ಬೆಂಗಳೂರು: ಮದ್ಯ ಸೇವಿಸಿ ಖಾಸಗಿ ಆ್ಯಂಬುಲೆನ್ಸ್ ಚಾಲನೆ ಮಾಡುತ್ತಿದ್ದ ರಾಜಾಜಿನಗರದ ಯಶವಂತ (29) ಎಂಬಾತನನ್ನು ಹಲಸೂರು ಗೇಟ್ ಸಂಚಾರ ಠಾಣೆ ಪೊಲೀಸರು ತಡೆದು ದಂಡ ಹಾಕಿದ್ದಾರೆ.
ಮದ್ಯ ಸೇವಿಸಿ ಆ್ಯಂಬುಲೆನ್ಸ್ ಚಾಲನೆ ಮಾಡುತ್ತಿದ್ದ ಆರೋಪಿ, ಪೊಲೀಸರು ಅಡ್ಡ ಹಾಕುವುದನ್ನು ಕಂಡು ತಪ್ಪಿಸಿಕೊಳ್ಳಲು ಸೈರನ್ ಆನ್ ಮಾಡಿದ್ದ. ಜತೆಗೆ ಮೃತ ದೇಹ ಕೊಂಡೊಯ್ಯುವಾಗ ವಾಸನೆ ಬರುತ್ತದೆ ಎಂದು ಮದ್ಯ ಸೇವಿಸಿದ್ದೆ ಎಂದು ಸಬೂಬು ಹೇಳಿದ್ದಾನೆ.
ರಾಜಾಜಿನಗರದ ಸುಷ್ಮಾ ಆ್ಯಂಬುಲೆನ್ಸ್ ಸರ್ವಿಸ್‌ನಲ್ಲಿ ಚಾಲಕನಾಗಿರುವ ಆರೋಪಿ, ಶುಕ್ರವಾರ ರಾತ್ರಿ 11.45ಕ್ಕೆ ಕೆ.ಆರ್.ಸರ್ಕಲ್ ಮಾರ್ಗವಾಗಿ ಎಚ್‌ಎಸ್‌ಆರ್ ಲೇಔಟ್‌ಗೆ ಹೋಗುವಾಗ ಸಿಕ್ಕಿ ಬಿದ್ದಿದ್ದಾನೆ. ಪೊಲೀಸರು ಆ್ಯಂಬುಲೆನ್ಸ್ ವಶಕ್ಕೆ ಪಡೆದು ದಂಡ ಕಟ್ಟಿಸಿಕೊಂಡು ಬಿಟ್ಟಿದ್ದಾರೆ. ಆರೋಪಿಯ ಚಾಲನಾ ಪರವಾನಗಿ ವಶಕ್ಕೆ ಪಡೆದು ಆರ್‌ಟಿಒ ಕಚೇರಿಗೆ ಕಳುಹಿಸಲಾಗಿದೆ ಎಂದು ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಶನಿವಾರ ರಾತ್ರಿ ಹಲಸೂರು ಗೇಟ್ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಮೊಹಮದ್ ಆಲಿ, ತಪಾಸಣೆಯಲ್ಲಿ ತೊಡಗಿದ್ದಾಗ ರಾಜಾಜಿನಗರದಿಂದ ಎಚ್‌ಎಸ್‌ಆರ್ ಲೇಔಟ್‌ಗೆ ಮೃತ ದೇಹವೊಂದನ್ನು ತರಲು ಹೋಗುತ್ತಿದ್ದ ಯಶವಂತ ಮದ್ಯ ಸೇವಿಸಿದ್ದ.
ಪೊಲೀಸರ ಕಂಡು ಸೈರನ್ ಹಾಕಿದ: ಹಲಸೂರು ಗೇಟ್ ಸಂಚಾರ ಠಾಣೆ ಬಳಿ ಹೋಗುತ್ತಿದ್ದಂತೆ ಇದಕ್ಕಿದ್ದಂತೆ ಆ್ಯಂಬುಲೆನ್ಸ್ ಸೈರನ್ ಆನ್ ಆಗಿದೆ. ಏಕಾಏಕಿ ಸೈರನ್ ಶಬ್ಧ ಕೇಳಿದ್ದರಿಂದ ಅನುಮಾನಗೊಂಡ ಇನ್ಸ್‌ಪೆಕ್ಟರ್ ಮೊಹಮ್ಮದ್ ಆಲಿ ನೇತೃತ್ವದ ತಂಡ ಆ್ಯಂಬುಲೆನ್ಸ್ ನಿಲ್ಲಿಸಿದೆ.
ಬಳಿಕ ವಾಹನ ಪರಿಶೀಲಿಸಿದಾಗ ಯಾವುದೇ ರೋಗಿ ಇರಲಿಲ್ಲ. ಕೊನೆಗೆ ಯಶವಂತನನ್ನು ಪರೀಕ್ಷಿಸಿದಾಗ ಮದ್ಯ ಸೇವಿಸಿರುವುದು ಕಂಡು ಬಂದಿದೆ. ಕೂಡಲೇ ಆ್ಯಂಬುಲೆನ್ಸ್ ವಶಕ್ಕೆ ಪಡೆದು, ಆರೋಪಿಗೆ ದಂಡ ವಿಧಿಸಿ ಕಳುಹಿಸಲಾಗಿದೆ ಎಂದು ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.