Advertisement

ಅಂಬೇಡ್ಕರ್‌ ಚಿಂತನೆಗಳು ಯುವ ಪೀಳಿಗೆಗೆ ಅಗತ್ಯ

02:39 PM Jul 21, 2017 | |

ಬಳ್ಳಾರಿ: ಸಂವಿಧಾನ ಶಿಲ್ಪಿ ಡಾ|ಬಿ.ಆರ್‌. ಅಂಬೇಡ್ಕರ್‌ ಅವರ ಚಿಂತನೆಗಳು ಯುವ ಸಮುದಾಯಕ್ಕೆ ಮನವರಿಕೆ ಮಾಡುವುದು
ಪ್ರಸ್ತುತ ಸಂದರ್ಭದ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ| ರಾಮ್‌ ಪ್ರಸಾತ್‌ ಮನೋಹರ್‌ ಹೇಳಿದರು.

Advertisement

ಸಂವಿಧಾನ ಶಿಲ್ಪಿಯ 126ನೇ ವರ್ಷಾಚರಣೆ ನಿಮಿತ್ತ ಜಿಲ್ಲಾಡಳಿತ, ಜಿಪಂ ಮತ್ತು ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಗರದ
ಬಿಡಿಎಎ ಫುಟ್ಬಾಲ್‌ ಮೈದಾನದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ “ತಮಗಿದೋ ನಮ್ಮ ಗೌರವ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ. ಅವರು ತಳ ಸಮುದಾಯದ ಅಭಿವೃದ್ಧಿಗೆ ಸಂವಿಧಾನದ ಮೂಲಕ ವಿಶೇಷ ಸವಲತ್ತುಗಳನ್ನು ಕಲ್ಪಿಸಿಕೊಟ್ಟರು ಎಂದು ಸ್ಮರಿಸಿದ ಅವರು, ಅಂಬೇಡ್ಕರ್‌ ಅವರ ಚಿಂತನೆಗಳನ್ನು ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡಬೇಕಿದೆ ಎಂದರು.

ಅಂಬೇಡ್ಕರ್‌ ಅವರು ಕೊಡುಗೆಯನ್ನು ಸ್ಮರಿಸಿ ನಮ್ಮ ರಾಜ್ಯ ಸರಕಾರ ಅವರ 126ನೇ ವರ್ಷಾಚರಣೆ ನಿಮಿತ್ತ “ತಮಗಿದೋ ನಮ್ಮ 
ಗೌರವ ನಮನ’ದ ಮೂಲಕ ಗೌರವ ಸಲ್ಲಿಸುವ ಕೆಲಸ ಮಾಡುತ್ತಿದೆ ಎಂದರು. ಜಿಪಂ ಹಂಗಾಮಿ ಅಧ್ಯಕ್ಷೆ ಪಿ.ದೀನಾ ಮಂಜುನಾಥ ಮಾತನಾಡಿ, ಅಂಬೇಡ್ಕರ್‌ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು, ಅವರು ದೇಶದಲ್ಲಿ ತಾಂಡವಾಡುತ್ತಿದ್ದ ಅಸ್ಪೃಶ್ಯತೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಪಟ್ಟ ಶ್ರಮ ಯಾರು ಮರೆಯುವಂತಿಲ್ಲ ಎಂದರು. 

ಅವರು ಸಂವಿಧಾನದ ಅಡಿ ಕಲ್ಪಿಸಿದ ಮೀಸಲಾತಿಯ ಲಾಭ ಪಡೆದು ಅನೇಕ ಸಮುದಾಯಗಳು ಅಭಿವೃದ್ಧಿಯತ್ತ ದಾಪುಗಾಲಿಡುತ್ತಿವೆ ಎಂದು ಹೇಳಿದ ಅವರು, ತಾವು ಕೂಡ ಜಿಪಂ ಉಪಾಧ್ಯಕ್ಷರಾಗಿರುವುದು  ಅಂಬೇಡ್ಕರ್‌ ಅವರು ಕಲ್ಪಿಸಿಕೊಟ್ಟ ಮೀಸಲಾತಿಯಿಂದ ಎಂದು ಸಭೆಯಲ್ಲಿ ಸ್ಮರಿಸಿದರು.

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೃಷ್ಣ, ಎಸ್ಪಿ ಆರ್‌.ಚೇತನ್‌, ಡಾ|ಬಿ. ಆರ್‌.ಅಂಬೇಡ್ಕರ್‌ ಸಂಘದ ಅಧ್ಯಕ್ಷ ಎಸ್‌. 
ಚಿದಾನಂದ, ಜಿಪಂ ಸದಸ್ಯ ಮುಂಡರಗಿ ನಾಗರಾಜ ಮತ್ತಿತರರು ಮಾತನಾಡಿದರು. ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ 
ಪ್ರಾಧ್ಯಾಪಕ ಡಾ| ಕೆ.ಆರ್‌.ದುರ್ಗಾದಾಸ್‌ ಅವರು ವಿಶೇಷ ಉಪನ್ಯಾಸ ನೀಡಿದರು. ಮೇಯರ್‌ ಜಿ.ವೆಂಕಟರಮಣ, ಕೇಂದ್ರ
ಪರಿಹಾರ ಸಮಿತಿ ಅಧ್ಯಕ್ಷ ಎ.ಮಾನಯ್ಯ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಜಿ.ಕೃಷ್ಣ, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿ ಗಳು, ವಿವಿಧ ಸಂಘಟನೆಗಳ ಮುಖಂಡರು ಇದ್ದರು. 

Advertisement

ನಂತರ ಕೆ.ಪರಶುರಾಮ್‌ ಮತ್ತು ಸಂಗಡಿಗರು, ಎಸ್‌.ಎಂ.ಹುಲುಗಪ್ಪ ಮತ್ತು ಸಂಗಡಿಗರು, ಜಿ.ಪಂಪಾಪತಿ ಮತ್ತು ಸಂಗಡಿಗರು ಹೋರಾಟ ಗೀತೆಗಳನ್ನು ಪ್ರಸ್ತುತಪಡಿಸಿದರು. ಯಲ್ಲಪ್ಪ ಮತ್ತು ಸಂಗಡಿಗರು ಮತ್ತು ಜಿ.ಆನಂದ ಸಂಗಡಿಗರು ಪ್ರಗತಿಪರ ಗೀತೆಗಳನ್ನು ಈ ಸಂದರ್ಭದಲ್ಲಿ ಪ್ರಸ್ತುತಪಡಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next