Advertisement

ಅಂಬೇಡ್ಕರ್‌ ಕಟ್ಟೆ ಧ್ವಂಸ-ಪ್ರತಿಭಟನೆ

06:08 PM Dec 01, 2021 | Team Udayavani |

ಮೂಡಲಗಿ: ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ| ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರವಿದ್ದ ಕಟ್ಟೆಯನ್ನು ಸೋಮವಾರ ರಾತ್ರೋರಾತ್ರಿ ಧ್ವಂಸ ಮಾಡಿದ ಹಿನ್ನೆಲೆ ಮಂಗಳವಾರ ದಲಿತ ಪರ ಸಂಘಟನೆಗಳು ರಸ್ತೆ ಬಂದ್‌ ಮಾಡಿ, ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

Advertisement

ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ ಅವರಿಗೆ ಅಪಮಾನ ಮಾಡಿರುವ ಶಿವಾನಂದ ಸಿದ್ಧಪ್ಪ ಪಾಟೀಲಗೆ ಕಠಿಣ ಶಿಕ್ಷೆ ವಿಧಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಮೂಡಲಗಿ ತಹಶೀಲ್ದಾರ ಡಿ.ಜಿ.ಮಹಾತ ಅವರಿಗೆ ಮನವಿ ಸಲ್ಲಿಸಿದರು.

ದಲಿತ ಸಂಘಟನೆ ಅಧ್ಯಕ್ಷ ಸತ್ತೆಪ್ಪ ಕರವಾಡಿ ಮಾತನಾಡಿ, ಶಿವಾನಂದ ಸಿದ್ಧಪ್ಪ ಪಾಟೀಲ ಅಕ್ರಮ ವಾಣಿಜ್ಯ ಮಳಿಗೆ ನಿರ್ಮಿಸುತ್ತಿದ್ದು, ಕಟ್ಟಡದ ಮುಂದಿನ ಡಾ| ಅಂಬೇಡ್ಕರ್‌ ಭಾವಚಿತ್ರದ ಕಟ್ಟೆ ತನ್ನ ಕಟ್ಟಡಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ರಾತ್ರೋರಾತ್ರಿ ಧ್ವಂಸ ಮಾಡಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ, ಇದು ನಮಗೆಲ್ಲ ನೋವುಂಟು ಮಾಡಿದೆ.

ಆರೋಪಿಗೆ ಕಠಿಣ ಶಿಕ್ಷೆ ನೀಡಿ, ಒಂದು ತಿಂಗಳೊಳಗಾಗಿ ಆ ಅಕ್ರಮ ಕಟ್ಟಡ ತೆರವುಗೊಳಿಸಿ, ಮೊದಲಿನ ಸ್ಥಳದಲ್ಲಿ ಡಾ. ಅಂಬೇಡ್ಕರ್‌ ಮೂರ್ತಿ ಪ್ರತಿಷ್ಠಾಪಿಸಬೇಕೆಂದು ಆಗ್ರಹಿಸಿದರು. ದಲಿತ ಮುಖಂಡ ರಮೇಶ ಸಣ್ಣಕ್ಕಿ ಮಾತನಾಡಿ, ಶಿವಾನಂದ ಅವರ ಈ ಕೃತ್ಯದಿಂದ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ ಎಂದರು.

ತಹಶೀಲ್ದಾರ್‌ ಡಿ.ಜಿ ಮಹಾತ್‌ ಮಾತನಾಡಿ, ಅಂಬೇಡ್ಕರ್‌ ಅವರಿಗೆ ಅಪಮಾನವಾಗುವಂತೆ  ಮಾಡಿರುವ ಶಿವಾನಂದ ಪಾಟೀಲ್‌ ಎಂಬುವವರಿಗೆ ಕಾನೂನಿನ ರೀತಿಯಲ್ಲಿ ಶಿಕ್ಷೆ ನೀಡಲಾಗುವುದು. ಶೀಘ್ರವಾಗಿ ಅವರ ಮೇಲೆ ಎಫ್‌ಐಆರ್‌ ದಾಖಲು ಮಾಡಲಾಗುವುದು. ಮಳಿಗೆಗಳ ಜಾಗದ ಬಗ್ಗೆ ಮಾಹಿತಿ ಪಡೆದು ಅನಧಿಕೃತವಾಗಿದ್ದರೆ ತೆರವುಗೊಳಿಸಲಾಗುವುದೆಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.

Advertisement

ಅನಧಿಕೃತ ಮಳಿಗೆಯನ್ನು ಶೀಘ್ರ ತೆರವುಗೊಳಿಸಬೇಕು, ಇಲ್ಲವೆ ನಾವೇ ತೆರವುಗೊಳಿಸುತ್ತೇವೆ ಎಂದು ಪ್ರತಿಭಟನಾಕಾರರು ಮುಂದಾದಾಗ ಪೊಲೀಸ್‌ ಅಧಿಕಾರಿಗಳು ಪ್ರತಿಭಟನಾಕಾರರನ್ನು ತಡೆದು, ಕಾನೂನು ಕ್ರಮದ ಭರವಸೆ ನೀಡಿ ಮನವೊಲಿಸಿದರು. ಡಿಆರ್‌ ತುಕಡಿಯನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ.

ಪಿಡಿಓ ಗಂಗಾಧರ ಮಲ್ಹಾರಿ, ಮೂಡಲಗಿ ಪಿಎಸ್‌ಐ ಎಚ್‌ ವೈ ಬಾಲದಂಡಿ, ಕುಲಗೋಡ ಪಿಎಸ್‌ಐ ಗೋವಿಂದಗೌಡ ಪಾಟೀಲ್‌, ದಲಿತ ಮುಖಂಡರಾದ ರವೀಂದ್ರ ಸಣ್ಣಕ್ಕಿ, ಎಬಿಸಿಜರ ಕರಬನ್ನವರ, ಬಾಳೇಶ ಬನಟ್ಟಿ, ಶಾಬಪ್ಪ ಸಣ್ಣಕ್ಕಿ, ಸುರೇಶ ಸಣ್ಣಕ್ಕಿ, ಮನೋಹ ಅಜ್ಜನಕಟ್ಟಿ, ಉದ್ದಪ್ಪ ಮಾದರ, ಪರುಶುರಾಮ ಮಾದರ, ಬಸು ಮಾದರ, ಪರಶುರಾಮ ಭಜಂತ್ರಿ, ದುರ್ಗಪ್ಪ ಭಜಂತ್ರಿ, ಮದೇವ ಮಾಸನ್ನವರ, ಇತರರು ಹಾಗೂ ಪೊಲೀಸ್‌ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next