Advertisement

Dinesh Gundurao: ತಂಬಾಕು ನಿಷೇಧ ಕಾಯಿದೆ ತಿದ್ದುಪಡಿ?

10:25 AM Sep 20, 2023 | Team Udayavani |

ಬೆಂಗಳೂರು: ಹುಕ್ಕಾ ಬಾರ್‌ ಸೇರಿ ರಾಜ್ಯದಲ್ಲಿ ತಂಬಾಕು ಉತ್ಪನ್ನಗಳನ್ನು ನಿಷೇಧಿಸಲು ತಂಬಾಕು ನಿಷೇಧ ಕಾಯಿದೆಗೆ (ಕೋಟ್ಪಾ) ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದ್ದು, ತಂಬಾಕು ಉತ್ಪನ್ನಗಳ ಖರೀದಿಗೆ ಇದ್ದ ವಯೋ ನಿರ್ಬಂಧವನ್ನು 18 ರಿಂದ 21 ವರ್ಷಕ್ಕೆ ಹೆಚ್ಚಿಸಲು ನಿರ್ಧರಿಸಿದೆ.

Advertisement

ರಾಜ್ಯದಲ್ಲಿ ಹೆಚ್ಚುತ್ತಿರುವ ತಂಬಾಕು ಹಾಗೂ ಇತರೆ ಮಾದಕ ವಸ್ತುಗಳ ಸೇವನೆ ನಿಯಂತ್ರಣ ಸಂಬಂಧ ಯುವಜನ ಸೇವೆ ಹಾಗೂ ಕ್ರೀಡಾ ಸಚಿವ ನಾಗೇಂದ್ರ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಈ ವಿಷಯ ತಿಳಿಸಿದರು. ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆ ಹಾಗೂ ಶಾಲೆಗಳ ಜೊತೆಗೆ, ದೇವಸ್ಥಾನಗಳು, ಆಸ್ಪತ್ರೆಗಳ ಸುತ್ತ ಮುತ್ತ ಮಾರಾಟ ನಿಷೇಧಿಸಲಾಗುವುದು. ಈ ಸಂಬಂಧ ಕೋಟ್ಪಾ ಕಾಯಿದೆಗೆ ತಿದ್ದುಪಡಿಗೆ ಸೂಚಿಸಲಾಗಿದೆ.

ಸಿಗರೇಟ್‌ ಜೊತೆಗೆ ಇತರ ತಂಬಾಕು ಉತ್ಪನ್ನಗಳ ಸೇವನೆ ಮತ್ತು ಮಾರಾಟವನ್ನೂ ನಿಷೇಧಿಸಲಾ ಗುವುದು ಎಂದರು. ತಂಬಾಕು ಖರೀದಿಗೆ ಇದ್ದ ವಯೋ ನಿರ್ಬಂಧವನ್ನು 18 ವರ್ಷದ ಬದಲು 21 ವರ್ಷಕ್ಕೆ ವಿಸ್ತರಿಸಲಾಗುವುದು. ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪೊಲೀಸ್‌ ಇಲಾಖೆ ಸಹಯೋಗದೊಂದಿಗೆ ಹುಕ್ಕಾ ಬಾರ್‌ಗಳಲ್ಲಿ ಮಾದಕ ವಸ್ತುಗಳ ಸೇವನೆಯನ್ನು ನಿಷೇಧಿಸು ತ್ತೇವೆ. ಇದಕ್ಕೆ ಯುವಜನಸೇವೆ ಹಾಗೂ ಕ್ರೀಡಾ ಇಲಾಖೆಯಿಂದಲೂ ಸಾಕಷ್ಟು ಸಲಹೆಗಳು ಬಂದಿವೆ ಎಂದರು.

ಯಾವುದೇ ಶಾಲೆ, ಕಾಲೇಜು, ಆಸ್ಪತ್ರೆ, ಶಿಶುಪಾಲನಾ ಕೇಂದ್ರಗಳು, ಹೆಲ್ತ್‌ ಕೇರ್‌ ಸೆಂಟರ್‌, ದೇಗುಲಗಳು, ಮಂದಿರಗಳು, ಮಸೀದಿಗಳು, ಉದ್ಯಾನವನ ಸೇರಿ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವಸ್ತುಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತಿದೆ. ಮಾದಕ ವಸ್ತುಗಳ ವ್ಯಸನಕ್ಕೆ ದಾಸರಾಗಿ ಇಂದಿನ ಯುವಜನತೆ ತಮ್ಮ ಅಮೂಲ್ಯ ಭವಿಷ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ಬುಡಸಮೇತ ಕಿತ್ತೆಸೆಯುವ ಗಟ್ಟಿ ನಿರ್ಧಾರವನ್ನ ಮಾಡಿದ್ದೇವೆ ಎಂದು ತಿಳಿಸಿದರು.

ತಂಬಾಕು ಸೇವನೆಯ ಬಳಿಕ ಯುವಕರು ಡ್ರಗ್ಸ್‌, ಮಾದಕ ವಸ್ತುಗಳ ವ್ಯಸನಗಳತ್ತ ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆಲ್ಲಾ ತಂಬಾಕು ಸೇವನೆಯೇ ಒಂದು ರೀತಿಯಲ್ಲಿ ಅಡಿಪಾಯ ಹಾಕಿ ಕೊಡುತ್ತಿದೆ, ಹೀಗಾಗಿ ಮೂಲದಲ್ಲೇ ಸರಿಪಡಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಅಭಿಪ್ರಾಯಪಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next