ಬೆಂಗಳೂರು: ಸಹಕಾರ ವಿಷಯದಲ್ಲಿ ಡಿಪ್ಲೊಮಾ ತರಬೇತಿ ಪಡೆದ ಪದವೀಧರರಿಗೆ ಸಹಕಾರ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಮುಂದಿನ ಅಧಿವೇಶನದಲ್ಲಿ ಸಹಕಾರ ಕ್ಷೇತ್ರದ ಮಸೂದೆಗೆ ಅಗತ್ಯ ತಿದ್ದುಪಡಿ ತರಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ರಾಜ್ಯ ಸಹಕಾರ ಮಹಾಮಂಡಲವು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ 100ನೇ ಅಂತಾರಾಷ್ಟ್ರೀಯ ಸಹಕಾರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಯ್ದೆ ತಿದ್ದುಪಡಿಯು ಮುಂದಿನ ದಿನಗಳಲ್ಲಿ ವೃತ್ತಿಪರರ ನೇಮಕಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಈಗಾಗಲೇ ಕೇಂದ್ರ ಸರಕಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಗಣಕೀಕರಣ ವ್ಯವಸ್ಥೆ ಮತ್ತು ತಂತ್ರಜ್ಞಾನ ಅಳವಡಿಸಲು ಸುಮಾರು 2,500 ಕೋಟಿ ರೂ. ಅನುದಾನ ನೀಡಲು ಒಪ್ಪಿದೆ. ಆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವಹಿವಾಟನ್ನು ಸಂಪೂರ್ಣ ಕಂಪ್ಯೂಟರೀಕೃತಗೊಳಿಸುವ ಕಾರ್ಯ ಶೀಘ್ರದಲ್ಲೇ ನಡೆಯಲಿದೆ ಎಂದರು.
ಸಹಕಾರ ಕ್ಷೇತ್ರದ ಕಾನೂನು ಬಿಗಿಗೊಳಿಸಲು ಸರಕಾರ ನಿರ್ಧರಿಸಿದೆ. ಅಗತ್ಯವಿದ್ದ ಕಡೆಗಳಲ್ಲಿ ಕಾನೂನು ತಿದ್ದುಪಡಿ ಮಾಡಲಾಗುತ್ತಿದೆ. ಸಹಕಾರ ಮಹಾ ಮಂಡಲ ರಾಜ್ಯದ ಮಾತೃಸಂಸ್ಥೆ ಆಗಿರುವ ಹಿನ್ನೆಲೆಯಲ್ಲಿ ಈ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ತಿಳಿಸಿದರು.
Related Articles
ಯಶಸ್ವಿನಿ ಯೋಜನೆ ಜಾರಿ
ಅಕ್ಟೋಬರ್ 2ರಿಂದ ಯಶಸ್ವಿನಿ ಯೋಜನೆ ಜಾರಿಗೆ ತರಲು ಎಲ್ಲ ರೀತಿಯ ಸಿದ್ಧತೆಗಳೂ ನಡೆದಿವೆ. ಜತೆಗೆ ಕ್ಷೀರ ಸಮೃದ್ದಿ ಬ್ಯಾಂಕ್‌ಗೆ 20 ವರ್ಷಗಳಿಂದ ಆರ್‌ಬಿಐ ಅನುಮತಿ ನೀಡಿಲ್ಲ. ಯಾವುದೇ ಸಹಕಾರ ಬ್ಯಾಂಕ್‌ಗೆ ಅನುಮತಿ ನೀಡಿಲ್ಲ. ಆ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮೂಲಕ ಕ್ಷೀರ ಸಮೃದ್ದಿ ಬ್ಯಾಂಕ್ ಸ್ಥಾಪನೆಗೆ ಅನುಮತಿ ಕೇಳಲಾಗುವುದು. ಇದರಿಂದ ಸುಮಾರು 25 ಲಕ್ಷ ಹೈನುಗಾರರಿಗೆ ಅನುಕೂಲವಾಗಲಿದೆ ಎಂದರು.
ಸಹಕಾರ ಮಹಾ ಮಂಡಲದ ಅಧ್ಯಕ್ಷ ಜಿ.ಟಿ.ದೇವೇಗೌಡ ಮಾತನಾಡಿ, ಸಹಕಾರ ವಿವಿ ಸ್ಥಾಪನೆ ಸಂಬಂಧಿಸಿ ಕೇಂದ್ರ ಸರಕಾರಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.