ಚಿಕ್ಕಮಗಳೂರು: ದೇಶವನ್ನೇ ಒಡೆಯಲು ಹೊರಟಿರುವ ಕಾಂಗ್ರೆಸ್, ನನ್ನ ತೆರಿಗೆ ನನ್ನ ಹಕ್ಕು ಎಂದು ಪ್ರತಿಭಟನೆ ಹೆಸರಲ್ಲಿ ರಾಜ್ಯದ ತೆರಿಗೆ ಹಣದಲ್ಲಿ ದೊಡ್ಡ ಜಾಹಿರಾತುಗಳನ್ನು ನೀಡಿ ದೆಹಲಿಗೆ ಪಿಕ್ನಿಕ್ ಹೋಗುತ್ತಿರುವುದು ಅಂಬೇಡ್ಕರ್ ಸಂವಿಧಾನಕ್ಕೆ ಅಪಚಾರವಾಗಿದೆ ಎಂದು ಬಿಜೆಪಿ ವಕ್ತಾರ ನಯನ ತಳವಾರ ಆರೋಪಿಸಿದ್ದಾರೆ.
ಅವರ ಹೇಳಿಕೆಯಲ್ಲಿ ತಿಳಿಸಿ ದೇಶ ಗಣರಾಜ್ಯವಾಗುವ ಸಂದರ್ಭದಲ್ಲಿ ಭಾರತ ರತ್ನ ಅಂಬೇಡ್ಕರ್ ಸಮಾಜದಲ್ಲಿ ತುಳಿತಕ್ಕೊಳಗಾಗಿರುವ ದೀನ-ದಲಿತರು, ಬಡವರಿಗೆ ಈ ದೇಶದ ಆದಾಯದಲ್ಲಿ ಸಿಂಹ ಪಾಲು ಇರಬೇಕು ಎಂದು ಮೀಸಲಾತಿ ಸೇರಿದಂತೆ ದೇಶದ ಅನುದಾನವನ್ನು ಬಡವರಿಗೆ ಹಂಚುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತಂದು ದೇಶವನ್ನು ಸದೃಡಗೊಳಿಸುವ ಕಾಯಕ ಮಾಡಿದ್ದರು ಎಂದರು.
ಆದರೆ ಕಾಂಗ್ರೆಸ್ ಪಕ್ಷ ತಾನು ಮಾಡಿದ ಭ್ರಷ್ಟಾಚಾರ ಹಾಗೂ ಆರ್ಥಿಕ ಅಶಿಸ್ತಿನ ಫಲವಾಗಿ ದಿವಾಳಿ ಅಂಚಿಗೆ ತಲುಪಿರುವ ಕರ್ನಾಟಕದ ಜನರ ಭಾವನೆಗಳನ್ನು ಕೇಂದ್ರ ರಾಜ್ಯಕ್ಕೆ ಅನುದಾನ ನೀಡುತ್ತಿಲ್ಲ ಎಂಬ ಸುಳ್ಳಿನ ಮೂಲಕ ದಾರಿ ತಪ್ಪಿಸಲು ಹೊರಟಿದ್ದು ಸಂವಿಧಾನದ ಮೂಲ ಆಶಯ ಹಸಿವು ನೀಗಿಸುವುದೇ ಅಗಿದ್ದು, ನಿಮ್ಮ ಅಶಯದಂತೆ ಅಂಬಾನಿ, ಅದಾನಿ ಕಟ್ಟಿದ ತೆರಿಗೆಯನ್ನು ಅವರಿಗೆ ವಾಪಾಸು ನೀಡಲು ಸಾದ್ಯವೆ ಎಂದು ಪ್ರಶ್ನಿಸಿದರು.
ರಾಜ್ಯಕ್ಕೆ ಅತಿ ಹೆಚ್ಚು ತೆರಿಗೆ ಸಲ್ಲಿಸುವ ಬೆಂಗಳೂರು ಹಾಗೂ ಹಳೆ ಮ್ಯೆಸೂರು ಭಾಗ ನೀಡುವ ಅನುದಾನ ಕಡಿಮೆ ಅದಾಯ ಇರುವ ಉತ್ತರ ಕರ್ನಾಟಕಕ್ಕೆ ಬಳಸುವುದು ವಾಡಿಕೆಯಾಗಿದ್ದು, ನಮ್ಮ ತೆರಿಗೆ ನಮಗೆ ಕೊಡಿ ಎನ್ನಲಾಗುವುದಿಲ್ಲ ಎಂದು ಹೇಳಿದರು.
ಅದರಂತೆ ಅತಿ ಹಿಂದುಳಿದ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ಒಡಿಸ್ಸಾ ಮುಂತಾದ ಜನಸಂಖ್ಯೆ ಹೆಚ್ಚಿರುವ ರಾಜ್ಯಗಳಿಗೆ ತಲವಾರು ಆದಾಯ ಹಂಚಿಕೆಯಲ್ಲಿ ಹೆಚ್ಚು ಹೋಗುತ್ತಿರಬಹುದು. ಕರ್ನಾಟಕದ ಆರ್ಥಿಕ ಸ್ಥಿತಿ ಗಮನಿಸಿ ಕೇಂದ್ರ ಅನೇಕ ವರ್ಷಗಳಿಂದ ಅತಿ ಹೆಚ್ಚು ಅನುದಾನವನ್ನು ನೀಡಿದ್ದರೂ ಕೂಡ ಸುಳ್ಳನ್ನೆ ದೇವರನ್ನಾಗಿಸಿ ಕೊಂಡಿರುವ ಕಾಂಗ್ರೆಸ್ ತನ್ನ ಸಂಸದ ಸುರೇಶ್ ನೇತೃತ್ವದ ದೇಶ ಒಡೆಯುವ ಕುತಂತ್ರ ಮಾರೆ ಮಾಚಲು ಹೊರಟಿರುವುದು ದುರಂತವಾಗಿದೆ ಎಂದರು.
ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಲೋಕಸಭೆಗೆ ಬರದಂತೆ ತಡೆದ ಕಾಂಗ್ರೆಸ್ ಸಂವಿಧಾನವನ್ನು ಬುಡಮೇಲು ಮಾಡುವಲ್ಲಿ ಹಿಂದೆ ಮುಂದೆ ನೋಡುವುದಿಲ್ಲ ಎಂದು ತಿಳಿಸಿದ್ದಾರೆ.