ನವದೆಹಲಿ: ಅಮೆರಿಕ ರಾಯಭಾರ ಕಚೇರಿ ಮತ್ತು ಭಾರತದಲ್ಲಿರುವ ಅಮೆರಿಕದ ದೂತಾವಾಸ ಕಚೇರಿಗಳು ಪ್ರಸಕ್ತ ವರ್ಷ ಭಾರತೀಯರಿಗೆ ದಾಖಲೆ ಸಂಖ್ಯೆಯ ವೀಸಾಗಳನ್ನು ಒದಗಿಸುವ ಪ್ರಕ್ರಿಯೆಯಲ್ಲಿ ತೊಡಗಿವೆ ಎಂದು ಮುಂಬೈನ ಕಾನ್ಸುಲರ್ ಮುಖ್ಯಸ್ಥ ಜಾನ್ ಬಲ್ಲಾರ್ಡ್ ಹೇಳಿದ್ದಾರೆ.
ಪ್ರತಿಯೊಂದು ವೀಸಾ ಕೆಟಗರಿಯಲ್ಲೂ ವಿಳಂಬ ಹಾಗೂ ಬ್ಯಾಕ್‌ಲಾಗ್ ದೂರುಗಳು ಕೇಳಿಬಂದ ಬೆನ್ನಲ್ಲೇ ಬಲ್ಲಾರ್ಡ್ ಅವರು ಈ ಹೇಳಿಕೆ ನೀಡಿದ್ದಾರೆ.
ಪ್ರಸ್ತುತ, ಉದ್ಯೋಗ ವೀಸಾಗೆ ಅರ್ಜಿ ಸಲ್ಲಿಸುವ ಭಾರತೀಯರು 60-280 ದಿನಗಳವರೆಗೆ ಕಾಯಬೇಕಾಗಿದೆ. ಕಳೆದ ವರ್ಷ ನಾವು ಭಾರತೀಯ ವಿದ್ಯಾರ್ಥಿಗಳಿಗೆ 1.25 ಲಕ್ಷದಷ್ಟು ವೀಸಾಗಳನ್ನು ವಿತರಿಸಿದ್ದೇವೆ. ಒಟ್ಟಾರೆ 8 ಲಕ್ಷ ವೀಸಾಗಳನ್ನು ನೀಡಲಾಗಿದೆ. ಈ ವರ್ಷವೂ ಹೆಚ್ಚಿನ ಸಂಖ್ಯೆಯ ಭಾರತೀಯರು ವೀಸಾಗೆ ಅರ್ಜಿ ಸಲ್ಲಿಸುತ್ತಾರೆಂದು ನಂಬಿದ್ದೇವೆ ಎಂದು ಬಲ್ಲಾರ್ಡ್ ತಿಳಿಸಿದ್ದಾರೆ.
ಜತೆಗೆ, ಬಿ1 ಮತ್ತು ಬಿ2 (ಟೂರಿಸ್ಟ್ ಹಾಗೂ ಉದ್ದಿಮೆ ಪ್ರಯಾಣ)ಗಾಗಿ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದವರ ಬ್ಯಾಕ್‌ಲಾಗ್ ತಗ್ಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದೂ ಹೇಳಿದ್ದಾರೆ.