Advertisement

ಕೋಟಿ ವೆಚ್ಚದ ಅಂಬೇಡ್ಕರ್‌ ಭವನ ತಳದಲ್ಲೇ ಬಾಕಿ

09:56 PM May 19, 2019 | Team Udayavani |

ಸುಳ್ಯ: ಅಕ್ಕ ಪಕ್ಕದ ಈ ಎರಡು ವಾರ್ಡ್‌ಗಳಲ್ಲಿ ಜನರ ಬಹುಬೇಡಿಕೆಯ ಎರಡು ಸಮಸ್ಯೆಗಳು ಚುನಾವಣ ಸಂದರ್ಭ ರಾಜಕೀಯ ಪ್ರಹಸನಕ್ಕೆ ಸೀಮಿತಗೊಂಡವು ಎಂದು ಅರ್ಥೈಸಲು ಅಡ್ಡಿಯಿಲ್ಲ!

Advertisement

ವಾರ್ಡ್‌-8 ಕುರುಂಜಿಬಾಗ್‌ ವಾರ್ಡ್‌ನಲ್ಲಿ ನಗರ ಸಹಿತ ಇಡೀ ತಾಲೂಕಿಗೆ ವಿದ್ಯುತ್‌ ಹರಿಸುವ 33 ಕೆ.ವಿ. ಸಬ್‌ಸ್ಟೇಷನ್‌ 110 ಕೆ.ವಿ. ಸಬ್‌ಸ್ಟೇಷನ್‌ಗೆ ಮೇಲ್ದರ್ಜೆಗೊಳ್ಳದಿರುವುದು ಹಾಗೂ ವಾರ್ಡ್‌-6 ಬೀರಮಂಗಲ ವ್ಯಾಪ್ತಿಯಲ್ಲಿ ಕೃಷಿ ಇಲಾಖೆ ಸನಿಹದಲ್ಲಿ ಅಪೂರ್ಣ ಸ್ಥಿತಿಯಲ್ಲಿನ ಕೋಟಿ ವೆಚ್ಚದ ಅಂಬೇಡ್ಕರ್‌ ಭವನ ಕಾಮಗಾರಿ. ಹತ್ತಿಪ್ಪತ್ತು ವರ್ಷಗಳಿಂದ ಇವೆರೆಡು ಆರಂಭಿಕ ಹಂತದಿಂದ ಎದ್ದೇಳೆಲಾಗದೆ ಪ್ರಯಾಸಪಡುತ್ತಿವೆ.

ವಿದ್ಯುತ್‌ ಬಿಸಿ!
ಹಲವು ವರ್ಷಗಳಿಂದ ವಿದ್ಯುತ್‌ ಕಣ್ಣಾಮುಚ್ಚಾಲೆ ಪರಿಣಾಮ ಬೇಸಗೆ ಬಿಸಿಯಿಂದ ತತ್ತರಿಸಿದ್ದ ತಾಲೂಕಿಗೆ ವಾರ್ಡ್‌ -8 ಕುರುಂಜಿಬಾಗ್‌ ವಾರ್ಡ್‌ನಲ್ಲಿ ನಿರ್ಮಾಣಗೊಳ್ಳಬೇಕಿದ್ದ 110 ಕೆ.ವಿ. ಸಬ್‌ಸ್ಟೇಷನ್‌ ಅನುಷ್ಠಾನ ಆರಂಭದ ಹಂತದಿಂದ ಚಿಗಿತುಕೊಂಡಿಲ್ಲ. ಹದಿನೇಳು ವರ್ಷಗಳ ಹಿಂದೆ ಮಂಜೂರಾತಿಗೊಂಡಿರುವ ಈ ಯೋಜನೆ ಸರ್ವೆ ಹಂತದಿಂದ ಮೇಲೆದ್ದಿಲ್ಲ. ಅರಣ್ಯ ಸಮಸ್ಯೆ, ಆಕ್ಷೇಪ ಅರ್ಜಿ ಮೊದಲಾದ ಸವಾಲುಗಳೆನ್ನೆದುರಿಸಿದರೂ ಅಂತಿಮ ಹಂತಕ್ಕೆ ಇನ್ನೂ ತೇರ್ಗಡೆ ಹೊಂದಿಲ್ಲ.

30 ಸಾವಿರಕ್ಕೂ ಅಧಿಕ ಜನಸಂಖ್ಯೆ, ನೂರಾರು ವಾಣಿಜ್ಯ ಕಟ್ಟಡ, ಶಿಕ್ಷಣ ಸಂಸ್ಥೆ, ಸರಕಾರಿ ಕಚೇರಿ, ಬ್ಯಾಂಕ್‌, ಕೈಗಾರಿಕೆ ಮೊದಲಾದ ಸೌಲಭ್ಯ ಹೊಂದಿರುವ ನಗರದಲ್ಲಿ ದಿನವಿಡೀ ವಿದ್ಯುತ್‌ ಕಣ್ಣಾಮುಚ್ಚಾಲೆ ತಪ್ಪಿಲ್ಲ. 110 ಕೆ.ವಿ. ಸಬ್‌ಸ್ಟೇಷನ್‌ ಪೂರ್ಣಗೊಳ್ಳದಿದ್ದರೆ . ವಿದ್ಯುತ್‌ ಸಮಸ್ಯೆಗೆ ಸಿಗದು. ಇದಕ್ಕೆ ಸರಕಾರದ ಹಂತದಲ್ಲಿ ಪರಿಹಾರ ಕಂಡುಕೊಳ್ಳಲು ನಗರಾಡಳಿತ ಸಂಸ್ಥೆ ಕೂಡ ಒತ್ತಡ ಹೇರಬೇಕಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ವಿದ್ಯುತ್‌ ಎನ್ನುವುದು ಸುಳ್ಯದ ಪಾಲಿಗೆ ಮರೀಚಿಕೆ ಆದಿತು.

