Advertisement

ದೇಗುಲಗಳ ರಕ್ಷಣೆ ಕಾಯ್ದೆಗೆ ತಿದ್ದುಪಡಿ ಸ್ವಾಗತಾರ್ಹ

12:16 AM Oct 26, 2021 | Team Udayavani |

ಜನರ ಧಾರ್ಮಿಕ ನಂಬಿಕೆಗಳಿಗೆ ಕಟಿಬದ್ಧವಾಗಿ ರಾಜ್ಯ ಸರಕಾರ ಅಕ್ರಮವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳನ್ನು ರಕ್ಷಿಸಲು ಕರ್ನಾಟಕ ಧಾರ್ಮಿಕ ಕಟ್ಟಡಗಳ ಸಂರಕ್ಷಣ ಕಾಯ್ದೆ 2021ನ್ನು ಜಾರಿಗೆ ತಂದಿದೆ.

Advertisement

ರಾಜ್ಯಪಾಲರ ಅಧಿಕೃತ ಸಹಿಯೊಂದಿಗೆ ಈ ಕಾಯ್ದೆ ಜಾರಿಗೆ ಬಂದಿದ್ದು, ಈ ಕಾಯ್ದೆ ಜಾರಿಯಾದ ದಿನದವರೆಗೂ ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಾಣವಾಗಿರುವ ಧಾರ್ಮಿಕ ಕಟ್ಟಡಗಳು ಅಂದರೆ, ದೇವಸ್ಥಾನಗಳು, ಚರ್ಚ್‌, ಮಸೀದಿ, ಬಸದಿ, ಬೌದ್ಧ ವಿಹಾರಗಳು, ಮಜರ್‌ಗಳನ್ನು ತೆರವು ಗೊಳಿಸುವಂತೆ ಯಾವುದೇ ಕೋರ್ಟ್‌ ಅಥವಾ ನ್ಯಾಯಮಂಡಳಿ ಇಲ್ಲವೇ ಪ್ರಾಧಿಕಾರ ಆದೇಶ ಹೊರಡಿಸಿದ್ದರೂ, ಈ ಕಾಯ್ದೆ ಜಾರಿಯಿಂದ ಅವುಗಳನ್ನು ತೆರವುಗೊಳಿಸದಂತೆ ರಕ್ಷಣೆ ನೀಡಲಾಗಿದೆ.

ಆದರೆ ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಧಾರ್ಮಿಕ ಕಟ್ಟಡ ನಿರ್ಮಾಣ ಮಾಡಬೇಕೆಂದರೂ ಸ್ಥಳೀಯ ಜಿಲ್ಲಾಡಳಿತ ದಿಂದ ಅನುಮತಿ ಪಡೆಯುವುದನ್ನು ಸರಕಾರ ಈ ಕಾಯ್ದೆಯ ಮೂಲಕ ಕಡ್ಡಾಯಗೊಳಿಸಿದೆ.

ರಾಜ್ಯ ಸರಕಾರ ಜನರ ಭಾವನೆಗಳಿಗೆ ಬೆಲೆ ಕೊಟ್ಟು ಈ ಕಾಯ್ದೆ ಜಾರಿಗೆ ತಂದಿದೆ. ಭಾರತದಲ್ಲಿ ಧಾರ್ಮಿಕ ನಂಬಿಕೆಗಳು ಆಯಾ ಧರ್ಮಗಳ ಆಚರಣೆಯ ಹಿನ್ನೆಲೆಯಲ್ಲಿ ಜನರು ದೇವಸ್ಥಾನ, ಮಸೀದಿ, ಚರ್ಚ್‌, ಬಸದಿ, ಬೌದ್ಧ ವಿಹಾರಗಳನ್ನು ನಿರ್ಮಾಣ ಮಾಡಿಕೊಂಡು ತಮ್ಮ ಧರ್ಮ ಆಚರಣೆ ಮಾಡಿಕೊಂಡು ಹೋಗುವ ಪ್ರವೃತ್ತಿ ನಮ್ಮಲ್ಲಿ ಹೆಚ್ಚಾಗಿದೆ.

