Advertisement

ಎನ್ ಡಿಆರ್ ಎಫ್ ನಿಯಮಕ್ಕೆ ತಿದ್ದುಪಡಿ ತಂದು ಕೂಡಲೇ ಪರಿಹಾರ ನೀಡಿ: ಸಿದ್ದರಾಮಯ್ಯ ಆಗ್ರಹ

11:03 AM Jun 21, 2022 | Team Udayavani |

ಬೆಂಗಳೂರು: ಎನ್ ಡಿಆರ್ ಎಫ್ ನಿಯಮಗಳನ್ನು ಕೂಡಲೇ ತಿದ್ದುಪಡಿ ಮಾಡಿ ಪ್ರಕೃತಿ ವಿಕೋಪದಿಂದ ಆಗಿರುವ ಹಾನಿಗೆ ಸಮರ್ಪಕವಾದ ಪರಿಹಾರ ನೀಡುವಂತೆ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement

ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿರುವ ಅವರು, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ಪರಿಹಾರವನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ಬಿಡುಗಡೆ ಮಾಡುತ್ತದೆ. ಪ್ರತಿ 5 ವರ್ಷಗಳಿಗೆ ಒಮ್ಮೆ ಎನ್‍ಡಿಆರ್‍ಎಫ್ ನಿಯಮಗಳನ್ನು ತಿದ್ದುಪಡಿ ಮಾಡಿ  ರೈತರ ಬೆಳೆಗಳಿಗೆ ಇನ್‍ಫುಟ್ ಸಬ್ಸಿಡಿಯ ಮೊತ್ತ, ಮೀನುಗಾರರ ದೋಣಿಗಳಿಗೆ ಆದ ಹಾನಿ, ಜನ ಜಾನುವಾರಿಗಳಿಗೆ ಉಂಟಾದ ತೊಂದರೆ, ಮನೆ ಹಾನಿ, ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಆದ ನಷ್ಟಗಳಿಗೆ ನೀಡುವ ಪರಿಹಾರದ ಮೊತ್ತವನ್ನು ಪರಿಷ್ಕರಿಸಲಾಗುತ್ತದೆ. ಆದರೆ 2015-20ಕ್ಕೆ ಅನ್ವಯವಾಗುವಂತೆ ರೂಪಿಸಿದ ನಿಯಮಗಳನ್ನು 2015 ರಲ್ಲಿ ಪರಿಷ್ಕರಿಸಲಾಗಿತ್ತು. ಸಹಜವಾಗಿ ಇದು 2020 ರಲ್ಲಿ ಮತ್ತೆ ಪರಿಷ್ಕರಿಸಬೇಕಾಗಿತ್ತು. ಇದುವರೆಗೂ ಪರಿಷ್ಕರಣೆ ಮಾಡಿಲ್ಲ ಎಂದಿದ್ದಾರೆ.

ಕಳೆದ ಎರಡು ವರ್ಷಗಳಿಂದ ಎಲ್ಲ ಉತ್ಪನ್ನಗಳ ಬೆಲೆ ದುಪ್ಪಟ್ಟಾಗಿವೆ. ಹಣದುಬ್ಬರ ದಾಖಲೆ ಮಟ್ಟಕ್ಕೆ ತಲುಪಿದೆ. ಇಷ್ಟಾದರೂ ಕೇಂದ್ರ ಸರ್ಕಾರ ಎನ್‍ಡಿಆರ್‍ಎಫ್ ನಿಯಮಗಳನ್ನು ಪರಿಷ್ಕರಿಸಿಲ್ಲ. ಪ್ರಸ್ತುತ ಒಂದು ಎಕರೆ ಮಳೆಯಾಶ್ರಿತ ಪ್ರದೇಶದಲ್ಲಿ ರೈತರು ಬೆಳೆದ ಬೆಳೆ ಶೇ.33ಕ್ಕಿಂತ ಹೆಚ್ಚು ಹಾನಿಯಾದರೆ ಸಿಗುವ ಪರಿಹಾರ ಕೇವಲ 2720 ರೂಪಾಯಿ ಮಾತ್ರ. ಅದರಲ್ಲೂ ಗರಿಷ್ಠ 2.5 ಹೆಕ್ಟೇರ್‍ ಗೆ ಅಂದರೆ 6800 ಮಾತ್ರ. ಪ್ರತಿ ಗುಂಟೆ ಗೆ ಕೇವಲ 68 ರೂಪಾಯಿ ಸಿಗುತ್ತದೆ. ಆದರೆ ಒಂದು ಎಕರೆ ರಾಗಿ, ಜೋಳ ಬೆಳೆಯಲು ಕನಿಷ್ಠ 25000 ರೂಪಾಯಿ ಖರ್ಚು ತಗಲುತ್ತದೆ. ಈ ಮೊತ್ತ ಪರಿಷ್ಕರಣೆಯಾಗಲೇಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರ ಈ ಮೊತ್ತವನ್ನು ಪರಿಷ್ಕರಣೆ ಮಾಡದ ಕಾರಣದಿಂದ ಕಳೆದ 2 ವರ್ಷಗಳಿಂದ ರೈತರಿಗೆ ವಿಪರೀತ ಹಾನಿಯಾಗಿದೆ. ರಾಜ್ಯದಲ್ಲಿ ಕಳೆದ 3 ವರ್ಷಗಳಿಂದ ಸಂಭವಿಸಿರುವ ನಷ್ಟದ ಪ್ರಮಾಣ ಒಂದು ಅಂದಾಜಿನ ಪ್ರಕಾರ 2 ಲಕ್ಷ ಕೋಟಿ ರೂಗಳಷ್ಟಾಗಬಹುದು. ಆದರೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಮೊತ್ತ ಕೇವಲ 3965 ಕೋಟಿ ರೂ ಮಾತ್ರ. ರಾಜ್ಯದಲ್ಲಿ ಮೇ ತಿಂಗಳಿಂದ ನವೆಂಬರ್ ವರೆಗೆ ಸಂಭವಿಸಿದ ಪ್ರವಾಹದ ಹಾನಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಾರ್ಚ್-2022 ರಲ್ಲಿ ಕೇವಲ 492 ಕೋಟಿ ಬಿಡುಗಡೆ ಮಾಡಿದೆ. ಇದು ಮೋದಿ ಸರ್ಕಾರದ ವೇಗ ಮತ್ತು ರೈತ ಪರ ಕಾಳಜಿ ಎಂದು ನಾವು ಅರ್ಥ ಮಾಡಿ ಕೊಳ್ಳಬೇಕಾಗಿದೆ ಎಂದು ಟೀಕಿಸಿದ್ದಾರೆ.