ಅಪೂರ್ಣ ಅಂಬೇಡ್ಕರ್‌ ಭವನ
ವಾರ್ಡ್‌-6 ಬೀರಮಂಗಿಲ ವ್ಯಾಪ್ತಿಯಲ್ಲಿ ಮೀಸಲು ಕ್ಷೇತ್ರದ ತಾಲೂಕು ಮಟ್ಟದ ಅಂಬೇಡ್ಕರ್‌ ಭವನ ಕಾಮಗಾರಿ ಪಾಳು ಬಿದ್ದ ಸ್ಥಿತಿಯಲ್ಲಿದೆ. ಎಂಟು ವರ್ಷದ ಹಿಂದೆ ಸಮಾಜ ಕಲ್ಯಾಣ ಇಲಾಖೆ ಮೂಲಕ 1 ಕೋ.ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಒಟ್ಟು 1 ಕೋಟಿ ರೂ. ಕಾಮಗಾರಿ ಪ್ರಸ್ತಾವನೆ ಮಂಜೂರಾಗಿ ಕಾರ್ಯಗತ ಆದ ಸಂದರ್ಭ ಇನ್ನಷ್ಟು ದೊಡ್ಡದಾಗಿ ಅಂಬೇಡ್ಕರ್‌ ಭವನ ವಿಸ್ತರಿಸುವ ಇರಾದೆಯೊಂದಿಗೆ ಪ್ರಸ್ತಾವನೆಯನ್ನು 3.10 ಕೋಟಿ ರೂ.ಗೆ ಏರಿಸಲಾಗಿತ್ತು. ನಿರ್ಮಾಣ ಕಾಮಗಾರಿ ಆರಂಭವಾದಾಗ ಇಲ್ಲಿನ ದಾರಿ ವಿವಾದ ವಿಚಾರ ನ್ಯಾಯಾಲಯಕ್ಕೆ ತಲುಪಿತ್ತು. ಆದಾಗ್ಯೂ ತಳಪಾಯ, ಪಿಲ್ಲರ್‌ ಕಾಮಗಾರಿ ನಡೆದಿತ್ತು. ಒಂದು ಹಂತದ ಕಾಮಗಾರಿ ಪೂರ್ಣಗೊಂಡ ಬಳಿಕ ಎರಡನೆ ಹಂತಕ್ಕೆ ಅನುದಾನ ಕೊರತೆ ಕಾಡಿತ್ತು. ಪ್ರಸ್ತುತ ಪಿಲ್ಲರ್‌ಗೆ ಬಳಸಿದ ಕಬ್ಬಿಣದ ಸರಳುಗಳು ತುಕ್ಕು ಹಿಡಿದಿವೆ.

Advertisement

ವಾರ್ಡ್‌-6 (ಬೀರಮಂಗಿಲ)
ಪುರುಷರು 394
ಮಹಿಳೆಯರು 429
ಒಟ್ಟು ಸಂಖ್ಯೆ 823
ಮತ ಕೇಂದ್ರ ಸ. ಹಿ.ಪ್ರಾ.ಶಾಲೆ ಸುಳ್ಯ
ಮೀಸಲಾತಿ ಸಾಮಾನ್ಯ

ವ್ಯಾಪ್ತಿ
ಜ್ಯೋತಿ ಸರ್ಕಲ್‌ ಬಂಗ್ಲೆಗುಡ್ಡೆ, ಬೀರಮಂಗಲ ಚರ್ಚ್‌ ರಸ್ತೆ, ಮಂಗಳೂರು ಮಡಿಕೇರಿ ಬಲಭಾಗ ಕಸ್ಬಾ ಮೂಲೆ, ಜೂನಿಯರ್‌ ಕಾಲೇಜು ಬಳಿ

ವಾರ್ಡ್‌-8 (ಕುರುಂಜಿಭಾಗ್‌)
ಪುರುಷರು 233
ಮಹಿಳೆಯರು 239
ಒಟ್ಟು ಸಂಖ್ಯೆ 472

ಮತ ಕೇಂದ್ರ
ಕೆವಿಜಿ ಆರ್ಯುವೇದಿಕ್‌ ಕಾಲೇಜು ಸುಳ್ಯ

ವ್ಯಾಪ್ತಿ
ಕುರುಂಜಿ ಭಾಗ್‌ ವಾರ್ಡ್‌ ನಡುಬೈಲು, ಅಂಬೆಟಡ್ಕ, ತಾಲೂಕು ಕಚೇರಿ, ಕುರುಂಜಿಭಾಗ್‌.

ಮೀಸಲಾತಿ ಸಾಮಾನ್ಯ ಮಹಿಳೆ

– ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next