ಇದನ್ನೂ ಓದಿ:ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

Advertisement

ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಧರ್ಮದವರು ಧಾರ್ಮಿಕ ಕಟ್ಟಡ ನಿರ್ಮಾಣ ಮಾಡಲು ಆರಂಭಿಸುವ ಮುಂಚೆಯೇ ಗ್ರಾಮ ಪಂಚಾಯತ್‌ನಿಂದ ಹಿಡಿದು ರಾಜ್ಯ ಸರಕಾರದವರೆಗೂ ಜಾಗೃತವಾಗಿ ಅಕ್ರಮ ವಾಗಿದ್ದರೆ ಅದನ್ನು ತಡೆಯುವ ಕೆಲಸ ಬದ್ದತೆಯಿಂದ ಆಗಬೇಕಿದೆ. ಧಾರ್ಮಿಕ ಕಟ್ಟಡಗಳ ನಿರ್ಮಾಣ ಹಾಗೂ ಧರ್ಮದ ವಿಚಾರ ಅತ್ಯಂತ ಸೂಕ್ಷ್ಮವಾಗಿರುವುದರಿಂದ ಯಾವುದೇ ಧರ್ಮದ ಧಾರ್ಮಿಕ ಕಟ್ಟಡ ನಿರ್ಮಾಣವಾದ ಮೇಲೆ ಸರಕಾರ ಅದನ್ನು ತೆರವುಗೊಳಿಸಲು ಮುಂದಾ ದರೆ ಮತ್ತೆ ವಿರೋಧ ವ್ಯಕ್ತವಾಗುವುದು ಸಾಮಾನ್ಯ. ಏಕೆಂದರೆ, ನಮ್ಮ ದೇಶದಲ್ಲಿ ಧರ್ಮ ಕಾನೂನಿನ ನಿಯಂತ್ರಣಕ್ಕೂ ಸಿಗದಷ್ಟು ಸೂಕ್ಷ್ಮವಾಗಿ ವ್ಯಾಪಿಸಿಕೊಂಡಿದೆ. ಅದರ ಪರಿಣಾಮವಾಗಿಯೇ ರಾಜ್ಯ ಸರಕಾರ ತುರ್ತಾಗಿ ಧಾರ್ಮಿಕ ಕಟ್ಟಡಗಳ ಸಂರಕ್ಷಣಾ ಕಾಯ್ದೆ ಜಾರಿಗೆ ತಂದಿದೆ.

ಆದರೆ, ಈ ಕಾಯ್ದೆಯ ಬಗ್ಗೆ ಸರಕಾರ ಸಾರ್ವಜನಿಕರಿಗೆ ವ್ಯಾಪಕವಾಗಿ ಪ್ರಚಾರ ಹಾಗೂ ಜಾಗೃತಿ ಮೂಡಿಸಿ, ತಮ್ಮ ನಂಬಿಕೆಗಳ ಆಚರಣೆ ಜಾರಿಗೊಳಿಸುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೇ ಸರಕಾರದ ವ್ಯಾಪ್ತಿಯಲ್ಲಿರುವ ಪಾರ್ಕ್‌, ರಸ್ತೆ, ಆಟದ ಮೈದಾನದಂತಹ ಸಾರ್ವಜನಿಕರು ಹೆಚ್ಚಾಗಿ ಬಳಸುವ ಪ್ರದೇ ಶ ಗ‌ಳಲ್ಲಿ ಯಾವುದೋ ನಂಬಿಕೆಯ ಹಿನ್ನೆಲೆಯಲ್ಲಿ ಧಾರ್ಮಿಕ ಕಟ್ಟಡಗಳು ನಿರ್ಮಾಣವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರದ ಮೇಲಿದೆ.

ಅಲ್ಲದೇ ಸಾರ್ವಜನಿಕರೂ ಕೂಡ ಯಾವುದೇ ಧರ್ಮದ ದೇವರು ಹಾಗೂ ನಂಬಿಕೆಯ ಹೆಸರಿನಲ್ಲಿ ಎಲ್ಲೆಂದರಲ್ಲಿ ಧಾರ್ಮಿಕ ಕಟ್ಟಡಗಳನ್ನು ನಿರ್ಮಾಣ ಮಾಡುವುದರಿಂದ ಬೇರೆಯವರ ಭಾವನೆಗಳು ಹಾಗೂ ಜೀವನ ಕ್ರಮಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಹೊಂದಬೇಕಿದೆ. ಇನ್ನು ಮುಂದಾದರೂ ಧಾರ್ಮಿಕ ಕಟ್ಟಡಗಳ ವಿಚಾರದಲ್ಲಿ ಕಾನೂನಿನ ಅಸ್ತ್ರ ಪ್ರಯೋಗವಾಗದಂತೆ ಸರಕಾರ ಹಾಗೂ ಜನರೂ ನಡೆದುಕೊಳ್ಳಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next