಿಕೊಂಡಿದ್ದರು.

ರಾಘವನ್‌ ಅವರು ಮಾತನಾಡಿ ದಿನನಿತ್ಯದ ಸಂಭಾಷಣೆಗೆ ಬೇಕಾಗುವ ಪದಗಳನ್ನು ಬಳಸಿ ಸರಳ ಹಾಗೂ ಸಹಜವಾದ ಮಾತುಗಳಲ್ಲಿ ಕನ್ನಡವನ್ನು ಕಲಿಸುವುದು ಹೆಚ್ಚು ಪರಿಣಾಮಕಾರಿ ಎಂದು ಹೇಳುತ್ತಾ, ಭಾಷೆಯ ಬಗ್ಗೆ ಇರುವ ಭಯವನ್ನು ಹೋಗಲಾಡಿಸಿ ಪ್ರೀತಿಯಿಂದ ಕಲಿಸಿದಾಗ ಅದರ ಬಗ್ಗೆ ಹೆಚ್ಚಿನ ಒಲವು ಮೂಡಿ ಕಲಿಕೆಯ ಉತ್ಸಾಹ ಹೆಚ್ಚುತ್ತದೆ ಎಂದೂ ಹೇಳಿದರು.

ಕನ್ನಡನುಡಿಯ ಸಂಸ್ಥಾಪಕರಾದ ಪದ್ದು ಮೇಲನಹಳ್ಳಿಯವರು ಶಿಬಿರದ ರೂಪುರೇಷೆಗಳ ಆಯೋಜನೆಯೊಂದಿಗೆ ಸಮಾರೋಪ ಸಮಾರಂಭವನ್ನು ಶಿಬಿರದ ಶಿಕ್ಷಕವೃಂದದೊಂದಿಗೆ ಯಶಸ್ವಿಯಾಗಿ ನಡೆಸಿದರು.

Advertisement

ಶಿಬಿರದ ಶಿಕ್ಷಕಿಯರಾದ ಫ‌ಣಿಶ್ರೀ ನಾರಾಯಣನ್‌ ಅವರು ಶಿಬಿರದ ಉದ್ದೇಶವನ್ನು ತಿಳಿಸಿ, ಶಿಬಿರದ ಸದಸ್ಯರ, ಶಿಕ್ಷಕ ವೃಂದದ ಪರಿಚಯ ನೀಡಿ ಸ್ವಾಗತಿಸಿದರು. ಶಿಕ್ಷಕಿ ಲಕ್ಷ್ಮೀ ರಾವ್‌ ಹಾಗೂ ರಾಜಶ್ರೀ ಅವರು ಶಿಬಿರದಲ್ಲಿ ಮಕ್ಕಳಿಗೆ ಕಲಿಸಿದ ಸಂಭಾಷಣೆಯ ತುಣುಕನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳು ಶಾರದಾ ಸ್ತುತಿಯನ್ನು ಹಾಡಿದರು. ಶಿಬಿರ ಬಗ್ಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿರುವ ಪೋಷಕರ ಅಭಿಪ್ರಾಯಗಳನ್ನು ಕೇಳುವ ಕಾರ್ಯಕ್ರಮವನ್ನು ಮಂಜುಳಾ ರಾವ್‌ ನಡೆಸಿಕೊಟ್ಟರು.

ಮಕ್ಕಳಾದ ವಿಭಾ ದೊದ್ದಿಪಲ್ಲೆ , ಪ್ರಣತಿ ಸುದರ್ಶನ್‌, ನಂದಿತಾ ನಾರಾಯಣನ್‌ ಮತ್ತು ನಿಖೀಲ್‌ ನಾರಾಯಣನ್‌ ತಾಂತ್ರಿಕ ಸಹಾಯದೊಂದಿಗೆ ಶಿಬಿರದಲ್ಲಿ ಕಲಿಸುತ್ತಿದ್ದ ಪದಗಳನ್ನು ಬಳಸಿ ಸಂಭಾಷಣೆ ಮಾಡಿದ ಆಡಿಯೋ ಕ್ಲಿಪ್‌ಗ್ಳನ್ನು ಶಿಬಿರಾರ್ಥಿಗಳ ಪ್ರಯೋಜನಕ್ಕಾಗಿ ಹಂಚಿದರು.

ಕಾರ್ಯಕ್ರಮದ ಕೊನೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೀಡಲ್ಪಟ್ಟ ಪ್ರಮಾಣ ಪತ್ರಗಳನ್ನು ವಿದ್ಯಾರ್ಥಿ ಗಳು ಹಾಗೂ ಶಿಕ್ಷಕರಿಗೆ ವಿತರಣೆ ಮಾಡಿದ ಪದ್ದು ಮೇಲನಹಳ್ಳಿ ಅವರು ಶಿಬಿರದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಅಭನಂದನೆಗಳನ್ನು ಸಲ್ಲಿಸಿ, ವಂದಿಸಿದರು. ವಿದ್ಯಾಧರ ಶರ್ಮ ನಿರ್ವಹಿಸಿದರು.

ವರದಿ: ಮಂಜುಳಾ ರಾವ್‌, ವಾಷಿಂಗ್ಟನ್‌

Advertisement

Udayavani is now on Telegram. Click here to join our channel and stay updated with the latest news.

Next