ಇದನ್ನೂಓದಿ:ಭಾರತದಲ್ಲಿ 24ಗಂಟೆಯಲ್ಲಿ 9,923 ಕೋವಿಡ್ ಸೋಂಕು ಪ್ರಕರಣ ದೃಢ; 17 ಮಂದಿ ಸಾವು

Advertisement

ಜನರು ಮತ್ತು ವಿರೋಧ ಪಕ್ಷಗಳು ಪರಿಹಾರಕ್ಕಾಗಿ ಒತ್ತಡಗಳನ್ನು ತಂದಾಗ ರಾಜ್ಯ ಸರ್ಕಾರ 2391 ಕೋಟಿ ರೂಪಾಯಿಗಳಷ್ಟು ಪರಿಹಾರವನ್ನು ರೈತರಿಗೆ ನೀಡಿತು.  ಕೇಂದ್ರ ಸರ್ಕಾರ ನೀಡಬೇಕಾದ ಪರಿಹಾರದ ಮೊತ್ತವನ್ನು ರಾಜ್ಯ ಸರ್ಕಾರ ನೀಡಬೇಕಾಯಿತು. ಆ ಮೂಲಕ ಕೇಂದ್ರವು ರಾಜ್ಯವನ್ನು ಇನ್ನಷ್ಟು ನಶೋಷಣೆ ಮಾಡಿತು. ಕಳೆದ 3 ವರ್ಷಗಳಿಂದ ರಾಜ್ಯ ಸರ್ಕಾರ 3890 ಕೋಟಿ ರೂಗಳನ್ನು ರೈತರಿಗೆ, ವಸತಿ ಹಾನಿಯಾದವರಿಗೆ ನೀಡಿದೆ. ಇದಿಷ್ಟೂ ಸೇರಿದಂತೆ ಹೆಚ್ಚುವರಿ ಹಣವನ್ನು ಕೇಂದ್ರ ಸರ್ಕಾರ ನೀಡಬೇಕಾಗಿತ್ತು. ಯಾಕೆಂದರೆ ಪರಿಹಾರ ನೀಡುವುದಕ್ಕೋಸ್ಕರ ಕೇಂದ್ರದ ಬಜೆಟ್‍ನಲ್ಲಿ ಹಣ ಮೀಸಲಿರಿಸಲಾಗುತ್ತದೆ. ಆದರೆ ಕರ್ನಾಟಕಕ್ಕೆ ಕೊಡಬೇಕಾದಷ್ಟು ಪರಿಹಾರವನ್ನು ನೀಡದೆ ಅನ್ಯಾಯ ಮಾಡಿದೆ ಎಂದಿದ್ದಾರೆ.

ಮೊದಲು ಎನ್‍ಡಿಆರ್ಎಫ್  ನಿಯಮಗಳಿಗೆ 2020 ರಿಂದಲೆ ಪೂರ್ವಾನ್ವಯವಾಗುವಂತೆ ತಿದ್ದುಪಡಿ ಮಾಡಿ ಬಾಕಿ ಪರಿಹಾರವನ್ನು ಬಿಡುಗಡೆ ಮಾಡಬೇಕು. ರೈತರಿಗೆ ನಷ್ಟವಾದ ಅಷ್ಟೂ ಹಣವನ್ನು ನಷ್ಟವಾದ ಅಷ್ಟೂ ಎಕರೆಗೆ ಪರಿಹಾರ ನೀಡುವ ಹಾಗೆ ತಿದ್ದುಪಡಿ ತರಬೇಕು. ಮನೆ ಕಳೆದುಕೊಂಡವರಿಗೆ, ಮೀನುಗಾರರಿಗೆ ಹಾಗೂ ಇತರೆ ಎಲ್ಲ ಬಾಧಿತರಿಗೆ ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ಪರಿಹಾರ ನೀಡುವಂತಾಗಬೇಕು. ಇತ್ತೀಚೆಗೆ ಅಸಾನಿ ಚಂಡಮಾರುತದಿಂದ ತೊಂದರೆಗಳಿಗೆ ಒಳಗಾದವರಿಗೆ ತುರ್ತಾಗಿ ಪರಿಹಾರ ನೀಡಬೇಕು. ಕಳೆದ ಮೂರು ವರ್ಷಗಳಿಂದ ಹಾನಿಯಾಗಿರುವ ಸಾವಿರಾರು ಮನೆಗಳಿಗೆ ಈಗಲೂ ಸಮರ್ಪಕ ಪರಿಹಾರ ನೀಡಿಲ್ಲ. ಶಾಶ್ವತ ನೆಲೆ ಕಲ್ಪಿಸಿಲ್ಲ. ಈ ವ್ಯವಸ್ಥೆಯನ್ನು ತುರ್ತಾಗಿ ಮಾಡಬೇಕಾಗಿದೆಯೆಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next