ವಾಡಿ: ಜಾತಿ ಅಸ್ಪೃಶ್ಯತೆಯಿಂದ ಕೂಡಿದ್ದ ಅಸಮಾನತೆಯ ಸಮಾಜ ಡಾ|ಬಿ. ಆರ್.ಅಂಬೇಡ್ಕರ್‌ಗೆ ಸಾಕಷ್ಟು ನೋವು ನೀಡಿದೆ. ಶಿಕ್ಷಣ ಪಡೆಯಲು ಅವರು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಅವರ ಇಡೀ ಬದುಕಿನ ಘಟನಾವಳಿಗಳು ಕಷ್ಟದ ಕಣ್ಣೀನಿಂದ ಕೂಡಿವೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್ ಅವರ 65ನೇ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಬಾಬಾಸಾಹೇಬರು ಓದುವ ಗ್ರಂಥಾಲಯವಾಗಿದ್ದರು. ಜಗತ್ತಿನ ಎಲ್ಲ ರೀತಿಯ ಸಾಹಿತ್ಯವನ್ನು ಅವರು ಅಧ್ಯಯನ ಮಾಡಿದ್ದರಿಂದಲೇ ಭಾರತಕ್ಕೆ ಸರ್ವಶ್ರೇಷ್ಠವಾದ ಸಂವಿಧಾನ ನೀಡಲು ಸಾಧ್ಯವಾಯಿತು. ಕಾನೂನು ಬರೆಯುವಾಗ ಯಾವ ಸಮುದಾಯಕ್ಕೂ ಅಂಬೇಡ್ಕರ್ ಅನ್ಯಾಯ ಮಾಡಲಿಲ್ಲ. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ತುಳಿತಕ್ಕೊಳಗಾದ ಎಲ್ಲ ಸಮುದಾಯಗಳಿಗೆ ಮೀಸಲಾತಿ ಹಕ್ಕು ಕೊಟ್ಟಿದ್ದಾರೆ ಎಂದರು.
ಬಾಬಾಸಾಹೇಬರನ್ನು ರಾಜಕೀಯ ವಾಗಿ ಸೋಲಿಸಿ ಅವಮಾನಿಸಿದ ಕಾಂಗ್ರೆಸ್ ಪಕ್ಷವನ್ನೇ ದಲಿತರು ಬೆಂಬಲಿಸುತ್ತಿರುವುದು ದುರಂತಮಯ ಬೆಳವಣಿಗೆಯಾಗಿದೆ. ಕಾಂಗ್ರೆಸ್ ಪಕ್ಷದ ವಿರುದ್ಧ ಅಂಬೇಡ್ಕರರು ಅನೇಕ ರೀತಿಯ ವ್ಯಾಖ್ಯಾನ ನೀಡಿದ್ದಾರೆ. ಆದರೂ ದಲಿತರು ಎಚ್ಚೆತ್ತುಕೊಳ್ಳದೆ ಕಾಂಗ್ರೆಸ್ ಪದಾಧಿಕಾರಿಗಳಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಶಿವರಾಮ ಪವಾರ, ಪ್ರದಾನ ಕಾರ್ಯದರ್ಶಿ ರಾಹುಲ್ ಸಿಂಧಗಿ, ಭಾಜಪ ತಾಲೂಕು ಉಪಾಧ್ಯಕ್ಷರಾದ ವೀರಣ್ಣ ಯಾರಿ, ಗಿರಿಮಲ್ಲಪ್ಪ ಕಟ್ಟಿಮನಿ, ಪುರಸಭೆ ವಿರೋಧ ಪಕ್ಷದ ನಾಯಕ ಭೀಮಶಾ ಜಿರೊಳ್ಳಿ, ಪುರಸಭೆ ಮಾಜಿ ಸದಸ್ಯ ಕಿಶನ ಜಾಧವ, ಮುಖಂಡರಾದ ವಿಠuಲ ನಾಯಕ, ಸಿದ್ಧಣ್ಣ ಕಲಶೆಟ್ಟಿ, ಪ್ರಕಾಶ ಪೂಜಾರಿ, ಆನಂದ ಇಂಗಳಗಿ, ಚಂದ್ರಶೇಖರ ಬೆಣ್ಣೂರ ಪಾಲ್ಗೊಂಡಿದ್ದರು.